ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಂದು ಮುಂಜಾನೆ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ʼಒಂದು ದೇಶ, ಒಂದು ಚುನಾವಣೆʼ ಸಂಬಂಧಿಸಿದ ಪ್ರಸ್ತಾವನೆಯ ವರದಿಯನ್ನು ಸಲ್ಲಿಸಿತು.
ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಸ್ತಾವನೆ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಹಳ ಸಮಯದಿಂದ ʼಒಂದು ದೇಶ, ಒಂದು ಚುನಾವಣೆʼ ಪರಿಕಲ್ಪನೆಯನ್ನು ಬೆಂಬಲಿಸುತ್ತಾ ಬಂದಿದ್ದರು. ಈ ಕುರಿತು ಕಾನೂನು ರೂಪಿಸುವುದು ಮೋದಿಯವರ ಕನಸಾಗಿದೆ.
ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯಲ್ಲಿನ ಮಾಜಿ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್. ವಿತ್ತ ಆಯೋಗದ ಮಾಜಿ ಅಧ್ಯಕ್ಷ ಎನ್ ಕೆ ಸಿಂಗ್, ಲೋಕಸಭೆಯ ಮಾಜಿ ಮಹಾ ಕಾರ್ಯದರ್ಶಿ ಸುಭಾಶ್ ಕಶ್ಯಪ್ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ರಾಮನಾಥ್ ಕೋವಿಂದ್ ಅವರ ನೇತೃತ್ವದ ಈ ಸಮಿತಿಯ ಇನ್ನುಳಿದ ಸದಸ್ಯರಾಗಿದ್ದಾರೆ. ರಾಷ್ಟ್ರಪತಿಯ ಅಂಕಿತ ಬಿದ್ದೊಡನೆ ಇದನ್ನು ಅನುಷ್ಠಾನಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಕಾನೂನು ಜಾರಿಯಾದರೆ ಈ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳ ಸಾರ್ವಭೌಮತೆಗೆ ಧಕ್ಕೆ ಆಗಬಹುದು ಎನ್ನುವ ಆರೋಪಗಳು ಕೇಳಿ ಬಂದಿವೆ.