Wednesday, August 28, 2024

ಸತ್ಯ | ನ್ಯಾಯ |ಧರ್ಮ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ತಂದೆಯ ನೆರಳಿನಿಂದ ಹೊರಬಂದು ಸ್ವಂತ ಆಲೋಚನೆಗಳನ್ನು ಬೆಳೆಸಿಕೊಂಡರು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಆಗಸ್ಟ್ 28: ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರು ಕುವೆಂಪು ಅವರ ಚಿಂತನೆ ಹಾಗೂ ನೆರಳಿನಿಂದ ಹೊರಬಂದು ಅವರದ್ದೇ ಚಿಂತನೆಗಳನ್ನು ರೂಢಿಸಿಕೊಂಡ ವಿಶಿಷ್ಟ ಹಾಗೂ ಅದ್ಭುತ ಸಾಹಿತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಗೃಹ ಕಚೇರಿ ಕೃಷ್ಣಾ ದಲ್ಲಿ ಮುನಿಸ್ವಾಮಿ ಅಂಡ್ ಸನ್ಸ್ , ಎಂ.ಚಂದ್ರಶೇಖರ್ ಪ್ರತಿಷ್ಠಾನ ಬೆಂಗಳೂರು ಹಾಗೂ ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ‘ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು’ – ಹದಿನಾಲ್ಕು ಸಂಪುಟಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ವಿಭಿನ್ನ ಚಿಂತಕ

ಕುವೆಂಪು ಅವರು ಒಬ್ಬ ಮಹಾನ್ ಕವಿಯಾದರೂ ತೇಜಸ್ವಿಯವರು ಅವರದ್ದೇ ವಿಭಿನ್ನ ಆಲೋಚನೆಗಳನ್ನು ಬೆಳೆಸಿಕೊಂಡು ಒಬ್ಬ ಪರಿಸರವಾದಿ, ಸಾಹಿತಿಯಾಗಿ ಬೆಳೆದರು.
ತೇಜಸ್ವಿಯವರೊಂದಿಗಿನ ತಮ್ಮ ಹಲವು ವರ್ಷಗಳ ಸಂಬಂಧವನ್ನು ಮೆಲಕು ಹಾಕಿದ ಮುಖ್ಯಮಂತ್ರಿಗಳು ರಾಮದಾಸ್ ಎಂಬ ಕನ್ನಡ ಪ್ರಾಧ್ಯಾಪಕರಿಗೆ ಸ್ನೇಹಿತರಾಗಿದ್ದ ತೇಜಸ್ವಿಯವರು ಮೈಸೂರಿಗೆ ಬಂದಾಗ ರಾಮದಾಸ್ ಅವರ ಮನೆಯಲ್ಲಿ ಭೇಟಿ ಮಾಡುತ್ತಿದ್ದ ದಿನಗಳನ್ನು ಸ್ಮರಿಸಿದರು.

ಸಾಮಾಜಿಕ ಬದಲಾವಣೆ ಬಗ್ಗೆ ಕಾಳಜಿ

ತೇಜಸ್ವಿಯವರು ಸಾಹಿತಿಯಾಗಿ ಮಾತನಾಡುವುಕ್ಕಿಂತಲೂ ಸಮಾಜದ ಬದಲಾವಣೆಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಅವರಲ್ಲಿ ಹೊಸ ಚಿಂತನೆಗಳಿದ್ದವು. ಸ್ನೇಹಜೀವಿ ಹಾಗೂ ಸ್ನೇಹಿತರ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿದ್ದರು. ತೇಜಸ್ವಿ ಅವರ ಮಾತುಗಳನ್ನು ಕೇಳಲು ನಾನು ಬಹಳ ಉತ್ಸುಕನಾಗಿರುತ್ತಿದ್ದೆ ಎಂದರು.

ತೇಜಸ್ವಿ ಅವರ ತೋಟದಲ್ಲಿ ಉಳಿಯಬೇಕು ಎಂದು ನನಗೆ ಬಹಳ ಸಾರಿ ಕೇಳಿದ್ದರು. ಆದರೆ ಉಳಿದುಕೊಳ್ಳುವ ಸಂದರ್ಭ ಒದಗಿ ಬರಲಿಲ್ಲ ಎಂದು ತಿಳಿಸಿದರು.

ಸಮಯ ದೊರೆತಾಗ ಪುಸ್ತಕ ಓದುವೆ

ತೇಜಸ್ವಿ ಕನ್ನಡನಾಡು ಕಂಡ ಅದ್ಭುತ ಲೇಖಕ. ಅವರ ಕೃತಿ ಜಗತ್ತು ಪುಸ್ತಕಗಳನ್ನು 14 ಸಂಪುಟಗಳಲ್ಲಿ ಶಿವಾರೆಡ್ಡಿಯವರ ಸಂಪಾದಕತ್ವದಲ್ಲಿ ಇಂದು ಲೋಕಾರ್ಪಣೆ ಮಾಡಲಾಗಿದೆ. ಸಮಯ ದೊರೆತಾಗ ಪುಸ್ತಕಗಳನ್ನು ಓದಲು ಪ್ರಯತ್ನ ಮಾಡಲಾಗುವುದು ಎಂದರು.

ಕೃತಿಗಳನ್ನು ಹೊರತರುವಲ್ಲಿ ಉತ್ತಮ ಕೆಲಸ ಮಾಡಲಾಗಿದೆ. ಕೃತಿಗಳನ್ನು ಸಂಪಾದಿಸಲು ಕೂಡ ಅಪಾರವಾದ ಕೆಲಸ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರ ಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಪ್ರೊ.ರವಿವರ್ಮ ಕುಮಾರ್. ಈ ಸಂದರ್ಭದಲ್ಲಿ ಮಾತನಾಡಿದರು.

ಕುವೆಂಪು ವಿಚಾರ ವೇದಿಕೆಯ ಅಧ್ಯಕ್ಷ ಎಂ.ಸಿ ನರೇಂದ್ರ, ತೇಜಸ್ವಿ ಅವರ ಪುತ್ರಿಯರಾದ ಸುಸ್ಮಿತಾ ಹಾಗೂ ಈಶಾನ್ಯೆ, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೆ ಪಿ. ಕೃಷ್ಣಾ ಮೊದಲಾದವರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page