ಸಿಜೆಪಿ ಕಾರ್ಯಕರ್ತನ ತಂದೆಯ ಮೇಲೆ ಹಲ್ಲೆ, ಸಾವು: ಆರೋಪಿಗಳ ಬಂಧನಕ್ಕೆ ಕಾಕ್ರೋಚ್ ಜನತಾ ಪಾರ್ಟಿ ಆಗ್ರಹ

ಕೋಲ್ಕತ್ತಾ/ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ವಯಂಸೇವಕ ಶೇಖ್ ಅಬ್ದುಲ್ ಹಫೀಜ್ ಅವರ ತಂದೆ ಜನಾಬ್ ಮಫಿಕ್ ಹಲ್ಲೆಯಿಂದ ಸಾವನ್ನಪ್ಪಿದ ಘಟನೆಯನ್ನು ಖಂಡಿಸಿರುವ ಸಿಜೆಪಿ, ಕೃತ್ಯಕ್ಕೆ ಕಾರಣರಾದವರನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದೆ.

ಸಿಜೆಪಿಯ ‘ಸ್ಕೂಲ್ ಥೀಕ್ ಕರೋ’ (ಶಾಲೆ ಸರಿಪಡಿಸಿ) ಅಭಿಯಾನದ ಭಾಗವಾಗಿ ಸ್ಥಳೀಯ ಸರ್ಕಾರಿ ಶಾಲೆಯ ಮೂಲಸೌಕರ್ಯ ಪರಿಶೀಲನೆ ನಡೆಸಿದ್ದಕ್ಕಾಗಿ 25 ವರ್ಷದ ಹಫೀಜ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆಗಸ್ಟ್ 13 ರಂದು ಕರಿಸುಂಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಯಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದ ಹಫೀಜ್ ಅವರ ತಂದೆ ಮಫಿಕ್ ಆಗಸ್ಟ್ 15 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶಾಲೆಯ ದುಃಸ್ಥಿತಿಯನ್ನು ತೋರಿಸಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ದುಷ್ಕರ್ಮಿಗಳು ಒತ್ತಾಯಿಸಿದ್ದು, ಅದಕ್ಕೆ ಒಪ್ಪದಿದ್ದಾಗ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಹಫೀಜ್ ತಿಳಿಸಿದ್ದಾರೆ.

ನಮ್ಮ ಹೋರಾಟವನ್ನು ಬೆದರಿಕೆಗಳಿಂದ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಸ್ಪಷ್ಟಪಡಿಸಿದ್ದಾರೆ. ಉತ್ತಮ ಶಾಲೆಗಳಿಗಾಗಿ ಹೋರಾಟ ಮುಂದುವರಿಯಲಿದೆ ಎಂದಿರುವ ಅವರು, ಹಫೀಜ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಸಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ನಿಯೋಗವು ಬಂಗಾಳಕ್ಕೆ ಭೇಟಿ ನೀಡಿ ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.

ಹಲ್ಲೆಯ ಆರಂಭಿಕ ಹಂತದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಸಿಜೆಪಿ ಆರೋಪಿಸಿದ್ದು, ಇಂದಾಸ್ ಪೊಲೀಸ್ ಠಾಣೆಯು ಆರೋಪಿಗಳನ್ನು ಕೂಡಲೇ ಬಂಧಿಸಿ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಪಕ್ಷದ ಮುಖ್ಯ ವಕ್ತಾರ ಸೌರವ್ ದಾಸ್ ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು