Home ಇನ್ನಷ್ಟು ಕೋರ್ಟು - ಕಾನೂನು ‘ಆಹ್ವಾನ ಒಪ್ಪಿಕೊಂಡೇ ಇಲ್ಲ, ಭಾಗವಹಿಸುವ ಪ್ರಶ್ನೆಯೇ ಇಲ್ಲ’: ನಾಲ್ಸಾರ್ ಘಟಿಕೋತ್ಸವ ವಿವಾದಕ್ಕೆ ಸಿಜೆಐ ಸೂರ್ಯಕಾಂತ್ ಸ್ಪಷ್ಟನೆ

‘ಆಹ್ವಾನ ಒಪ್ಪಿಕೊಂಡೇ ಇಲ್ಲ, ಭಾಗವಹಿಸುವ ಪ್ರಶ್ನೆಯೇ ಇಲ್ಲ’: ನಾಲ್ಸಾರ್ ಘಟಿಕೋತ್ಸವ ವಿವಾದಕ್ಕೆ ಸಿಜೆಐ ಸೂರ್ಯಕಾಂತ್ ಸ್ಪಷ್ಟನೆ

0

ಹೊಸದಿಲ್ಲಿ/ಹೈದರಾಬಾದ್: ಹೈದರಾಬಾದ್‌ನ ಪ್ರತಿಷ್ಠಿತ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್ (NALSAR) ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವ ಕುರಿತ ವಿವಾದಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ತೆರೆ ಎಳೆದಿದ್ದಾರೆ. ತಾವು ಕಾರ್ಯಕ್ರಮದಲ್ಲಿ ಭಾಗವಹಿಸಲು ಎಂದಿಗೂ ಸಮ್ಮತಿ ಸೂಚಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜೋಧಪುರದಲ್ಲಿ ನಡೆದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯ ನಂತರ ಮಾತನಾಡಿದ ಸಿಜೆಐ, “ನಾಲ್ಸಾರ್ ವಿಶ್ವವಿದ್ಯಾಲಯ ನೀಡಿದ್ದ ಆಹ್ವಾನವನ್ನು ನಾನು ಒಪ್ಪಿಕೊಂಡೇ ಇರಲಿಲ್ಲ. ಹೀಗಿರುವಾಗ ನಾನು ಘಟಿಕೋತ್ಸವದಲ್ಲಿ ಭಾಗವಹಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ತಿಳಿಸಿದ್ದಾರೆ.

ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಘಟಿಕೋತ್ಸವಕ್ಕೆ ವಾಡಿಕೆಯಂತೆ ಸಿಜೆಐ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ, ಜುಲೈ 20 ರಂದು ನಡೆದ ಸಂಸತ್ ಚಲೋ ಪ್ರತಿಭಟನೆ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಸಿಜೆಐ ಅವರ ನಿಲುವುಗಳನ್ನು ವಿರೋಧಿಸಿ ನಾಲ್ಸಾರ್‌ನ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಜೆಐ ಆಗಮನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಮಧ್ಯೆ, ಸಿಜೆಐ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಕೀಲ ವೃತ್ತಿಯ ನೋಂದಣಿಯನ್ನು (ಎನ್‌ರೋಲ್‌ಮೆಂಟ್) ತಡೆಹಿಡಿಯುವುದಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಹೊರಡಿಸಿದ್ದ ಎಚ್ಚರಿಕೆಯ ಪತ್ರವು ದೇಶವ್ಯಾಪಿ ತೀವ್ರ ಟೀಕೆಗೆ ಗುರಿಯಾಗಿತ್ತು. ತೀವ್ರ ವಿರೋಧದ ಬೆನ್ನಲ್ಲೇ ಬಿಸಿಐ ತನ್ನ ಆದೇಶವನ್ನು ಹಿಂಪಡೆದುಕೊಂಡಿದ್ದು, ಇದು ಸಿಜೆಐ ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರವಾಗಿದ್ದು, ಇದರಲ್ಲಿ ಬಿಸಿಐ ಹಸ್ತಕ್ಷೇಪ ಮಾಡುವ ಅಗತ್ಯವಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ.

You cannot copy content of this page

Exit mobile version