ಜೈಪುರ: ಶಾಲೆಗಳ ಪರಿಶೀಲನೆ ಕಾರ್ಯಕ್ರಮದ ಅಂಗವಾಗಿ ಗ್ರಾಮಕ್ಕೆ ಆಗಮಿಸುತ್ತಿದ್ದ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಕಾರ್ಯಕರ್ತರನ್ನು ಗ್ರಾಮಸ್ಥರು ತಡೆದಿದ್ದಲ್ಲದೆ, ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಬಿಜೆಪಿ ಆಡಳಿತವಿರುವ ರಾಜಸ್ಥಾನದಲ್ಲಿ ಶುಕ್ರವಾರ ನಡೆದಿದೆ.
ಜೈಪುರ ಜಿಲ್ಲೆಯ ರಾಂಪುರ ಕನ್ವರ್‌ಪುರ ಗ್ರಾಮದಲ್ಲಿನ ಶಾಲೆಗಳ ಪರಿಸ್ಥಿತಿಯನ್ನು ಪರಿಶೀಲಿಸಲು ಸಿಜೆಪಿ ತಂಡವು ಬೆಳಗ್ಗೆ ಸುಮಾರು 8 ಗಂಟೆಗೆ ಬಂದಾಗ, ಗ್ರಾಮಸ್ಥರು ಅವರನ್ನು ತಡೆದು ಅಲ್ಲಿಂದ ವಾಪಸ್ ಹೋಗುವಂತೆ ಸೂಚಿಸಿದರು. ಆದರೆ ಶಾಲೆಯನ್ನು ಪರಿಶೀಲಿಸದೆ ತಾವು ಹೋಗುವುದಿಲ್ಲ ಎಂದು ಪಟ್ಟುಹಿಡಿದ ಸಿಜೆಪಿ ಮುಖಂಡರು ಶಾಲೆಯ ಹೊರಗೆ ಪ್ರತಿಭಟನೆಗೆ ಕುಳಿತರು.
ಈ ವೇಳೆ ಅವರ ಮೇಲೆ ದಾಳಿ ನಡೆಸಲಾಯಿತು. ಬಿಜೆಪಿಗೆ ಸೇರಿದ ಕೆಲವರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ, ಕಾರಿನ ಗಾಜುಗಳನ್ನು ಪುಡಿಮಾಡಿದ್ದಾರೆ, ಬಟ್ಟೆ ಹರಿದು ಹಾಕಿದ್ದಾರೆ, ತಂಡದಲ್ಲಿದ್ದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಹಲವು ಪ್ರತಿನಿಧಿಗಳು ಗಾಯಗೊಂಡಿದ್ದಾರೆ ಎಂದು ಶಾಲಾ ಪರಿಶೀಲನಾ ತಂಡದಲ್ಲಿದ್ದ ಸಿಜೆಪಿ ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ ಆರೋಪಿಸಿದ್ದಾರೆ.
ದಾಳಿಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ದಾಳಿಯಲ್ಲಿ ರಾಂಕಾ ಸೇರಿದಂತೆ ಒಟ್ಟು ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ, ಸಿಜೆಪಿ ಮುಖಂಡರ ಮೇಲೆ ದಾಳಿ ಮಾಡಿದ್ದು ಗ್ರಾಮಸ್ಥರಲ್ಲ, ಬಿಜೆಪಿ ಕಾರ್ಯಕರ್ತರು ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಆರೋಪಿಸಿದ್ದಾರೆ.
ಶಿಕ್ಷಣ ಸಚಿವರ ಆದೇಶದ ಮೇರೆಗೇ ನಮ್ಮ ಮೇಲೆ ದಾಳಿ
ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಅವರ ಆದೇಶದ ಮೇರೆಗೇ ತಮ್ಮ ಮೇಲೆ ದಾಳಿ ನಡೆದಿದೆ ಎಂದು ಸಿಜೆಪಿ ಮುಖಂಡ ರಾಂಕಾ ಆರೋಪಿಸಿದ್ದಾರೆ. ಬಿಜೆಪಿಯ ಗೂಂಡಾಗಿರಿಯನ್ನು ದೇಶದ ಜನರೆಲ್ಲರೂ ನೇರವಾಗಿ ನೋಡಿದ್ದಾರೆ ಎಂದು ಅವರು ಹೇಳಿದ್ದಾರೆ. ತಮ್ಮ ಮೇಲೆ ದಾಳಿ ಮಾಡಿದವರನ್ನು 48 ಗಂಟೆಗಳ ಒಳಗೆ ಬಂಧಿಸಬೇಕು ಮತ್ತು ಶಾಲೆಗಳನ್ನು ಪರಿಶೀಲಿಸಬಾರದು ಎಂಬ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಗಡುವು ನೀಡಿದ್ದಾರೆ.
ಶಾಲಾ ಆವರಣದಲ್ಲಿ ಜಾನುವಾರುಗಳ ಶೆಡ್ ನಿರ್ಮಿಸಲಾಗಿದ್ದು, ತಮ್ಮ ಭೇಟಿಯ ವೇಳೆ ಅದು ಎಲ್ಲಿ ಬಯಲಿಗೆ ಬರುತ್ತದೆಯೋ ಎಂಬ ಕಾರಣಕ್ಕೆ ಅದನ್ನು ನಿರ್ಮಿಸಿದ ಮದನ್ ದಿಲಾವರ್ ಅವರೇ ತಮ್ಮ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಗ್ರಾಮಸ್ಥರ ಕೆಲಸವೇ ಅಲ್ಲ, ಕೆಲ ಹೊರಗಿನವರು ಬಂದು ಪ್ರಚೋದನೆ ನೀಡಿದ್ದರಿಂದಲೇ ಈ ಹಿಂಸಾತ್ಮಕ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಸಿಜೆಪಿ ತಮ್ಮ ಗ್ರಾಮದೊಳಗೆ ಬರುವುದನ್ನು ತಡೆದಿದ್ದೇವೆಯೇ ಹೊರತು ಅವರ ಮೇಲೆ ದಾಳಿ ನಡೆಸಿಲ್ಲ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.
ಇದು ಬಿಜೆಪಿ ಗೂಂಡಾಗಳ ಕೃತ್ಯ: ದೀಪ್ಕೆ
ಸಿಜೆಪಿ ಮುಖಂಡರ ಮೇಲಿನ ದಾಳಿಯನ್ನು ಆ ಪಕ್ಷದ ಮುಖ್ಯಸ್ಥ ಅಭಿಜೀತ್ ದೀಪ್ಕೆ ತೀವ್ರವಾಗಿ ಖಂಡಿಸಿದ್ದಾರೆ. ರಾಜಸ್ಥಾನದಲ್ಲಿ ಏನು ನಡೆಯುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ಗೂಂಡಾಗಳು ಅಶುತೋಷ್ ಮತ್ತು ಇತರ ಸಿಜೆಪಿ ಕಾರ್ಯಕರ್ತರ ಪ್ರಾಣ ತೆಗೆಯಲು ಯತ್ನಿಸಿದ್ದಾರೆ ಎಂದು ಅವರು ‘ಎಕ್ಸ್’ನಲ್ಲಿ ಆರೋಪಿಸಿದ್ದಾರೆ. ಸಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿದ್ದಾಗ ಸ್ಥಳದಲ್ಲಿದ್ದ ಪೊಲೀಸರು ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ. ಆದರೆ ಅಂತಹ ಯಾವುದೇ ಘಟನೆ ನಡೆದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಬಗ್ರು ಡಿಎಸ್‌ಪಿ ಧರ್ಮೇಂದ್ರ ಶರ್ಮಾ ತಿಳಿಸಿದ್ದಾರೆ.
