Home Uncategorized CAA ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ: ಅಮಿತ್ ಶಾ

CAA ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ: ಅಮಿತ್ ಶಾ

0

ನವದೆಹಲಿ:  ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆಯನ್ನು) ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ಎಎನ್‌ಐ ಜೊತೆ ಮಾತನಾಡುವ ಸಂದರ್ಭದಲ್ಲಿ ‘ಸಿಎಎ ಅಸಾಂವಿಧಾನಿಕ’ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ಅವರು,  ಈ ಕಾಯ್ದೆ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಾತ್ರಿಪಡಿಸಿಕೊಳ್ಳಲು ಇರುವ ಸಾರ್ವಭೌಮ ಹಕ್ಕಾಗಿದೆ. ಸಿಎಎ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದನ್ನು ಹಿಂಪಡೆಯುವ ಅವಕಾಶವೇ ಇಲ್ಲ ಎಂದರು.

ವಿರೋಧ ಪಕ್ಷಗಳ ನಾಯಕರು ಸಂವಿಧಾನದ 14ನೇ ವಿಧಿ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಆದರೆ, ಅದರಲ್ಲಿರುವ ಎರಡು ಅನುಚ್ಛೇದಗಳನ್ನು ಮರೆತಿದ್ದಾರೆ. ಅವುಗಳಲ್ಲಿ ಸ್ಪಷ್ಟ, ಸಮಂಜಸವಾದ ವರ್ಗೀಕರಣಗಳಿವೆ. ಈ ಕಾನೂನು 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ’ ಎಂದು ಶಾ ಹೇಳಿದರು.

2024ರಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೇರಿದರೆ, ಸಿಎಎ ರದ್ದುಗೊಳಿಸುವುದಾಗಿ ವಿರೋಧ ಪಕ್ಷಗಳು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸುತ್ತಿರುವ ಸಿಎಎ ಅನ್ನು ರದ್ದುಪಡಿಸುವುದು ಅಸಾಧ್ಯ. ಇದು ಸಂಪೂರ್ಣ ಸಾಂವಿಧಾನಿಕವಾಗಿದೆ. ಸುಪ್ರೀಂ ಕೋರ್ಟ್‌ ಸಹ ಈ ಕಾನೂನು ಜಾರಿಗೆ ತಡೆ ನೀಡಿಲ್ಲ ಎಂಬುದನ್ನು ಮರೆಯಬಾರದು ಎಂದರು. ಎಂದಿದ್ದಾರೆ.

ಇದು ಜಾರಿಯಾಗಬೇಕೇ ಅಥವಾ ಬೇಡವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಉದ್ಧವ್‌ ಠಾಕ್ರೆ ಅವರನ್ನು ಕೇಳಲು ಬಯಸುತ್ತೇನೆ. ಅವರು ಅಲ್ಪಸಂಖ್ಯಾತರ ಮತಗಳನ್ನು ಬಯಸುತ್ತಿದ್ದು, ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಠಾಕ್ರೆಯವರನ್ನು ಈ ಸಂದರ್ಭದಲ್ಲಿ ಶಾ ತಿವಿದರು.

ಈ ಕಾನೂನು ‘ಮುಸ್ಲಿಂ ವಿರೋಧಿ  ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಓವೈಸಿ ಅವರ ಈ ಹೇಳಿಕೆ ಖಂಡನೀಯ, ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸುವುದರಿಂದ ಮುಸ್ಲಿಮರ ಮೇಲೆ ಧಾರ್ಮಿಕ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ. ಹಾಗೆಯೇ ರಾಷ್ಟ್ರೀಯ ಪೌರತ್ವ ನೋಂದಣಿಗೆ  ಹಾಗೂ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಕ್ಕೆ ಈ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಹೇಳಿದರು.

You cannot copy content of this page

Exit mobile version