ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ನಂತರ ಮುಖ್ಯಮಂತ್ರಿ ಪಟ್ಟಕ್ಕಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪೈಪೋಟಿ ನಡೆಸಿದ್ದು, ಈಗ ಕಾಂಗ್ರೆಸ್ ಹೈ ಕಮಾಂಡ್ ಹಾಗೂ ವರಿಷ್ಠರು ಇದಕ್ಕೆಲ್ಲ ತೆರೆ ಎಳೆದಿದ್ದಾರೆ.
ಹೌದು, ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವಿನ ಕುರ್ಚಿ ಕದನಕ್ಕೆ ಕಾಂಗ್ರೆಸ್ ವರಿಷ್ಠರು ತೆರೆ ಎಳೆದಿದ್ದು, ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿ, ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಆಯ್ಕೆ ಮಾಡಿದೆ. ಶನಿವಾರ 12 ಗಂಟೆಗೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮಧ್ಯಸ್ಥಿಕೆ ವಹಿಸಿ ಇಬ್ಬರೂ ನಾಯಕರನ್ನು ಕೂರಿಸಿಕೊಂಡು ಮಾತನಾಡುತ್ತಿದ್ದಾರೆ. ಪೂರ್ಣಾವಧಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲು, ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗುವಂತೆ ಒಪ್ಪಿಸಿದ್ದಾರೆ.
ಈ ನಿರ್ಧಾರಕ್ಕೆ ಇಬ್ಬರೂ ನಾಯಕರು ಒಪ್ಪಿಗೆ ಸೂಚಿಸಿದ್ದು, ಈ ಹಿನ್ನೆಲೆ ಇಂದು ( 18 ಮೇ ) ಸಂಜೆ 7 ಗಂಟೆಗೆ CLP ಸಭೆಯನ್ನು ಕರೆಯಲಾಗಿದೆ. ಶಾಸಕರ ಅಭಿಪ್ರಾಯ ಪಡೆಯಲಿದ್ದಾರೆ.
ಪ್ರಮಾಣವಚನ ಶನಿವಾರ ನೆರವೇರಲಿದ್ದು, ಸ್ಥಳ ನಿಗದಿಯನ್ನು ಸಭೆಯಲ್ಲೇ ತೀರ್ಮಾನ ಮಾಡಲಾಗುವುದು ಎನ್ನಲಾಗಿದೆ.
