ದೆಹಲಿ ವಿಶ್ವವಿದ್ಯಾಲಯ (ಡಿಯು) ವ್ಯಾಪ್ತಿಯ ಕಾಲೇಜುಗಳಲ್ಲಿ ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ದಶಕಗಳ ಪ್ರಾಬಲ್ಯಕ್ಕೆ ಭಾರೀ ಹಿನ್ನಡೆಯಾಗಿದ್ದು, ಭಾಸ್ಕರಾಚಾರ್ಯ ಕಾಲೇಜ್ ಆಫ್ ಅಪ್ಲೈಡ್ ಸೈನ್ಸಸ್‌ನಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಐತಿಹಾಸಿಕ ವಿಜಯ ಸಾಧಿಸಿದೆ. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ತೀವ್ರ ಪೈಪೋಟಿಯಲ್ಲಿ ಎಸ್‌ಎಫ್‌ಐ ಅಭ್ಯರ್ಥಿ ಆರ್ಚೀ ಬಿಸ್ವಾಸ್ ಅವರು ಎಬಿವಿಪಿ ಪ್ರತಿಸ್ಪರ್ಧಿಯನ್ನು 25 ಮತಗಳ ಅಂತರದಿಂದ ಸೋಲಿಸಿ ಜಯಭೇರಿ ಬಾರಿಸಿದ್ದಾರೆ. ಆರ್ಚೀ ಬಿಸ್ವಾಸ್ 372 ಮತಗಳನ್ನು ಪಡೆದರೆ, ಎಬಿವಿಪಿ ಅಭ್ಯರ್ಥಿ 347 ಮತಗಳನ್ನು ಪಡೆದಿದ್ದಾರೆ.
ಆರ್‌ಎಸ್‌ಎಸ್ ಬೆಂಬಲಿತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಬಲವಾಗಿರುವ ಹಾಗೂ ಪ್ರಾಂಶುಪಾಲರೇ ಈ ಹಿಂದೆ ಎಬಿವಿಪಿ ರಾಜ್ಯಾಧ್ಯಕ್ಷರಾಗಿದ್ದ ಈ ಕಾಲೇಜಿನಲ್ಲಿ ಎಸ್‌ಎಫ್‌ಐ ಈ ಬಾರಿ ಪತಾಕೆ ಹಾರಿಸಿರುವುದು ವಿಶೇಷ. ಈ ಕಾಲೇಜಿನ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಕೌನ್ಸಿಲರ್ ಹುದ್ದೆಗಳನ್ನು ಎನ್‌ಎಸ್‌ಯುಐ (NSUI) ಗೆದ್ದುಕೊಂಡಿದ್ದು, ಎಬಿವಿಪಿ ಯಾವುದೇ ಸ್ಥಾನ ಪಡೆಯಲಾಗದೆ ಮುಖಭಂಗ ಅನುಭವಿಸಿದೆ.
ಜಾಕಿರ್ ಹುಸೇನ್ ಕಾಲೇಜಿನಲ್ಲಿ ಜಂಟಿ ಕಾರ್ಯದರ್ಶಿ ಸ್ಥಾನವನ್ನು ಎಸ್‌ಎಫ್‌ಐ ಅಭ್ಯರ್ಥಿ ಜಿತೇಂದ್ರ ಕುಮಾರ್ ಗೆದ್ದುಕೊಂಡಿದ್ದಾರೆ. ಮೊದಲ ಬಾರಿಗೆ ಸ್ಪರ್ಧಿಸಿದ್ದ ಹನ್ಸ್‌ರಾಜ್ ಕಾಲೇಜಿನಲ್ಲಿ ಎಸ್‌ಎಫ್‌ಐ ತೀವ್ರ ಸ್ಪರ್ಧೆ ನೀಡಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶ್ರಿಜನ್ ಕಶ್ಯಪ್ 1,100 ಮತಗಳನ್ನು ಪಡೆದು ಗಮನ ಸೆಳೆದಿದ್ದಾರೆ. ಜೊತೆಗೆ, ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್‌ನಲ್ಲಿ ಎಸ್‌ಎಫ್‌ಐ ಬೆಂಬಲಿತ ಪ್ಯಾನೆಲ್ ಎಲ್ಲಾ ಸ್ಥಾನಗಳಲ್ಲೂ ಜಯಭೇರಿ ಬಾರಿಸಿದೆ.
ಶ್ಯಾಮ್ ಪ್ರಸಾದ್ ಮುಖರ್ಜಿ, ಕೇಶವ್ ಮಹಾವಿದ್ಯಾಲಯ, ಅದಿತಿ ಮಹಾವಿದ್ಯಾಲಯ, ಶ್ರೀ ಅರಬಿಂದೋ, ಶಿವಾಜಿ ಹಾಗೂ ರಾಮ್‌ಜಾಸ್ ಕಾಲೇಜುಗಳಲ್ಲಿ ಎಬಿವಿಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದರೂ, ಕಳೆದ ಬಾರಿಯಷ್ಟು ಸುಲಭ ಗೆಲುವು ಅದಕ್ಕೆ ದಕ್ಕಿಲ್ಲ. ಆಡಳಿತ ಯಂತ್ರದ ಪ್ರಭಾವ ಮತ್ತು ಪ್ರತಿಬಂಧಕಗಳ ನಡುವೆಯೂ ಎಸ್‌ಎಫ್‌ಐ ನೇತೃತ್ವದ ವಿದ್ಯಾರ್ಥಿ ಒಕ್ಕೂಟ ಪ್ರಬಲ ಪೈಪೋಟಿ ಒಡ್ಡಿ ಗಮನಾರ್ಹ ಸಾಧನೆ ಮಾಡಿದೆ.
