ಹೊಸದೆಹಲಿ: ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರನ್ನು ದೇಶದ ಮುಂದಿನ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ.
ಈ ಎರಡು ಹೆಸರುಗಳನ್ನು ಚುನಾವಣಾ ಆಯೋಗ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.ಇದಕ್ಕೂ ಮುನ್ನ ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಗುರುವಾರ ಈ ನಿರ್ಧಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ ಮತ್ತು ಈ ನಿರ್ಧಾರದ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದರು.
ಸಭೆಯಿಂದ ಹೊರಬಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಧೀರ್ ರಂಜನ್ ಚೌಧರಿ, ಆಯ್ಕೆ ಸಮಿತಿಯು ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರ ಹೆಸರನ್ನು ಅನುಮೋದಿಸಿದೆ ಎಂದು ಹೇಳಿದರು.
ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿ ಸಭೆಯ ನಂತರ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, “ಅವರಿಗೆ (ಸರ್ಕಾರ) ಬಹುಮತವಿದೆ (ಚುನಾವಣಾ ಆಯುಕ್ತರನ್ನು ನೇಮಿಸುವ ಸಮಿತಿಯಲ್ಲಿ) ಅವರು ಬುಧವಾರ ತಡರಾತ್ರಿ ನನಗೆ 212 ಹೆಸರುಗಳನ್ನು ನೀಡಿದ್ದರು” ಆದರೆ ಸಭೆಯ ಸಮಯದಲ್ಲಿ, ನೇಮಕಾತಿಗೆ 10 ನಿಮಿಷಗಳ ಮೊದಲು, ಆರು ಹೆಸರನ್ನು ಮಾತ್ರ ನೀಡಲಾಯಿತು. ಈ ಸಮಿತಿಯಿಂದ ಸಿಜೆಐ ಅವರನ್ನು ಕೂಡಾ ಹೊರಗಿರಿಸಲಾಗಿದೆ. ಅವರಿಗೆ ಬಹುಮತ ಇರುವ ಕಾರಣ ಅವರಿಗೆ ಬೇಕಾದವರನ್ನು ಅಧ್ಯಕ್ಷರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಇಬ್ಬರೂ ಅಧಿಕಾರಿಗಳನ್ನು ಚುನಾವಣಾ ಆಯುಕ್ತರನ್ನಾಗಿ ಮಾಡುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ತೆಗೆದುಕೊಂಡಿದೆ. ಪ್ರಧಾನಿ ಮೋದಿಯವರಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಕೂಡ ಈ ಸಮಿತಿಯಲ್ಲಿದ್ದರು. ಸಿಜೆಐ ಬದಲಿಗೆ ಕೇಂದ್ರ ಸಚಿವರೊಬ್ಬರನ್ನು ಆಯ್ಕೆ ಸಮಿತಿಗೆ ಸೇರಿಸುವ ಕಾನೂನಿನ ಬಗ್ಗೆ ಅಧೀರ್ ರಂಜನ್ ಚೌಧರಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯನ್ನೂ ಸೇರಿಸಬೇಕಿತ್ತು ಎಂದು ಅವರು ಹೇಳಿದರು. ಚುನಾವಣಾ ಆಯುಕ್ತರ ಹೆಸರನ್ನು ನಿರ್ಧರಿಸಿರುವ ಸಮಿತಿಯಲ್ಲಿ ಸರಕಾರ ಬಹುಮತ ಹೊಂದಿದೆ ಮತ್ತು ಅವರಿಗೆ ಬೇಕಾದಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಆರ್ಟಿಕಲ್ 370 ರದ್ದತಿಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳು
ಗೃಹ ಸಚಿವಾಲಯದಲ್ಲಿ ಅವರ ಅಧಿಕಾರಾವಧಿಯಲ್ಲಿ, ಜ್ಞಾನೇಶ್ ಕುಮಾರ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ಕಲ್ಪಿಸುವ 370ನೇ ವಿಧಿಯ ರದ್ದತಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿದ್ದರು.