ಸಾಂಪ್ರದಾಯಿಕ ರಾಜಕೀಯದಿಂದ ಹೊರತಾಗಿ ತಮ್ಮ ಪ್ರಭಾವವನ್ನು ವಿಸ್ತರಿಸುವುದೇ ಪಕ್ಷದ ಚಳವಳಿಯ ಮುಖ್ಯ ಉದ್ದೇಶವಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಮುಖ್ಯ ವಕ್ತಾರ ಸೌರವ್ ದಾಸ್ ಆಗಸ್ಟ್ 5 ರಂದು ತಿಳಿಸಿದ್ದಾರೆ. ಸಿಜೆಪಿ ನಾಯಕತ್ವದ ಪ್ರಕಾರ, ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಮತ್ತೊಂದು ರಾಜಕೀಯ ಪಕ್ಷವನ್ನು ರಚಿಸುವ ಬದಲು ಸಾಮಾಜಿಕ ಜಾಗೃತಿಯ ಅಗತ್ಯವಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ದಾಸ್, “ಪ್ರತಿಭಟನೆಯ ಯಶಸ್ಸಿನ ನಂತರ ಈ ಚಳವಳಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂದು ನಮ್ಮನ್ನು ಕೇಳಲಾಗಿದೆ. ನಾವೆಲ್ಲರೂ ಈ ಕುರಿತು ತಂತ್ರ ರೂಪಿಸಲು ಒಂದೆಡೆ ಸೇರಿದ್ದೇವೆ. ಇದನ್ನು ತಳಮಟ್ಟದವರೆಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದರ ಕುರಿತು ಚರ್ಚಿಸಿ ಯೋಚಿಸಲಿದ್ದೇವೆ. ಆಗಸ್ಟ್ 6 ರಂದು ನಮ್ಮ ಬಳಿ ಸ್ಪಷ್ಟ ಯೋಜನೆಯೊಂದು ರೂಪುಗೊಂಡ ನಂತರ, ನಮ್ಮ ಮುಂದಿನ ತಂತ್ರಗಾರಿಕೆಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಲಿದ್ದೇವೆ,” ಎಂದರು. ನೈಜ ಬದಲಾವಣೆಯು ತಳಮಟ್ಟದಿಂದ ಜಾಗೃತ ಪ್ರತಿರೋಧವನ್ನು ಕಟ್ಟುವುದರ ಮೇಲೆ ಅವಲಂಬಿತವಾಗಿದೆ ಎಂದು ಅವರು ಪ್ರತಿಪಾದಿಸಿದರು.
ತಮ್ಮ ಕೋರ್ ಕಮಿಟಿ ಸಭೆಯಲ್ಲಿ ಈ ಆಲೋಚನೆಯನ್ನು ವಿವರಿಸಿದ ದಾಸ್, “ಇದೊಂದು ಚಳವಳಿ. ದೇಶದಲ್ಲಿ ಹಲವು ರಾಜಕೀಯ ಪಕ್ಷಗಳಿದ್ದರೂ, ಜನರ ಸಂಕಷ್ಟಗಳಿಗೆ ಮತ್ತೊಂದು ರಾಜಕೀಯ ಪಕ್ಷ ಪರಿಹಾರವಾಗಲು ಸಾಧ್ಯವಿಲ್ಲ. ಬದಲಾಗಿ ತಳಮಟ್ಟದ ಜಾಗೃತಿಯೇ ಇದಕ್ಕೆ ಪರಿಹಾರವಾಗಿದ್ದು, ಸಿಜೆಪಿ ಅದನ್ನೇ ಮಾಡುತ್ತಿದೆ,” ಎಂದು ಹೇಳಿದರು.
ಇದೇ ವೇಳೆ, ಸಿಜೆಪಿ ವಕ್ತಾರೆ ವೈಷ್ಣವಿ ಅವರು ಭಾರತೀಯ ಜನತಾ ಪಾರ್ಟಿ ಮತ್ತು ಆರ್‌ಎಸ್‌ಎಸ್ ಇತ್ತೀಚೆಗೆ ನಡೆಸಿದ ರಾಜಕೀಯ ರ‍್ಯಾಲಿಗಳನ್ನು ಟೀಕಿಸಿದರು. ಅಧಿಕಾರಿಗಳು ಆದೇಶಗಳನ್ನು ಹೇರುವ ಬದಲು ನೈಜ ಸಂವಾದ ನಡೆಸಬೇಕು ಎಂದು ಒತ್ತಾಯಿಸಿದರು. “ಇತ್ತೀಚೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ರ‍್ಯಾಲಿಗಳನ್ನು ನಡೆಸಿದ ರೀತಿಯಲ್ಲಿ ಸಂವಾದಕ್ಕಿಂತ ಹೆಚ್ಚಾಗಿ ಹುಕುಂ ಚಲಾಯಿಸುವುದೇ ಎದ್ದು ಕಾಣುತ್ತಿತ್ತು. ಆದ್ದರಿಂದ ಅವರು ಆದೇಶ ಹೇರುವ ಬದಲು ಸಂವಾದ ನಡೆಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಮಕ್ಕಳನ್ನು ಪೀಡಿಸಬಾರದು ಎಂಬುದು ನಮ್ಮ ಆಶಯವಾಗಿದೆ. ಇಲ್ಲದಿದ್ದರೆ, ನಾವು ನಮ್ಮ ಯುವ ಚಳವಳಿಯ ಕೆಲಸವನ್ನು ಮುಂದುವರಿಸಲಿದ್ದೇವೆ,” ಎಂದು ಅವರು ಹೇಳಿದರು.
ವಿವಿಧ ರಾಜ್ಯಗಳಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳ ವೇಳೆ ಭಾರಿ ಪೊಲೀಸ್ ಪಡೆ ನಿಯೋಜನೆ ಮತ್ತು ಆಯುಧಗಳ ಬಳಕೆಯ ಇತ್ತೀಚಿನ ಘಟನೆಗಳನ್ನು ಪ್ರಸ್ತಾಪಿಸಿದ ಸಿಜೆಪಿ ವಕ್ತಾರೆ ರತ್ನಾ ಸಿಂಗ್, ಇಂತಹ ಕೃತ್ಯಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು. “ಇತ್ತೀಚೆಗೆ ಬಿಹಾರದಲ್ಲಿ ಮಕ್ಕಳು ಪ್ರತಿಭಟನೆ ನಡೆಸಿದಾಗ, ಆ ಪ್ರತಿಭಟನೆಗಳ ವೇಳೆ ಎಕೆ-47 ಬಳಸಿದ್ದನ್ನು ನಾವು ನೋಡಿದ್ದೇವೆ. ದೇಶದ ಯುವಜನರೆಲ್ಲರೂ ಇದನ್ನು ಗಮನಿಸುತ್ತಿದ್ದಾರೆ. ಪ್ರತಿಯೊಬ್ಬರೂ ನಿಮ್ಮ ಪ್ರತಿಯೊಂದು ನಡೆಯ ಮೇಲೆಯೂ ಕಣ್ಣಿಟ್ಟಿದ್ದಾರೆ ಎಂಬುದನ್ನು ಚುನಾವಣೆಗಳು ನಿರೂಪಿಸುತ್ತವೆ ಮತ್ತು ಇದರ ಪರಿಣಾಮವನ್ನು ನೀವು ಅನುಭವಿಸಬೇಕಾಗುತ್ತದೆ,” ಎಂದು ಅವರು ಎಚ್ಚರಿಸಿದರು.
ಬುಧವಾರ ನಡೆಯುವ ಸಭೆಯಲ್ಲಿ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ಪರಾಮರ್ಶೆ ನಡೆಸಲಾಗುವುದು, ಸಂಘಟನೆಯ ವಿಸ್ತರಣೆಯ ಕುರಿತು ಚರ್ಚಿಸಲಾಗುವುದು ಮತ್ತು ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಂಗಳವಾರ ಘೋಷಿಸಿದ್ದರು. ಸದ್ಯಕ್ಕೆ ಸಿಜೆಪಿಯನ್ನು ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
