Home Uncategorized ಪಿಎಂ ಕೇರ್ಸ್ | ಪ್ರಧಾನಿ ಮೋದಿ ನಂಬಿಕೆಯಿಟ್ಟು ದುಡ್ಡು ಕೊಟ್ಟ ಜನರಿಗೆ ದ್ರೋಹ ಎಸಗಿದ್ದಾರೆ: ಸಚಿವ...

ಪಿಎಂ ಕೇರ್ಸ್ | ಪ್ರಧಾನಿ ಮೋದಿ ನಂಬಿಕೆಯಿಟ್ಟು ದುಡ್ಡು ಕೊಟ್ಟ ಜನರಿಗೆ ದ್ರೋಹ ಎಸಗಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

0

ಬೆಂಗಳೂರು: ಪಿಎಂ ಕೇರ್ಸ್ (PM CARES) ನಿಧಿಯು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಅತಿ ದೊಡ್ಡ ಸಾಂಸ್ಥಿಕ ಹಗರಣ ಮತ್ತು ದೇಶದ ಜನತೆಗೆ ಎಸಗಿದ ಸಾರ್ವಜನಿಕ ನಂಬಿಕೆ ದ್ರೋಹ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಸುವ ಉದ್ದೇಶವೇ ಇಲ್ಲದಿರುವಾಗ, ತುರ್ತು ಪರಿಹಾರದ ಹೆಸರಿನಲ್ಲಿ ಮೋದಿ ಸರ್ಕಾರ ದೇಶೀಯ ಮತ್ತು ವಿದೇಶಿ ದಾನಿಗಳಿಂದ ಹಣ ಸಂಗ್ರಹಿಸುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಪಿಎಂ ಕೇರ್ಸ್ ನಿಧಿಯ 2024-25ರ ಲೆಕ್ಕಪರಿಶೋಧನಾ (ಆಡಿಟ್) ವರದಿಯನ್ನು ಉಲ್ಲೇಖಿಸಿದ ಅವರು, “ನಿಧಿಯಲ್ಲಿ ಲಭ್ಯವಿದ್ದ ಒಟ್ಟು ₹8,452 ಕೋಟಿ ಪೈಕಿ ಕೇವಲ ಶೇ. 0.01 ರಷ್ಟು ಹಣವನ್ನು ಮಾತ್ರ ವೆಚ್ಚ ಮಾಡಲಾಗಿದೆ. ಇದರ ಜೊತೆಗೆ ಅನುಷ್ಠಾನ ಸಂಸ್ಥೆಗಳಿಂದ ₹324 ಕೋಟಿ ಮರುಪಾವತಿಯಾಗಿರುವಂತಹ ಹಲವು ಅನುಮಾನಾಸ್ಪದ ನಮೂದುಗಳು ವರದಿಯಲ್ಲಿವೆ.

ಈ ಸಂಸ್ಥೆಗಳು ಯಾವುವು ಅಥವಾ ಹಣವನ್ನು ಏಕೆ ಮರುಪಾವತಿಸಲಾಯಿತು ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಇನ್ನು ಅನುಮಾನಾಸ್ಪದ ಸಂಗತಿಯೆಂದರೆ, ಹಣಕಾಸು ಹೇಳಿಕೆಗೆ ಸಂಬಂಧಿಸಿದ ವಿವರಣಾತ್ಮಕ ಟಿಪ್ಪಣಿಗಳನ್ನೇ (Notes) ಕೈಬಿಡಲಾಗಿದೆ,” ಎಂದು ಆರೋಪಿಸಿದರು.

ತುರ್ತು ಮತ್ತು ಸಂಕಷ್ಟದ ಸಂದರ್ಭಗಳನ್ನು ನಿಭಾಯಿಸುವ ಉದ್ದೇಶದಿಂದ ಈ ನಿಧಿಯನ್ನು 2020ರ ಮಾರ್ಚ್‌ನಲ್ಲಿ ಸ್ಥಾಪಿಸಲಾಗಿತ್ತು ಎಂದು ನೆನಪಿಸಿದ ಸಚಿವರು, “ಅಂದಿನಿಂದ ಭಾರತವು ಕೋವಿಡ್ ಸಾಂಕ್ರಾಮಿಕದ ದುರಂತಗಳು, ಪ್ರಮುಖ ಚಂಡಮಾರುತಗಳು, ಕೇರಳ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಭೀಕರ ಪ್ರವಾಹ ಹಾಗೂ ಪ್ರಸ್ತುತ ದೇಶದ ಹಲವೆಡೆ ತೀವ್ರ ಬರಗಾಲ ಮತ್ತು ಸಂಕಷ್ಟದ ಪರಿಸ್ಥಿತಿಗಳನ್ನು ಎದುರಿಸಿದೆ. ಜನಸಾಮಾನ್ಯರು ಸಂಕಷ್ಟದಲ್ಲಿರುವಾಗ ಪರಿಹಾರಕ್ಕಾಗಿ ಮೀಸಲಿಟ್ಟ ಹಣವನ್ನು ಬಳಸದಿರುವುದು ಅಕ್ಷಮ್ಯ ಮತ್ತು ಕಠೋರ ನಡವಳಿಕೆ,” ಎಂದು ಕಿಡಿಕಾರಿದ್ದಾರೆ.

You cannot copy content of this page

Exit mobile version