ಬೆಂಗಳೂರು : ವಿಧಾನಮಂಡಲ ಕಲಾಪದಲ್ಲಿ ಭಾಗವಹಿಸುವಿಕೆ ಹಾಗೂ ಸದನದಲ್ಲಿ ಹಾಜರಾತಿ ವಿಚಾರದಲ್ಲಿ ನಮಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾದರಿ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.
ಬೆಂಗಳೂರಿನ ಹೊರವಲಯದ ಕ್ಷೇಮವನದಲ್ಲಿ ಮೊದಲ ಬಾರಿಗೆ ಆಯ್ಕೆಯಾದ ನೂತನ ಶಾಸಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಮಾತನಾಡಿದ ಅವರು, ತುರ್ತು ಸಂದರ್ಭ ಹೊರತುಪಡಿಸಿ ಸದನದ ಕಲಾಪಕ್ಕೆ ಸಿದ್ದರಾಮಯ್ಯ ಸಾಹೇಬರು ಗೈರು ಆಗಿದ್ದು ಕಡಿಮೆ. ಹೀಗಾಗಿ ಅವರೇ ನಮಗೆಲ್ಲ ಮಾದರಿ ಎಂದು ಹೇಳಿದರು.
ಅಧಿವೇಶನ ಸಂದರ್ಭದಲ್ಲಿ ನಾವು ಒಂದು ದಿನ ಸದನಕ್ಕೆ ಬಾರದಿದ್ದರೆ ಏಕೆ ಬರಲಿಲ್ಲ ಎಂದು ಕೇಳುತ್ತಾರೆ. ಇದು ಸದನ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವರ ಕ್ರಿಯಾಶೀಲತೆ ಮತ್ತು ಉತ್ಸಾಹಕ್ಕೆ ಸಾಕ್ಷಿ ಎಂದು ತಿಳಿಸಿದರು.
ಕಲಿಕೆ ಎಂಬುದು ನಿರಂತರ. ಅದರಲ್ಲೂ ಶಾಸನ ರೂಪಿಸುವ ಮಹತ್ತರ ಜವಾಬ್ದಾರಿ ಹೊಂದಿರುವ ಶಾಸಕರು ಅಧ್ಯಯನ ಶೀಲರಾಗಬೇಕು. ಈ ಮೂರು ದಿನಗಳ ತರಬೇತಿ ಅತಿ ಉಪಯುಕ್ತ. ಇಂತಹ ತರಬೇತಿ ಶಿಬಿರದ ಅಗತ್ಯತೆ ಇದೆ. ಶಿಬಿರ ಆಯೋಜಿಸಿರುವ ಸ್ಪೀಕರ್ ಖಾದರ್ ಅವರಿಗೆ ನಾನು ಶಾಸಕರ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.
ಶಾಸಕರು ಏನೇ ಕೆಲಸ ಇದ್ದರೂ ಮೂರು ದಿನ ಶ್ರದ್ದೆಯಿಂದ ತರಬೇತಿಯಲ್ಲಿ ಪಾಲ್ಗೊಂಡು ಎಲ್ಲ ಹಿರಿಯರ ಮಾತು ಆಲಿಸಿ. ಇದು ನಿಮಗೆ ಮುಂದಿನ ಐದು ವರ್ಷ ಕ್ಷೇತ್ರದ ಜನರ ಸಮಸ್ಯೆ ಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು
ಮೊದಲನೇ ಬಾರಿ ಶಾಸಕರಾಗುವುದು ಸುಲಭ. ಅನುಕಂಪ, ವಿರೋಧಿ ಅಲೆ, ಹೊಸಮುಖಕ್ಕೆ ಅವಕಾಶ ಹೀಗೆ ಹಲವು ಅಂಶಗಳು ಕಾರಣವಾಗುತ್ತದೆ. ಆದರೆ ಎರಡನೇ ಬಾರಿಗೆ ಆಯ್ಕೆ ಆಗಬೇಕಾದರೆ ಜನರ ಸೇವೆ ಮಾಡಿದ್ದರಷ್ಟೇ ಗೆಲ್ಲಲು ಸಾಧ್ಯ. ಅಧಿವೇಶನ ಸಂದರ್ಭದಲ್ಲಿ ಕ್ಷೇತ್ರದ ಸಮಸ್ಯೆ ಗಳ ಬಗ್ಗೆ ಸರ್ಕಾರ ಹಾಗೂ ಸಚಿವರ ಗಮನಕ್ಕೆ ತರುವುದು ಹೇಗೆ, ಕ್ಷೇತ್ರದ ಜನರ ಧ್ವನಿಯಾಗಿ ಕೆಲಸ ಮಾಡುವುದು ಹೇಗೆ ಎಂಬ ಬಗ್ಗೆಯೂ ತರಬೇತಿ ಶಿಬಿರದಲ್ಲಿ ನಿಮಗೆ ಉಪಯುಕ್ತ ಮಾಹಿತಿ ಸಿಗಲಿದೆ. ನಿಮಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಸ್ಪೀಕರ್ ಯು. ಟಿ. ಖಾದರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್. ಕೆ. ಪಾಟೀಲ್, ವಿಧಾನ ಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಕ್ಷೇಮ ವನದ ಸುರೇಂದ್ರ ಹೆಗ್ಡೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸ್ಪೀಕರ್ ಅವರು ಜಮೀರ್ ಅಹಮದ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.