Home ಬೆಂಗಳೂರು ಎಸ್‌ಐಆರ್ ನೋಟಿಸ್ ವಿಲೇವಾರಿ: ಹಿರಿಯ ನಾಗರಿಕರು, ವಿಕಲಚೇತನರ ಪರವಾಗಿ ಕುಟುಂಬದ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ...

ಎಸ್‌ಐಆರ್ ನೋಟಿಸ್ ವಿಲೇವಾರಿ: ಹಿರಿಯ ನಾಗರಿಕರು, ವಿಕಲಚೇತನರ ಪರವಾಗಿ ಕುಟುಂಬದ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಒಪ್ಪಿಗೆ

0

ಬೆಂಗಳೂರು: ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್-2026) ಪ್ರಕ್ರಿಯೆಯಡಿ ಜಾರಿಯಾದ ನೋಟಿಸ್‌ಗಳ ವಿಚಾರಣೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಮಹತ್ವದ ಸುತ್ತೋಲೆ ಹೊರಡಿಸಿದೆ. ಹಿರಿಯ ನಾಗರಿಕರು, ವಿಕಲಚೇತನರು (PwD), ಅನಾರೋಗ್ಯ ಪೀಡಿತರು ಹಾಗೂ ವಿದೇಶದಲ್ಲಿರುವ ಮತದಾರರ (Overseas Electors) ಪರವಾಗಿ ಅವರ ಕುಟುಂಬದ ವಯಸ್ಕ ಸದಸ್ಯರು ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒ) ಅಥವಾ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳ (ಎಇಆರ್‌ಒ) ಮುಂದೆ ಖುದ್ದು ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.

ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್. ಯೋಗೇಶ್ವರ ಅವರು ಹೊರಡಿಸಿರುವ ಈ ಜ್ಞಾಪನಾ ಪತ್ರದ ಪ್ರಕಾರ, ಆಯಾ ಮತದಾರರ ಪರವಾಗಿ ಹಾಜರಾಗುವ ಕುಟುಂಬಸ್ಥರು ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಅಧಿಕಾರಿಗಳಿಗೆ ಸಲ್ಲಿಸಿ ನೋಟಿಸ್‌ಗಳ ಇತ್ಯರ್ಥಕ್ಕೆ ಸಹಕರಿಸಬಹುದಾಗಿದೆ. ಇದರಿಂದಾಗಿ ಕಚೇರಿಗಳಿಗೆ ಖುದ್ದಾಗಿ ಅಲೆಯಲು ಸಾಧ್ಯವಾಗದ ಅಸಹಾಯಕ ಮತದಾರರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.

ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಬಿಬಿಎಂಪಿ ಚುನಾವಣಾ ಆಯುಕ್ತರು ಹಾಗೂ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಇಆರ್‌ಒ ಮತ್ತು ಎಇಆರ್‌ಒಗಳಿಗೆ ಈ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಇದರೊಂದಿಗೆ, ರಾಜಕೀಯ ಪಕ್ಷಗಳೊಂದಿಗೆ ವಾರಕ್ಕೊಮ್ಮೆ ನಡೆಸುವ ಸಭೆಗಳಲ್ಲಿ ನೋಟಿಸ್ ಜಾರಿ ಮತ್ತು ವಿಲೇವಾರಿ ಪ್ರಕ್ರಿಯೆಯ ವಿಧಾನಗಳನ್ನು ಸ್ಪಷ್ಟವಾಗಿ ವಿವರಿಸುವಂತೆ ಅಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಆದೇಶಿಸಿದೆ.

You cannot copy content of this page

Exit mobile version