ದಕ್ಷಿಣ ಕನ್ನಡ: ಆಗಸ್ಟ್ 01: ಉಡುಪಿ, ಮಂಗಳೂರು ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕಡಲು ಕೊರೆತದ ಸಮಸ್ಯೆ ಇದ್ದು, ಕಡಲು ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಸೋಮೇಶ್ವರ ಬಟ್ಟಪಾಡಿಯಲ್ಲಿ ಸಮುದ್ರ ಕೊರೆತದ ವೀಕ್ಷಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಟ್ಟಪಾಡಿಯಲ್ಲಿ ಮನೆಗಳಿಗೆ ಹಾನಿಯಾಗಿವೆ. ಕಳೆದ ವರ್ಷವೂ ಕಡಲ ಕೊರೆತವಾಗಿದ್ದು, ಈ ವರ್ಷವೂ ಆಗಿದೆ. ಕಲ್ಲುಗಳನ್ನು ಹಾಕಿ ಕೇವಲ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳಲಾಗಿದೆ. ಪುನಃ ಕಡಲ ಕೊರೆತ ಉಂಟಾಗುತ್ತಲೇ ಇರುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು.
ಕಡಲು ಕೊರೆತದಿಂದ ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದರು.
ಉಡುಪಿ: ಆರೋಗ್ಯ ಸೂಚ್ಯಂಕದಲ್ಲಿ ಕುಸಿತಕ್ಕೆ ಗರಂ
೨೦೧೫ ರಲ್ಲಿ ಆರೋಗ್ಯ ಸೂಚ್ಯಂಕದಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಈಗ ೧೮ ನೇ ಸ್ಥಾನದಲ್ಲಿರುವುದಕ್ಕೆ, ತಾಯಂದಿರು ಮತ್ತು ಮಕ್ಕಳ ಸಾವಿನ ಪ್ರಮಾಣದಲ್ಲಿ ಏರಿಕೆ ಆಗಿರುವುಕ್ಕೆ ಗರಂ ಆದ ಮುಖ್ಯಮಂತ್ರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಉಡುಪಿ ಸುಶಿಕ್ಷಿತರ ಜಿಲ್ಲೆ. ಆರೋಗ್ಯ ಸೂಚ್ಯಂಕದಲ್ಲಿ ಈ ಪ್ರಮಾಣದ ಕುಸಿತ ಕಂಡಿರುವುದಕ್ಕೆ ನಿಮ್ಮ ಹೊಣೆಗಾರಿಕೆ ಇಲ್ಲವಾ ಎಂದು ಡಿಹೆಚ್ಒ ಅವರನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು ಜಿಲ್ಲೆಯನ್ನು ಮತ್ತೆ ಮೊದಲ ಸ್ಥಾನಕ್ಕೆ ತರಬೇಕು. ಇಲ್ಲದಿದ್ದರೆ ಸಸ್ಪೆಂಡ್ ಆಗಬೇಕಾಗುತ್ತದೆ ಎಂದು ಎಚ್ಚರಿಸಿದ ಬಳಿಕ ಪಕ್ಕದಲ್ಲೇ ಇದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಈ ಬಗ್ಗೆ ನಿಗಾ ವಹಿಸಿ ಸುಧಾರಣೆ ಕಾಣದಿದ್ದರೆ ಡಿಹೆಚ್ಒ ಅವರನ್ನು ಮುಲಾಜಿಲ್ಲದೆ ಸಸ್ಪೆಂಡ್ ಮಾಡಿ ಎಂದು ಸೂಚಿಸಿದರು.
ಶಿಕ್ಷಣದಲ್ಲೂ ಕುಸಿತ
ಉಡುಪಿ ಜಿಲ್ಲೆ ಶೈಕ್ಷಣಿಕ ಸೂಚ್ಯಂಕದಲ್ಲಿ 13ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಈ ಕುಸಿತ ನಿಮಗೆ ನಾಚಿಕೆ, ಬೇಸರ ತರುವುದಿಲ್ಲವೇ ಎಂದು ಪ್ರಶ್ನಿಸಿದರು. ಮುಂದಿನ ಅವಧಿ ವೇಳೆಗೆ ನಿಮ್ಮ ಮತ್ತು ಜಿಲ್ಲೆಯ ಕಾರ್ಯಕ್ಷಮತೆ ಕಾಣದಿದ್ದರೆ ನಿಮ್ಮನ್ನು ಶಾಶ್ವತವಾಗಿ ಮನೆಗೆ ಕಳಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
2 ವರ್ಷಗಳಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಸೂಚನೆ
ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ಆಗಿರುವ ಕಾಲು ಸಂಕದಿಂದ ಆಗಿರುವ ಅನಾಹುತಗಳನ್ನು ತಪ್ಪಿಸಲು ಸೇತುವೆಗಳನ್ನು ನಿರ್ಮಿಸಬೇಕು. ನರೇಗಾ ಮತ್ತು ಲೋಕೋಪಯೋಗಿ ಜಂಟಿಯಾಗಿ ಸೇತುವೆಗಳನ್ನು ನಿಮಿಸಲು ಯೋಜನೆ ಸಿದ್ದಪಡಿಸಿ ಮತ್ತು ಎರಡು ವರ್ಷಗಳಲ್ಲಿ ಸೇತುವೆ ನಿರ್ಮಾಣ ಕೆಲಸಗಳು ಮುಗಿಯುವ ರೀತಿಯಲ್ಲಿ ಕೆಲಸ ಮಾಡಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.