ಚಂದ್ರಯಾನ – 3 ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಪಾದಗಳನ್ನಿಟ್ಟು ಭಾರತ ಖ್ಯಾತಿಯನ್ನು ಜಗತ್ತಿನಾದ್ಯಂತ ಪಸರಿಸಿದೆ. ಇದು ದೇಶ ಮಾತ್ರವಲ್ಲ, ನಮ್ಮ ಕರುನಾಡಿನ ಉತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಚಂದ್ರಾಯಾನ-3 ರ ರೂವಾರಿ ಇಸ್ರೋ ಸಂಸ್ಥೆ ನಮ್ಮ ಬೆಂಗಳೂರಿನಲ್ಲಿ ಇರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.
ಈ ಮಹತ್ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಜ್ಯದ ಸಿ ಎಂ ಸಿದ್ದರಾಮಯ್ಯ ಸೇರಿದಂತೆ ಇಡೀ ದೇಶವೇ ನಮ್ಮ ಇಸ್ರೋ ವಿಜ್ಞಾನಿಗಳನ್ನು ಕೊಂಡಾಡುತ್ತಿದೆ.
ಬುಧವಾರ ಸಂಜೆ 6:04ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ತನ್ನ ಪಾದಗಳನ್ನೂರುವುದನ್ನು ಕಣ್ತುಂಬಿಕೊಂಡಿದ್ದ ಸಿ ಎಂ ಸಿದ್ದರಾಮಯ್ಯ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕಚೇರಿಗೇ ಬೇಟಿ ನೀಡಿ ಹೋಗಿ ಚಂದ್ರಯಾನ್ -3 ಕ್ಕಾಗಿ ಅವಿರತ ಶ್ರಮಿಸಿರುವ ವಿಜ್ಞಾನಿಗಳನ್ನು ಬೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ನೆನ್ನೆ ಚಂದ್ರಯಾನ್ ಯಶಸ್ಸಿಗೆ ತಮ್ಮ ಹರ್ಷ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಟ್ವೀಟ್ ಮಾಡಿ… ಎಂದು ತಿಳಿಸಿದ್ದರು.
ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹಾಗೂ ಇತರ ವಿಜ್ಞಾನಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವಿಸಿದರು. ತಮ್ಮ ಕೈಯಾರೆ ಸಿಹಿ ಹಂಚಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್. ಬೋಸರಾಜು ಅವರ ಜೊತೆಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಮತ್ತು ಇತರ ವಿಜ್ಞಾನಿಗಳನ್ನು ಸರ್ಕಾರದ ವತಿಯಿಂದ ಗೌರವಿಸಲು ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಸರ್ಕಾರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಚಂದ್ರಯಾನ ನಮಗೆಲ್ಲ ಹೆಮ್ಮೆ ತರುವಂತಹ ವಿಚಾರ. ನಾನು ಕೂಡ ಬುಧವಾರ ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್ ವೀಕ್ಷಣೆ ಮಾಡಿದ್ದೇನೆ. ಖುಷಿ ಆಯ್ತು, ಬಹಳ ಹೆಮ್ಮೆ ಎನಿಸಿದೆ. ಇದೊಂದು ದೊಡ್ಡ ಸಾಧನೆ. ಹಲವು ವರ್ಷಗಳಿಂದ ವಿಜ್ಞಾನಿಗಳು ಶ್ರಮಪಡುತ್ತಿದ್ದಾರೆ. ಅಂದಾಜು 500 ವಿಜ್ಞಾನಿಗಳ ಪರಿಶ್ರಮದ ಫಲ ಇದು. ಇಸ್ರೋ ತಂಡವನ್ನು ಸನ್ಮಾನಿಸಲು ನಾವು ವಿಶೇಷ ಸಮಾರಂಭ ಮಾಡ್ತೇವೆ. ಇಸ್ರೋ ಸಾಧನೆಯಿಂದ ಇಡೀ ಜಗತ್ತು ಭಾರತದ ಕಡೆಗೆ ನೋಡುವಂಥ ಕೆಲಸವಾಗಿದೆ.
ಜಗತ್ತಿನಲ್ಲಿಯೇ ರಷ್ಯಾ, ಅಮೆರಿಕ, ಚೈನಾ ದೇಶಗಳನ್ನು ಬಿಟ್ಟರೆ ಚಂದ್ರನ ದಕ್ಷಿಣ ಭಾಗದಲ್ಲಿ ಕಾಲಿರಿಸಿರುವ ನಾಲ್ಕನೇ ದೇಶ ಭಾರತ. ನಾವೆಲ್ಲರೂ ಇಸ್ರೋ ಸಾಧನೆಯನ್ನು ಮೆಚ್ಚಿ ಅಭಿನಂದಿಸಬೇಕು ಎಂದು ಹೇಳಿದರು.
ತಮ್ಮ ಬೇಟಿಯ ನಂತರ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು “ಇವರು ಚಂದ್ರಯಾನ-3 ಯೋಜನೆಯ ಯಶಸ್ಸಿನ ಹಿಂದಿರುವ ಶಕ್ತಿಗಳು. ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರದ ಮೇಲೆ ಇಳಿದ ಕ್ಷಣದಿಂದ ಇಡೀ ವಿಶ್ವವೇ ಇವರ ಸಾಧನೆಯನ್ನು ಕೊಂಡಾಡುತ್ತಿದೆ. ಇಡೀ ವಿಶ್ವವೇ ಗುರುತಿಸಿ ಕೊಂಡಾಡುತ್ತಿರುವ ಇಸ್ರೋ ಸಂಸ್ಥೆ ನಮ್ಮ ಕರ್ನಾಟಕದ ನೆಲದಲ್ಲಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿರುವ ಇಸ್ರೋ ಮುಂದಿನ ದಿನಗಳಲ್ಲಿ ಮಾನವ ಸಹಿತ ಚಂದ್ರಯಾನ ಹಾಗೂ ಸೌರಗ್ರಹ ಯಾನಗಳನ್ನೂ ಸಾಧಿಸಿ ಭಾರತೀಯರ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಹಾರೈಸುತ್ತೇನೆ.” ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳ ಸರಳತೆಗೆ ಬೆರಗಾದ ಸಿದ್ದರಾಮಯ್ಯ ಅವರೊಂದಿಗೆ ಎಲ್ಲಾ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಸಂಭ್ರಮದಿಂದ ಫೋಟೋ ತೆಗೆಸಿಕೊಂಡರು. ರಾಜ್ಯದ ಮುಖ್ಯಮಂತ್ರಿ ತಮ್ಮ ಬಳಿ ಬಂದು ಮೆಚ್ಚುಗೆ ಸೂಚಿಸಿದ್ದಕ್ಕೆ ಅವರಿಗಾದ ಸಂತಸವನ್ನು ಅವರ ನಗುಮುಖಗಳೇ ಹೇಳುತ್ತಿದ್ದವು.