Home ಬೆಂಗಳೂರು ಬೆಂಗಳೂರಿಗೆ ಕಾಲಿಟ್ಟ ಸಿಜೆಪಿಯ ಶಾಲೆ ಸರಿಪಡಿಸಿ ಅಭಿಯಾನ: ಸಚಿವ ಮಧು ಬಂಗಾರಪ್ಪನವರನ್ನು ಭೇಟಿಯಾಗಿ ಶಾಲೆಗಳ ದುಃಸ್ಥಿತಿ...

ಬೆಂಗಳೂರಿಗೆ ಕಾಲಿಟ್ಟ ಸಿಜೆಪಿಯ ಶಾಲೆ ಸರಿಪಡಿಸಿ ಅಭಿಯಾನ: ಸಚಿವ ಮಧು ಬಂಗಾರಪ್ಪನವರನ್ನು ಭೇಟಿಯಾಗಿ ಶಾಲೆಗಳ ದುಃಸ್ಥಿತಿ ವಿವರಿಸಿದ ಮುಖಂಡರು

0

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಶೈಕ್ಷಣಿಕ ಗುಣಮಟ್ಟದ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ‘ಕಾಕ್‌ರೋಚ್ ಜನತಾ ಪಾರ್ಟಿ’ (ಸಿಜೆಪಿ) ಆರಂಭಿಸಿರುವ ‘ಸ್ಕೂಲ್ ಥೀಕ್ ಕರೋ’ (ಶಾಲೆ ಸರಿಪಡಿಸಿ) ಅಭಿಯಾನವು ಬೆಂಗಳೂರಿಗೆ ತಲುಪಿದೆ. ಅಭಿಯಾನದ ಅಂಗವಾಗಿ ಸಿಜೆಪಿಯ ಸಹ ಸಂಚಾಲಕ ಅಶುತೋಷ್ ರಾಂಕ್ ಈ ವಾರ ಬೆಂಗಳೂರಿನ ನಾಲ್ಕು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈಗಾಗಲೇ ಮೈಸೂರು ಮತ್ತು ಕಲಬುರಗಿಯಲ್ಲಿ ಸಕ್ರಿಯವಾಗಿರುವ ಈ ಅಭಿಯಾನವನ್ನು ಇಡೀ ಕರ್ನಾಟಕದಾದ್ಯಂತ ಜನಚಳವಳಿಯಾಗಿ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಅಶುತೋಷ್ ರಾಂಕ್ ತಿಳಿಸಿದರು. ತಮ್ಮ ತಮ್ಮ ಗ್ರಾಮಗಳು ಮತ್ತು ಬಡಾವಣೆಗಳಲ್ಲಿರುವ ಶಾಲೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಸಾರ್ವಜನಿಕ ಲೆಕ್ಕಪರಿಶೋಧನೆ (ಆಡಿಟ್) ನಡೆಸುವಂತೆ ಅವರು ನಾಗರಿಕರಿಗೆ ಕರೆ ನೀಡಿದರು. ಬೆಂಗಳೂರಿನ ಶಾಲಾ ಮುಖ್ಯೋಪಾಧ್ಯಾಯರು ತಂಡವನ್ನು ಸಕಾರಾತ್ಮಕವಾಗಿ ಸ್ವಾಗತಿಸಿದ್ದು, ವರ್ತೂರಿನ ಶಾಲೆಯಲ್ಲಿ ಪರಿಶೀಲನೆ ನಡೆದ 24 ಗಂಟೆಗಳ ಒಳಗಾಗಿಯೇ ದುರಸ್ತಿ ಕಾರ್ಯಗಳು ಆರಂಭವಾಗಿವೆ ಎಂದು ಅವರು ಹೇಳಿದರು.

ಶಾಲಾ ಭೇಟಿಗಳ ಬಳಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿದ ಅಶುತೋಷ್ ರಾಂಕ್, ಶಾಲೆಗಳ ವಾಸ್ತವ ಪರಿಸ್ಥಿತಿಯ ಕುರಿತು ಮನವಿ ಸಲ್ಲಿಸಿದರು. ಕಳೆದ ಮೂರು ತಿಂಗಳಿಂದ ಬಹುತೇಕ ಶಾಲೆಗಳ ಅರ್ಧಕ್ಕಿಂತ ಹೆಚ್ಚು ಶಿಕ್ಷಕರನ್ನು ಚುನಾವಣಾ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಇದರಿಂದ ತರಗತಿಗಳಲ್ಲಿ ಬೋಧನೆಗೆ ತೀವ್ರ ಶಿಕ್ಷಕರ ಕೊರತೆ ಉಂಟಾಗಿದೆ ಎಂದು ಅವರು ಸಚಿವರ ಗಮನಕ್ಕೆ ತಂದರು.

ಇದರೊಂದಿಗೆ ಹಲವು ಶಾಲೆಗಳಲ್ಲಿ ಶೌಚಾಲಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ನೈರ್ಮಲ್ಯದ ಸಮಸ್ಯೆ ಎದುರಾಗಿರುವುದು ಹಾಗೂ ತ್ಯಾಜ್ಯ ಸಂಗ್ರಹಣೆ ದೊಡ್ಡ ಸಮಸ್ಯೆಯಾಗಿರುವುದು ಕಂಡುಬಂದಿದೆ ಎಂದು ತಿಳಿಸಿದರು. ಈ ಅಹವಾಲುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯ ಮತ್ತು ಪಾರದರ್ಶಕತೆಗಾಗಿ ಜನಸಾಮಾನ್ಯರೇ ದನಿ ಎತ್ತುವಂತೆ ಪ್ರೇರೇಪಿಸುವುದು ಈ ಅಭಿಯಾನದ ಮುಖ್ಯ ಆಶಯವಾಗಿದೆ ಎಂದು ಸಿಜೆಪಿ ತಿಳಿಸಿದೆ.

You cannot copy content of this page

Exit mobile version