ಬೆಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಸುಮಾರು 111 ರೂಪಾಯಿಗಳಷ್ಟು ಏರಿಕೆ ಮಾಡಿರುವುದು ಜನಸಾಮಾನ್ಯರ ಮೇಲೆ ಬಿದ್ದ ನೇರ ಪೆಟ್ಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಲೆ ಏರಿಕೆಯು ಟೀ ಅಂಗಡಿಗಳು, ದರ್ಶಿನಿಗಳು, ಸಣ್ಣ ಹೋಟೆಲ್‌ಗಳು, ಬೇಕರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಆಹಾರ ಪದಾರ್ಥಗಳ ಬೆಲೆ ಏರಿಕೆಯ ಮೂಲಕ ಪ್ರತಿಯೊಂದು ಮನೆಗೂ ಹಣದುಬ್ಬರ ವ್ಯಾಪಿಸಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸೌದಿ ಕಾಂಟ್ರಾಕ್ಟ್ ಪ್ರೈಸ್ (CP) ಏರಿಕೆಯಾದ ಕಾರಣ ಎಲ್‌ಪಿಜಿ ದರ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ನೀಡುತ್ತಿರುವ ತರ್ಕವನ್ನು ಪ್ರಶ್ನಿಸಿರುವ ಮುಖ್ಯಮಂತ್ರಿಗಳು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸತತವಾಗಿ ಇಳಿಕೆಯಾಗುತ್ತಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏಕೆ ಕಡಿಮೆ ಮಾಡಿಲ್ಲ ಎಂದು ನರೇಂದ್ರ ಮೋದಿ ಅವರ ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಅಂತರಾಷ್ಟ್ರೀಯ ದರಗಳ ತರ್ಕವನ್ನು ತಮಗೆ ಬೇಕಾದಂತೆ ಆಯ್ದುಕೊಂಡು ಅನ್ವಯಿಸುವುದು ಸರಿಯಲ್ಲ ಎಂದು ಅವರು ಕಿಡಿಕಾರಿದ್ದಾರೆ.
ರಾಜ್ಯಗಳಿಗೆ ಸಲ್ಲಬೇಕಾದ ಸಂಪನ್ಮೂಲಗಳ ಹಂಚಿಕೆಯಲ್ಲೂ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ ಅವರು, ಕರ್ನಾಟಕವು ಪ್ರತಿ ವರ್ಷ ರಾಷ್ಟ್ರೀಯ ಬೊಕ್ಕಸಕ್ಕೆ ಸುಮಾರು 4.5 ರಿಂದ 5 ಲಕ್ಷ ಕೋಟಿ ರೂಪಾಯಿಗಳ ಕೊಡುಗೆ ನೀಡುತ್ತಿದೆ. ಆದರೆ ಬದಲಿಗೆ ನಮಗೆ ಸಿಗುತ್ತಿರುವುದು ಕೇವಲ 60,000 ಕೋಟಿ ರೂಪಾಯಿ ಮಾತ್ರ. ಇದು ಸಹಕಾರ ಒಕ್ಕೂಟ ವ್ಯವಸ್ಥೆಯಲ್ಲ, ಬದಲಿಗೆ ಆರ್ಥಿಕ ಅಸಮತೋಲನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರೈಲು ದರ ಏರಿಕೆ, ಜಿಎಸ್‌ಟಿ ಹೊರತಾದ ಹೆಚ್ಚುವರಿ ಸೆಸ್ ಮತ್ತು ಸರ್‌ಚಾರ್ಜ್‌ಗಳ ಮೂಲಕ ಜನರನ್ನು ಪೀಡಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ. ನರೇಗಾ (MNREGA) ಯೋಜನೆಯ ಶೇ. 40 ರಷ್ಟು ವೆಚ್ಚವನ್ನು ರಾಜ್ಯಗಳ ಮೇಲೆ ಹೊರಿಸುತ್ತಿರುವುದು ಬಡವರ ಕಲ್ಯಾಣದ ಜವಾಬ್ದಾರಿಯಿಂದ ಕೇಂದ್ರ ಸರ್ಕಾರ ನುಣುಚಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಕಾರ್ಮಿಕರನ್ನು ಹಿಸುಕಿ, ಬಡವರ ಮೇಲೆ ತೆರಿಗೆ ಹೇರಿ ಮತ್ತು ರಾಜ್ಯಗಳನ್ನು ದುರ್ಬಲಗೊಳಿಸಿ ಭಾರತವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಆರ್ಥಿಕ ಆಡಳಿತವು ನ್ಯಾಯಸಮ್ಮತವಾಗಿ ಮತ್ತು ಪಾರದರ್ಶಕವಾಗಿರಬೇಕೇ ಹೊರತು ಆಯ್ದ ಸಮರ್ಥನೆಗಳಿಂದ ಕೂಡಿರಬಾರದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
