ಬೆಂಗಳೂರು, ಮಾರ್ಚ್ 14: ಬರ ಪರಿಸ್ಥಿತಿಯಲ್ಲಿ ನೀವೆಲ್ಲರೂ ನೀರನ್ನು ಬಹಳ ಜವಾಬ್ದಾರಿಯಿಂದ ಸಮರ್ಪಕವಾಗಿ ಬಳಸಬೇಕು. ಈ ವಿಚಾರವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ವಿಧಾನಸೌಧದ ಆವರಣದಲ್ಲಿ BWSSB ವತಿಯಿಂದ ಆರಂಭಿಸಿರುವ “ನೀರು ಉಳಿಸಿ ಬೆಂಗಳೂರು ಬೆಳಸಿ” ಅಭಿಯಾನಕ್ಕೆ ಚಾಲನೆ ನೀಡಿದ ಶಿವಕುಮಾರ್ ಅವರು ಅಂತರ್ಜಲ, ಜಲಸಂರಕ್ಷಕ, ಜಲಮಿತ್ರ, ಜಲಸ್ನೇಹಿ ಆಪ್ ಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು:
“ಬೆಂಗಳೂರು ನಗರ ಈ ವರ್ಷ ಮಳೆ ಇಲ್ಲದೆ ತತ್ತರಿಸುತ್ತಿದೆ. ಬೆಂಗಳೂರಿನಲ್ಲಿ 6,900 ಕೊಳವೆ ಬಾವಿಗಳು ಬತ್ತಿದ್ದು, ಉಳಿದ 7 ಸಾವಿರ ಕೊಳವೆ ಬಾವಿಗಳು ಜೀವಂತವಾಗಿವೆ. ಹೀಗಾಗಿ ನೀರಿನ ಸಮರ್ಪಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಹೊಸ ಕೊಳವೆ ಬಾವಿ ಕೊರೆಯಲು ಅನುಮತಿ ನೀಡಬೇಕು. ಆ ಕೊಳವೆ ಬಾವಿಗಳ ನೀರನ್ನು ಸರಿಯಾಗಿ ನಿಯಂತ್ರಿಸಿ ಸದ್ಬಳಕೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.
ಇಂದು ನಾಲ್ಕು ಆಪ್ ಗಳನ್ನು ಪರಿಚಯಿಸುತ್ತಿದ್ದು, ಯಾರೇ ಹೊಸ ಕೊಳವೆಬಾವಿ ಕೊರೆಯುವಾಗ ಬಿಡಬ್ಲ್ಯೂಎಸ್ಎಸ್ ಬಿಯಿಂದ ಅನುಮತಿ ಪಡೆಯಬೇಕಾಗಿದೆ. ಇದರಲ್ಲಿ ಹೆಚ್ಚುವರಿ ನೀರನ್ನು ಸರ್ಕಾರ ಯಾರಿಗೆ ಹಂಚಿಕೆ ಮಾಡಬೇಕು ಎಂದು ತೀರ್ಮಾನಿಸಲು ಹಾಗೂ ನೀರಿನ ಸಮರ್ಪಕ ಬಳಕೆಗೆ ಈ ಆಪ್ ತರಲಾಗಿದೆ.
ಕಳೆದ ಹತ್ತು ವರ್ಷಗಳಿಂದ ನೀರಿನ ದರವನ್ನ ಏರಿಕೆ ಮಾಡಿಲ್ಲ. ನಾನು ಈ ಇಲಾಖೆ ಜವಾಬ್ದಾರಿ ವಹಿಸಿಕೊಂಡ ದಿನದಿಂದಲೇ ಬಿಡಬ್ಲ್ಯೂಎಸ್ಎಸ್ ಬಿಗೆ ಶಕ್ತಿ ತುಂಬಲು ತೀರ್ಮಾನಿಸಿದ್ದೇನೆ. ಲೋಕಸಭೆ ಚುನಾವಣೆ ನಂತರ ನಾವು ನಮ್ಮದೇ ಆದ ತೀರ್ಮಾನ ಮಾಡಲಿದ್ದೇವೆ. ದುರದೃಷ್ಟಿಯಿಂದ ನಾವು ಈ ತೀರ್ಮಾನ ಮಾಡುತ್ತೇವೆ.
ನಾವು ಬೆಂಗಳೂರಿನ ಕುಡಿಯುವ ನೀರಿಗಾಗಿ ನಮ್ಮ ನೀರು ನಮ್ಮ ಹಕ್ಕು ಹೋರಾಟ ಮಾಡಿಕೊಂಡು ಬಂದಿದ್ದೇವೆ. ನೀರನ್ನು ಉಳಿಸಿ, ಮುಂದಿನ ಪೀಳಿಗೆ ಕಣ್ಣೀರು ತಪ್ಪಿಸಲು ನಾವು ಶ್ರಮಿಸುತ್ತಿದ್ದೇವೆ. ನಾವು ಜಲ ರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳು ಹಗಲು ರಾತ್ರಿ ಬೆಂಗಳೂರಿನ ಖಾಸಗಿ ಟ್ಯಾಂಕರ್ ಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಸರ್ಕಾರದಿಂದ ರಿಯಾಯಿತಿ ದರ ನೀಗದಿ ಮಾಡಲಾಗಿದೆ. ಆಮೂಲಕ ನೀರಿನ ಪೂರೈಕೆ ಹೆಸರಲ್ಲಿ ನಡೆಯುತ್ತಿದ್ದ ದಂಧೆಗೆ ಕಡಿವಾಣ ಹಾಕಲಾಗಿದೆ.
ನಾವು ನೀರಿನ ಅಭಾವ ಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಚುನಾವಣೆ ಇದೆ ಎಂಬ ಕಾರಣಕ್ಕೆ ನೀರಿನ ಸಮಸ್ಯೆ ಬಗ್ಗೆ ಹೆಚ್ಚಿನ ಪ್ರಚಾರ ಹಾಗೂ ರಾಜಕೀಯ ಮಾಡಲಾಗುತ್ತಿದೆ. ನಾವು ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಚುನಾವಣೆ ನೀತಿ ಸಂಹಿತೆ ಏನೇ ಬರಲಿ, ಕುಡಿಯುವ ನೀರಿನ ವಿಚಾರದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಿ. ಎಲ್ಲೆಲ್ಲಿ ನೀರಿನ ಅಭಾವವಿದೆ ಅಲ್ಲಿ ನೀರನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಈ ಪರಿಸ್ಥಿತಿಯಲ್ಲಿ ನೀರಿನ ಸಮರ್ಪಕ ಬಳಕೆಗೆ ಎಲ್ಲರೂ ಎಚ್ಚರಿಕೆಯಿಂದ ಜವಾಬ್ದಾರಿ ನಿಭಾಯಿಸಬೇಕು.”