ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಮಂಗಳವಾರ ದಿಢೀರ್ ಪ್ರವಾಹ ಉಂಟಾಗಿದೆ. ಪ್ರವಾಹದ ರಭಸಕ್ಕೆ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮವೇ ಕೊಚ್ಚಿಹೋಗಿದೆ. ಈ ಘಟನೆಯಲ್ಲಿ ಐದು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.
ಗಂಗಾ ನದಿ ಪಾತ್ರದಲ್ಲಿರುವ ಖೀರಾ ಎಂಬಲ್ಲಿ ಭಾರೀ ಮಳೆಯಾಗಿದ್ದು, ಇದರಿಂದ ಪ್ರವಾಹ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಗ್ರಾಮದ ಅನೇಕ ಮನೆಗಳು ಕೊಚ್ಚಿಹೋಗಿದ್ದು, ಇನ್ನು ಕೆಲವು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಸುಮಾರು 20-25 ಹೋಟೆಲ್‌ಗಳು ಮತ್ತು ವಸತಿಗೃಹಗಳು ಕೊಚ್ಚಿಹೋಗಿವೆ ಎಂದು ಸ್ಥಳೀಯರು ವಿವರಿಸಿದ್ದಾರೆ.
ಎನ್‌ಡಿಆರ್‌ಎಫ್ ರಕ್ಷಣಾ ಸಿಬ್ಬಂದಿ ಈಗಾಗಲೇ ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಐಬೆಕ್ಸ್ ಬ್ರಿಗೇಡ್ ದಳಗಳು ಕೂಡ ಅಲ್ಲಿಗೆ ತಲುಪಿವೆ ಎಂದು ಸೇನೆ ಪ್ರಕಟಿಸಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಕುಮಾರ್ ಧಾಮಿ ಹೇಳಿದ್ದಾರೆ.
https://x.com/the_hindu/status/1952666249856700723