ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (PA) ಚಂದ್ರನಾಥ್ ರಥ್ ಅವರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಯಶಸ್ಸು ಸಾಧಿಸಿದ್ದು, ಯುಪಿಐ (UPI) ಪಾವತಿಯೊಂದು ಹಂತಕರನ್ನು ಹಿಡಿಯಲು ಪ್ರಮುಖ ಸುಳಿವು ನೀಡಿದೆ.
ಈ ಭೀಕರ ಕೃತ್ಯ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಬಿಹಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಿಶಾಲ್ ಶ್ರೀವಾಸ್ತವ, ರಾಜ್ ಸಿಂಗ್ ಮತ್ತು ಮಯಾಂಕ್ ಮಿಶ್ರಾ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಕೋಲ್ಕತ್ತಾ ಸಮೀಪದ ‘ಬ್ಯಾಲಿ’ ಟೋಲ್ ಪ್ಲಾಜಾದಲ್ಲಿ ಆರೋಪಿಗಳು ಮಾಡಿದ ಯುಪಿಐ ಪಾವತಿಯು ಪೊಲೀಸರಿಗೆ ಈ ಪ್ರಕರಣವನ್ನು ಬೇಧಿಸಲು ದಾರಿದೀಪವಾಯಿತು.
ಕಳೆದ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಚಂದ್ರನಾಥ್ ರಥ್ ಅವರು ತಮ್ಮ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿದ್ದಾಗ ಈ ಹತ್ಯೆ ನಡೆದಿತ್ತು. ಅವರು ಪ್ರಯಾಣಿಸುತ್ತಿದ್ದ ಮಹೀಂದ್ರಾ ಸ್ಕಾರ್ಪಿಯೋ ವಾಹನದ ಮುಂದಿನ ಸೀಟಿನಲ್ಲಿ ಕುಳಿತಿದ್ದಾಗ ದುಷ್ಕರ್ಮಿಗಳು ಅತ್ಯಂತ ಸಮೀಪದಿಂದ ಗುಂಡಿಕ್ಕಿ ಕೊಂದಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೊದಲು ಸಿಲ್ವರ್ ಬಣ್ಣದ ನಿಸಾನ್ ಮೈಕ್ರಾ ಕಾರಿನ ಮೂಲಕ ರಥ್ ಅವರ ವಾಹನವನ್ನು ಅಡ್ಡಗಟ್ಟಲಾಗಿತ್ತು. ತಕ್ಷಣವೇ ಬೈಕ್‌ನಲ್ಲಿ ಬಂದ ಹಂತಕರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ನಂತರ ಆ ಕಾರನ್ನು ಅಲ್ಲೇ ಬಿಟ್ಟು ಕೆಂಪು ಬಣ್ಣದ ಕಾರು ಮತ್ತು ಬೈಕ್‌ನಲ್ಲಿ ಪರಾರಿಯಾಗಿದ್ದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಳು ಬಳಸಿದ ಮೈಕ್ರಾ ಕಾರನ್ನು ಪತ್ತೆಹಚ್ಚಿದ್ದರು. ಆ ಕಾರಿಗಾಗಿ ಟೋಲ್ ಪ್ಲಾಜಾದಲ್ಲಿ ಯುಪಿಐ ಮೂಲಕ ಹಣ ಪಾವತಿಸಿರುವುದು ತಿಳಿದುಬಂದಿದೆ. ಆ ಪಾವತಿಯ ಆಧಾರದ ಮೇಲೆ ಆರೋಪಿಗಳ ವಿವರ ಸಂಗ್ರಹಿಸಿದ ಪೊಲೀಸರು, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಅವರನ್ನು ಬಂಧಿಸಿದ್ದಾರೆ. ಬಂಧಿತ ಮೂವರೂ ವೃತ್ತಿಪರ ಹಂತಕರಾಗಿದ್ದು, ಇವರಲ್ಲಿ ವಿಶಾಲ್ ಶ್ರೀವಾಸ್ತವ ಮೇಲೆ ಹತ್ಯೆ, ದರೋಡೆ ಸೇರಿದಂತೆ 15ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಸೋಮವಾರ ಬಾರಾಸತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
