Monday, June 17, 2024

ಸತ್ಯ | ನ್ಯಾಯ |ಧರ್ಮ

ಸಿಜೆಐ ಯುಯು ಲಲಿತ್ ಉತ್ತರಾಧಿಕಾರಿಯಾಗಿ ನ್ಯಾ.ಡಿ.ವೈ ಚಂದ್ರಚೂಡ್; ಏನಿವರ ಹಿನ್ನೆಲೆ

ಸುಪ್ರೀಂ ಕೋರ್ಟ್ ಸಿಜೆಐ ಯುಯು ಲಲಿತ್‌ ಅವರು ನವೆಂಬರ್‌ 8 ರಂದು ನಿವೃತ್ತಿಯಾಗಲಿದ್ದಾರೆ. ಈ ಸ್ಥಾನಕ್ಕೆ ಡಿವೈ ಚಂದ್ರಚೂಡ್‌ ಅವರನ್ನು ಸಿಜಿಐ ಆಗಿ ಮಾಡಲು ಖುದ್ದು ಪ್ರಸ್ತುತ ಸಿಜೆಐ ಯು ಯು ಲಲಿತ್ ಶಿಫಾರಸು ಮಾಡಿದ್ದಾರೆ. ಈ ಹಿನ್ನೆಲೆ ನವೆಂಬರ್‌ 9 ರಂದು ಸಿಜೆಐ ಆಗಿ ಡಿವೈ ಚಂದ್ರಚೂಡ್‌ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಚಂದ್ರಚೂಡ್ ಅವರ ಶಿಕ್ಷಣ

ಧನಂಜಯ ಯಶವಂತ್ ಚಂದ್ರಚೂಡ್ ಅವರು ನವೆಂಬರ್ 11, 1959 ರಂದು ಮುಂಬೈನಲ್ಲಿ ಜನಿಸಿದರು. ಅವರ ತಂದೆ ಯಶವಂತ ವಿಷ್ಣು ಚಂದ್ರಚೂಡ್ ಅವರು 16ನೇ ಸಿಜೆಐ ಆಗಿದ್ದರು. ವಿಶೇಷ ಏನೆಂದರೆ ನ್ಯಾ. ಯಶವಂತ್ ಅವರು ಅತ್ಯಂತ ದೀರ್ಘಾವಧಿ (ಫೆಬ್ರವರಿ 22, 1978 ರಿಂದ ಜುಲೈ 11, 1985)ವರೆಗೂ ಕಾರ್ಯನಿರ್ವಹಿಸಿದ್ದರು. ದೀರ್ಘಾವಧಿ ಸಿಜೆಐ ಆಗಿದ್ದ ಯಶವಂತ್ ಅವರ ಪುತ್ರ ನ್ಯಾ. ಧನಂಜಯ್ ಯಶವಂತ್ ಚಂದ್ರಚೂಡ್ ಅವರು ಕೂಡ ಈಗ ಸುಪ್ರೀಂನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಳ್ಳುತ್ತಿದ್ದಾರೆ.

ಡಿ ವೈ ಚಂದ್ರಚೂಡ್ ಅವರು ನವದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದಾರೆ. ನಂತರ 1982 ರಲ್ಲಿ ಕ್ಯಾಂಪಸ್ ಲಾ ಸೆಂಟರ್, ದೆಹಲಿ ವಿಶ್ವವಿದ್ಯಾಲಯದಿಂದ LLB ಪೂರ್ಣಗೊಳಿಸಿ, 1986 ರಲ್ಲಿ USA ನ ಹಾರ್ವರ್ಡ್ ಲಾ ಸ್ಕೂಲ್‌ನಿಂದ LLM ಪದವಿ ಮತ್ತು ನ್ಯಾಯಾಂಗ ವಿಜ್ಞಾನದಲ್ಲಿ (SJD) ಡಾಕ್ಟರೇಟ್ ಪಡೆದಿದ್ದಾರೆ.

ವೃತ್ತಿ ಜೀವನ

ಹಾರ್ವರ್ಡ್‌ನಿಂದ ಪದವಿ ಪಡೆದ ನಂತರ, ಚಂದ್ರಚೂಡ್ ಅವರು ಬಾಂಬೆ ಹೈಕೋರ್ಟ್ ಮತ್ತು ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡಿದರು. ಜೂನ್ 1998 ರಲ್ಲಿ, ಅವರು ಬಾಂಬೆ ಹೈಕೋರ್ಟ್ ನಿಂದ ಹಿರಿಯ ವಕೀಲರಾಗಿ ನೇಮಕಗೊಂಡರು. 1998 ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕಾರ್ಯನಿರ್ವಹಿಸಿದ್ದಾರೆ,. ಮಾರ್ಚ್ 2000 ರಲ್ಲಿ ಬಾಂಬೆ ಹೈಕೋರ್ಟಿನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಳ್ಳುವವರೆಗೆ ಸೇವೆ ಸಲ್ಲಿಸಿದರು. ಅಕ್ಟೋಬರ್ 2013 ರಲ್ಲಿ ಅವರು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು, ಮೇ 2016 ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಈಗ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಳ್ಳಲಿದ್ದಾರೆ.

ಗಮನಾರ್ಹ ತೀರ್ಪುಗಳು :

ಡಿವೈ ಚಂದ್ರಚೂಡ್‌ ಅವರು ಅವರು ತಮ್ಮ ಕಠಿಣ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಕೆಲವು ಗಮನಾರ್ಹ ತೀರ್ಪುಗಳನ್ನು ಬರೆದಿದ್ದಾರೆ:

ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಚಂದ್ರಚೂಡ್, ಆಧಾರ್ ಅನ್ನು ಅಸಂವಿಧಾನಿಕವಾಗಿ ಅಂಗೀಕರಿಸಲಾಗಿದೆ ಎಂದು ಏಕೈಕ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು.

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಪ್ರಕರಣದ ವಿಚಾರಣೆ ನಡೆಸಿದ ಚಂದ್ರಚೂಡ್, ‘ಶಬರಿಮಲೆ ದೇಗುಲಕ್ಕೆ 10-50 ವರ್ಷದೊಳಗಿನ ಮಹಿಳೆಯರ ಪ್ರವೇಶ ನಿರ್ಬಂಧ ಸಂವಿಧಾನ ವಿರೋಧಿ ನಡೆ’ ಎಂದು ಅಭಿಪ್ರಾಯಪಟ್ಟಿದ್ದರು.

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಕೀಲರು ಮತ್ತು ಸಾಮಾಜಿಕ ಹೋರಾಟಗಾರರನ್ನು ಬಂಧಿಸಲಾಗಿತ್ತು ಇದರ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಸೆಪ್ಟೆಂಬರ್‌ 2018ರಲ್ಲಿ ತಿರಸ್ಕರಿಸಿತ್ತು.

ಅಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಅವರ ನೇತೃತ್ವದ ಮೂವರು ಸದಸ್ಯರ ಪೀಠ ಈ ತೀರ್ಪು ನೀಡಿತ್ತು. ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಅವರು ತಮ್ಮ ಮತ್ತು ನ್ಯಾಯಮೂರ್ತಿ ಮಿಶ್ರಾ ಅವರ ಪರವಾಗಿ ಬಹುಮತದ ತೀರ್ಪು ನೀಡಿದ್ದರು. ಆದರೆ, ನ್ಯಾಯಪೀಠದ ಮೂರನೇ ನ್ಯಾಯಾಧೀಶರಾಗಿದ್ದ ನ್ಯಾ. ಚಂದ್ರಚೂಡ್ ಅವರು ತೀವ್ರ ಭಿನ್ನಾಭಿಪ್ರಾಯ ದಾಖಲಿಸಿದ್ದರು. ಪುಣೆಯಲ್ಲಿ ಅಂದು ಪೊಲೀಸರು ನಡೆಸಿದ ಪತ್ರಿಕಾಗೋಷ್ಠಿ ಉಲ್ಲೇಖಿಸಿದ್ದ ನ್ಯಾ. ಚಂದ್ರಚೂಡ್ ಅವರು, ಇದು ಮಾಹಿತಿಯನ್ನು ಸೋರಿಕೆ ಮಾಡುವ ಪ್ರಯತ್ನ ಎಂದು ಹೇಳಿದ್ದರು.

ಅಯೋಧ್ಯೆ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಚಂದ್ರಚೂಡ್ ಕೂಡ ಇದ್ದರು.

Related Articles

ಇತ್ತೀಚಿನ ಸುದ್ದಿಗಳು