ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ ತಮ್ಮ ಪೂರ್ವಾಧಿಕಾರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದು ಸೌಜನ್ಯಯುತ ಭೇಟಿಯಾಗಿದ್ದು, ಮುಖ್ಯಮಂತ್ರಿಯವರು ಈಗಾಗಲೇ ಸ್ಟಾಲಿನ್ ಅವರ ಆಳ್ವಾರ್‌ಪೇಟೆ ನಿವಾಸಕ್ಕೆ ತೆರಳಿದ್ದಾರೆ. ಏಪ್ರಿಲ್ 23 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮತ್ತು ವಿಜಯ್ ಅವರ ಟಿವಿಕೆ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಈ ಚುನಾವಣೆಯಲ್ಲಿ ವಿಜಯ್ ಭರ್ಜರಿ ಜಯ ದಾಖಲಿಸಿದ್ದರು.
ಇಂದು ಬೆಳಿಗ್ಗೆಯಷ್ಟೇ ಮುಖ್ಯಮಂತ್ರಿ ವಿಜಯ್, ಅವರ ಸಂಪುಟದ ಒಂಬತ್ತು ಸಚಿವರು, ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹಾಗೂ ನೂತನವಾಗಿ ಆಯ್ಕೆಯಾದ ಶಾಸಕರು ತಮಿಳುನಾಡು ವಿಧಾನಸಭೆಯಲ್ಲಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು.
17ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ತಾತ್ಕಾಲಿಕ ಸಭಾಧ್ಯಕ್ಷ ಎಂ.ವಿ. ಕರುಪ್ಪಯ್ಯ ಅವರು ವಿಜಯ್ ಅವರ ನಾಯಕತ್ವ ಮತ್ತು ಚುನಾವಣಾ ವಿಜಯವನ್ನು ಶ್ಲಾಘಿಸಿ, ಶಾಸಕರ ಪ್ರಮಾಣವಚನ ಪ್ರಕ್ರಿಯೆಗೆ ಚಾಲನೆ ನೀಡಿದರು. ಮೊದಲಿಗರಾಗಿ ಸಿಎಂ ವಿಜಯ್ ಪ್ರಮಾಣವಚನ ಪಡೆದರೆ, ನಂತರ ಎನ್. ಆನಂದ್, ಆಧವ್ ಅರ್ಜುನ ಸೇರಿದಂತೆ ಇತರ ಸಚಿವರು ಶಪಥ ಮಾಡಿದರು.
ನಂತರ ಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಮತ್ತು ಒ. ಪನ್ನೀರ್‌ಸೆಲ್ವಂ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಸ್ತುತ ವಿಧಾನಸಭೆಯ ಒಟ್ಟು ಬಲ 233 ಆಗಿದೆ (ಒಟ್ಟು ಸ್ಥಾನಗಳು 234). ವಿಜಯ್ ಅವರು ಪೆರಂಬೂರ್ ಮತ್ತು ತಿರುಚಿರಾಪಳ್ಳಿ ಪೂರ್ವ ಎರಡೂ ಕಡೆ ಗೆದ್ದಿದ್ದರಿಂದ, ನಿಯಮದಂತೆ ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ.
