ನಮ್ಮನ್ನು ಬಂಧಿಸಲು ಸರ್ಕಾರ ಸಂಚು ರೂಪಿಸಿದೆ: ಸಿಜೆಪಿ ಮುಖಂಡ ಸೌರವ್ ದಾಸ್ ಆರೋಪ; ಅಮಿತ್ ಶಾ ವಿರುದ್ಧ ಗುಡುಗಿದ ಅಭಿಜಿತ್ ದೀಪ್ಕೆ

ದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10 ರಂದು ದೇಶವ್ಯಾಪಿ ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ, ತಮ್ಮ ಪಕ್ಷದ ಪ್ರಮುಖ ಮುಖಂಡರನ್ನು ಬಂಧಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಸೌರವ್ ದಾಸ್ ಗಂಭೀರ ಆರೋಪ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸೌರವ್ ದಾಸ್, ತಮ್ಮೊಂದಿಗೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ, ರತ್ನ ಸಿಂಗ್ ಸೇರಿದಂತೆ ಹಲವು ನಾಯಕರನ್ನು ಬಂಧಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ. “ಸರ್ಕಾರ ಇಂತಹ ಸರ್ವಾಧಿಕಾರಿ ಕ್ರಮಗಳಿಂದ ಚಳವಳಿಯನ್ನು ಹತ್ತಿಕ್ಕಬಹುದು ಎಂದು ಭಾವಿಸಿದ್ದರೆ ಅದು ದೊಡ್ಡ ಭ್ರಮೆ.

ದೇಶದ ಯುವ ಸಮುದಾಯ ಎಚ್ಚೆತ್ತುಕೊಂಡಿದೆ. ನಾವು ಜೈಲಿನಲ್ಲಿರಲಿ ಅಥವಾ ಹೊರಗಿರಲಿ, ನಾಗರಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸಬೇಕು. ಅಕ್ಟೋಬರ್ 10 ರಂದು ದೆಹಲಿಯಲ್ಲಿ ಆರಂಭವಾಗಲಿರುವ ಐತಿಹಾಸಿಕ ಜನ ಆಂದೋಲನವನ್ನು ಯಶಸ್ವಿಗೊಳಿಸಬೇಕು,” ಎಂದು ಅವರು ಕರೆ ನೀಡಿದ್ದಾರೆ.

ಸೌರವ್ ದಾಸ್ ಅವರ ಪೋಸ್ಟ್‌ ಅನ್ನು ರೀಪೋಸ್ಟ್ ಮಾಡಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೇರ ಸವಾಲು ಹಾಕಿದ್ದಾರೆ. “ಅಮಿತ್ ಶಾ ಅವರೇ, ನೀವು ಎಷ್ಟು ಜನರನ್ನು ಬಂಧಿಸುತ್ತೀರಿ? ಅಕ್ಟೋಬರ್ 10 ರಂದು ಇಡೀ ದೇಶವೇ ದೆಹಲಿಗೆ ಬರುತ್ತಿದೆ,” ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ, ಮಹಾರಾಷ್ಟ್ರದ ಪುಣೆಯಲ್ಲಿ ಎಂಪಿಎಸ್‌ಸಿ (MPSC) ಪರೀಕ್ಷಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ದೀಪ್ಕೆ, “ಪೇಪರ್ ಸೋರಿಕೆ ಪ್ರಕರಣಗಳಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಎಂಪಿಎಸ್‌ಸಿ ಅಧ್ಯಕ್ಷರು ರಾಜೀನಾಮೆ ನೀಡುವವರೆಗೂ ವಿದ್ಯಾರ್ಥಿಗಳ ಹೋರಾಟ ಮುಂದುವರಿಯಲಿದೆ,” ಎಂದರು.

ಮುಂದುವರಿದು ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ಹೊರಹಾಕಿದ ಅವರು, “ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿ ನಿಷ್ಪಕ್ಷಪಾತ ಚುನಾವಣಾ ವ್ಯವಸ್ಥೆ ಮರುಸ್ಥಾಪನೆಯಾಗದ ಹೊರತು ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೇ ಅರ್ಥವಿಲ್ಲ. ಮೋದಿ ಅಲೆಯಲ್ಲಿಯೂ ಬಿಜೆಪಿ ಗೆಲ್ಲದ ರಾಜ್ಯಗಳಲ್ಲಿ ಈಗ ಗೆಲ್ಲುತ್ತಿರುವುದಕ್ಕೆ ಜ್ಞಾನೇಶ್ ಕುಮಾರ್ ಅವರೇ ಕಾರಣ. ಅವರು ಕೆಳಗಿಳಿದ ನಂತರವೇ ಬಿಜೆಪಿಯ ನಿಜವಾದ ಸಂಖ್ಯಾಬಲ ಎಷ್ಟು ಎಂಬುದು ಬಯಲಾಗಲಿದೆ,” ಎಂದು ವಾಗ್ದಾಳಿ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು