Home ದೇಶ ಜ್ಞಾನೇಶ್ ಕುಮಾರ್ ಭಾರತದ ಶತ್ರು: ಎಸ್‌ಐಆರ್ ವಿವಾದದ ಬೆನ್ನಲ್ಲೇ ಚುನಾವಣಾ ಆಯೋಗದ ವಿರುದ್ಧ ಅಭಿಜೀತ್ ದೀಪ್ಕೆ...

ಜ್ಞಾನೇಶ್ ಕುಮಾರ್ ಭಾರತದ ಶತ್ರು: ಎಸ್‌ಐಆರ್ ವಿವಾದದ ಬೆನ್ನಲ್ಲೇ ಚುನಾವಣಾ ಆಯೋಗದ ವಿರುದ್ಧ ಅಭಿಜೀತ್ ದೀಪ್ಕೆ ಕಿಡಿ

0

ದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌ – SIR) ಪ್ರಕ್ರಿಯೆ ಕುರಿತು ಭಾರತೀಯ ಚುನಾವಣಾ ಆಯೋಗದ ಒಳಗೆ ಎದ್ದಿರುವ ತೀವ್ರ ಆಕ್ಷೇಪಗಳ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜ್ಞಾನೇಶ್ ಕುಮಾರ್ ಅವರನ್ನು “ಭಾರತದ ಶತ್ರು” ಎಂದು ಜರೆದಿರುವ ಅವರು, ಅವರು ಚುನಾವಣೆ ನಡೆಸುತ್ತಿಲ್ಲ ಬದಲಾಗಿ ಚುನಾವಣೆಯ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಕಟಿಸಿದ ತನಿಖಾ ವರದಿಯ ಪ್ರಕಾರ, ಮೂವರು ಚುನಾವಣಾ ಆಯುಕ್ತರ ಪೈಕಿ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳ ಅವಧಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಿರ್ಧಾರಗಳು ಹಾಗೂ ಆದೇಶಗಳ ಕುರಿತು ಕನಿಷ್ಠ 14 ಬಾರಿ ಅಧಿಕೃತ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯನ್ನು ಉಲ್ಲೇಖಿಸಿ ಮಾತನಾಡಿದ ಅಭಿಜೀತ್ ದೀಪ್ಕೆ, ಎಸ್‌ಐಆರ್ (SIR) ಎಂದರೆ ‘ಸ್ಪೆಷಲ್ ಇಂಟೆನ್ಸಿವ್ ರಿವಿಷನ್’ ಅಲ್ಲ, ಅದು ‘ಸ್ಪೆಷಲ್ ಇಂಟೆನ್ಸಿವ್ ರಿಗ್ಗಿಂಗ್’ (Special Intensive Rigging) ಎಂದು ಲೇವಡಿ ಮಾಡಿದ್ದಾರೆ.

“ವರದಿಗಳ ಪ್ರಕಾರ ಮತದಾರರ ಪಟ್ಟಿಯಿಂದ 12 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಇದು 2024ರ ಲೋಕಸಭಾ ಚುನಾವಣೆಯಲ್ಲಿದ್ದ ಸುಮಾರು 97 ಕೋಟಿ ಮತದಾರರ ಪೈಕಿ ಶೇ. 12.4 ರಷ್ಟಾಗುತ್ತದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ನಡುವಿನ ಮತಗಳ ವ್ಯತ್ಯಾಸ ಕೇವಲ ಶೇ. 2 ರಷ್ಟಿತ್ತು. ಇಂತಹ ಪರಿಸ್ಥಿತಿಯಲ್ಲಿ ಕೋಟ್ಯಂತರ ಮತದಾರರ ಹೆಸರುಗಳನ್ನು ತೆಗೆದುಹಾಕಿ ಜ್ಞಾನೇಶ್ ಕುಮಾರ್ ಅವರು ಚುನಾವಣೆಗಳನ್ನು ನಿಯಂತ್ರಿಸಲು ನೋಡುತ್ತಿದ್ದಾರೆ” ಎಂದು ದೀಪ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಬಿಹಾರದಿಂದ ಆರಂಭವಾಗಿ ದೇಶದ 30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳನ್ನು ಕಡೆಗಣಿಸಿ, ಆಯುಕ್ತರ ಒಪ್ಪಿಗೆಯಿಲ್ಲದೆ ಹಲವು ಆದೇಶಗಳನ್ನು ಹೊರಡಿಸಲಾಗಿದೆ ಎಂಬ ವರದಿಗಳು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.

You cannot copy content of this page

Exit mobile version