ಮಾವೋವಾದಿಗಳು ಮತ್ತು ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವವರಿಗೆ ಮಾತ್ರ ‘ದಿಮಾಗಿ ನಕ್ಸಲ್’ ಪದ ಅನ್ವಯ: ಕಿರಣ್ ರಿಜಿಜು ಸ್ಪಷ್ಟನೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕರನ್ನು ‘ದಿಮಾಗಿ ನಕ್ಸಲರು’ ಎಂದು ಕರೆದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾನುವಾರ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಸೇರಿದಂತೆ ವಿಪಕ್ಷಗಳ ನಾಯಕರ ಟೀಕೆಗಳಿಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಪ್ರತಿಕ್ರಿಯಿಸಿರುವ ರಿಜಿಜು, “ಮಾವೋವಾದಿಗಳನ್ನು ಬೆಂಬಲಿಸಿ ಸಂವಿಧಾನವನ್ನು ತಿರಸ್ಕರಿಸುವವರು, ಪ್ರತ್ಯೇಕತಾವಾದಿಗಳ ಪರ ನಿಂತು 370ನೇ ವಿಧಿಯನ್ನು ಸಮರ್ಥಿಸುವವರು ಹಾಗೂ ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗದಿಂದ ಬೇರ್ಪಡಿಸಲು ‘ಚಿಕನ್ಸ್ ನೆಕ್’ ಕತ್ತರಿಸಬೇಕೆಂದು ಕರೆ ನೀಡುವ ದೇಶವಿರೋಧಿಗಳಿಗೆ ಮಾತ್ರ ಈ ಪದ ಅನ್ವಯಿಸುತ್ತದೆ” ಎಂದು ಹೇಳಿದ್ದಾರೆ.

80ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ದೇಶದ ಅಭಿವೃದ್ಧಿಗೆ ಅಡ್ಡಿಪಡಿಸುವ ‘ದಿಮಾಗಿ ನಕ್ಸಲರ’ ಬಗ್ಗೆ ಎಚ್ಚರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ, ಪ್ರಧಾನಿ ಹೇಳಿಕೆಯನ್ನು ಪ್ರಸ್ತಾಪಿಸಿ “ನಾನು ದಿಮಾಗಿ ನಕ್ಸಲ್ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ” ಎಂದು ಟ್ವೀಟ್ ಮಾಡಿದ್ದರು.

ಇದೇ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಖ್ಯಾತ ಚಲನಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್, ರಾಜಕೀಯ ಲೇಬಲ್ ಹಚ್ಚುವ ಬದಲು ಯುವಜನತೆಗೆ ಶಿಕ್ಷಣ, ವಿಮರ್ಶಾತ್ಮಕ ಚಿಂತನೆ ಹಾಗೂ ಅಗತ್ಯವಿದ್ದರೆ ಥೆರಪಿ ನೀಡುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು