Home ದೇಶ 10 ಸಾವಿರ ಬಾಕಿ ಸಂಬಳಕ್ಕಾಗಿ 24 ಕೋಟಿ ಮೌಲ್ಯದ ಬಟ್ಟೆಗಳಿಗೆ ಬೆಂಕಿ: ಸೂರತ್‌ನಲ್ಲಿ ಮಾಜಿ ಉದ್ಯೋಗಿ...

10 ಸಾವಿರ ಬಾಕಿ ಸಂಬಳಕ್ಕಾಗಿ 24 ಕೋಟಿ ಮೌಲ್ಯದ ಬಟ್ಟೆಗಳಿಗೆ ಬೆಂಕಿ: ಸೂರತ್‌ನಲ್ಲಿ ಮಾಜಿ ಉದ್ಯೋಗಿ ಕೃತ್ಯ

0

ಸೂರತ್: ಗುಜರಾತ್‌ನ ಸೂರತ್ ನಗರದ ಜವಳಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ಅನಾಹುತದ ಹಿಂದೆ ಆಘಾತಕಾರಿ ಸತ್ಯ ಬಯಲಾಗಿದೆ. ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಆಕಸ್ಮಿಕ ಬೆಂಕಿ ಎಂದು ಭಾವಿಸಲಾಗಿದ್ದ ಪ್ರಕರಣವು, ದುರುದ್ದೇಶಪೂರ್ವಕವಾಗಿ ಹಚ್ಚಿದ ಬೆಂಕಿ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೇವಲ ₹10,000 ಬಾಕಿ ಸಂಬಳ ಸಿಗಲಿಲ್ಲ ಎಂಬ ಆಕ್ರೋಶಕ್ಕೆ ಮಾಜಿ ಉದ್ಯೋಗಿಯೊಬ್ಬ ಇಟ್ಟ ಬೆಂಕಿಗೆ ಸುಮಾರು ₹24 ಕೋಟಿ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ಕ್ರೈಂ ಬ್ರಾಂಚ್ ಪೊಲೀಸರು 33 ವರ್ಷದ ವಿನೋದ್ ಪಂಡಿತ್ ಸಾವ್ಲೆ ಎಂಬಾತನನ್ನು ಬಂಧಿಸಿದ್ದಾರೆ. ಸೂರತ್‌ನ ಸರೋಲಿ ಪ್ರದೇಶದಲ್ಲಿರುವ ‘ಶ್ಯಾಮ್ ಸಂಗಿನಿ ಟೆಕ್ಸ್‌ಟೈಲ್ ಮಾರ್ಕೆಟ್‌’ನಲ್ಲಿ ಸೆಪ್ಟೆಂಬರ್ 9 ರಂದು ಈ ಭಾರಿ ಅಗ್ನಿ ದುರಂತ ಸಂಭವಿಸಿತ್ತು. ಮಾರುಕಟ್ಟೆಯ ಆರನೇ ಮಹಡಿಯಲ್ಲಿ ವ್ಯಾಪಿಸಿದ ಬೆಂಕಿಯಿಂದಾಗಿ ಹಲವಾರು ಅಂಗಡಿಗಳು ಹಾಗೂ ಅಪಾರ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದ್ದ ಬಟ್ಟೆಗಳು ಹೊತ್ತಿ ಉರಿದಿದ್ದವು.

ಆರೋಪಿ ವಿನೋದ್ ಪಂಡಿತ್ ಈ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದನು. 2026ರ ಏಪ್ರಿಲ್‌ನಲ್ಲಿ ಕೆಲಸಕ್ಕೆ ಸೇರಿದ್ದ ಆತ, ಮೂರು ತಿಂಗಳು ಕೆಲಸ ಮಾಡಿ ಜೂನ್‌ನಲ್ಲಿ ಕೆಲಸ ಬಿಟ್ಟಿದ್ದನು. ಈ ವೇಳೆ ಮಾಲೀಕರಿಂದ ಆತನಿಗೆ ಸುಮಾರು ₹10,000 ಸಂಬಳ ಬರಬೇಕಿತ್ತು. ಹಣ ನೀಡುವಂತೆ ಕೇಳಿದರೂ ಮಾಲೀಕರು ಸತಾಯಿಸಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಆತ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದನು.

ಪೊಲೀಸರ ಮಾಹಿತಿ ಪ್ರಕಾರ, ಸೆಪ್ಟೆಂಬರ್ 8ರ ರಾತ್ರಿ ಮಾರುಕಟ್ಟೆ ಪ್ರವೇಶಿಸಿದ್ದ ವಿನೋದ್, ವ್ಯಾಪಾರ ಮುಗಿಸಿ ಎಲ್ಲರೂ ತೆರಳುವವರೆಗೆ ಕಾದು ಕುಳಿತಿದ್ದನು. ಮಧ್ಯರಾತ್ರಿಯ ನಂತರ ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಅಂಗಡಿಯ ಬಳಿಗೆ ತೆರಳಿ, ಅಲ್ಲಿ ದಾಸ್ತಾನು ಇರಿಸಲಾಗಿದ್ದ ಬಟ್ಟೆಯ ಪಾರ್ಸೆಲ್‌ಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದನು. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಿದ್ದ ವ್ಯಕ್ತಿಯ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪರಿಶೀಲನೆ ನಡೆಸಿದಾಗ ಅದು ವಿನೋದ್ ಎಂಬುದು ದೃಢಪಟ್ಟಿತ್ತು.

ಘಟನೆಯ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸೂರತ್‌ನಿಂದ ಪರಾರಿಯಾಗಿದ್ದ ಆರೋಪಿ, ಮೊದಲು ರಾಜಸ್ಥಾನದ ಖಾಟು ಶ್ಯಾಮ್‌ಗೆ, ನಂತರ ಅಯೋಧ್ಯೆಗೆ ತೆರಳಿದ್ದನು. ಇತ್ತೀಚೆಗೆ ಆತ ಮರಳಿ ಸೂರತ್‌ಗೆ ಆಗಮಿಸಿದ ವೇಳೆ ಕ್ರೈಂ ಬ್ರಾಂಚ್ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ₹10 ಸಾವಿರದ ಜಗಳಕ್ಕೆ ವ್ಯಾಪಾರಿಗಳು ಬರೋಬ್ಬರಿ ₹24 ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

You cannot copy content of this page

Exit mobile version