ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ರದ್ದುಪಡಿಸಿ, ಅದರ ಸ್ಥಾನದಲ್ಲಿ ‘ವಿಬಿ-ಗ್ರಾಮ್ ಜಿ’ ಕಾಯ್ದೆಯನ್ನು ಬಲವಂತವಾಗಿ ಗ್ರಾಮೀಣ ಜನರ ಮೇಲೆ ಹೇರಲು ಮೋದಿ ಸರ್ಕಾರ ಸಜ್ಜಾಗಿದೆ. ಈ ಹೊಸ ಕಾಯ್ದೆಯು ಜುಲೈ 1 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಈ ಕುರಿತು ಸೋಮವಾರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಜುಲೈ 1 ರಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಕಾನೂನು ಅನ್ವಯವಾಗಲಿದೆ. ಉದ್ಯೋಗ ಖಾತರಿ ಯೋಜನೆ (MGNREGA) ರದ್ದುಪಡಿಸಿ ಹೊಸ ವ್ಯವಸ್ಥೆ ಜಾರಿಗೆ ತರುತ್ತಿರುವುದಾಗಿ ಮತ್ತೊಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹಳೆಯ ಯೋಜನೆಯಿಂದ ಹೊಸ ವಿಧಾನಕ್ಕೆ ಬದಲಾಗುವ ಪ್ರಕ್ರಿಯೆಯು ಕಾರ್ಮಿಕರಿಗೆ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಜೂನ್ 30 ರವರೆಗೆ ಉದ್ಯೋಗ ಖಾತರಿ ಅಡಿಯಲ್ಲಿ ನಡೆಯುತ್ತಿರುವ ಕೆಲಸಗಳನ್ನು ರಕ್ಷಿಸಿ, ನಂತರ ಅವುಗಳನ್ನು ಹೊಸ ವ್ಯವಸ್ಥೆಗೆ ವರ್ಗಾಯಿಸಲಾಗುವುದು ಎಂದು ಅಧಿಸೂಚನೆ ತಿಳಿಸಿದೆ. ಹೊಸ ‘ವಿಬಿ-ಗ್ರಾಮ್ ಜಿ’ ಕಾರ್ಡ್‌ಗಳು ವಿತರಣೆಯಾಗುವವರೆಗೆ, ಪ್ರಸ್ತುತ ಇರುವ ಇ-ಕೆವೈಸಿ ದೃಢೀಕೃತ ಜಾಬ್ ಕಾರ್ಡ್‌ಗಳೇ ಚಲಾವಣೆಯಲ್ಲಿರುತ್ತವೆ. ಇ-ಕೆವೈಸಿ ಬಾಕಿ ಇರುವ ಕಾರಣಕ್ಕೆ ಕಾರ್ಮಿಕರಿಗೆ ಉದ್ಯೋಗ ನಿರಾಕರಿಸುವುದಿಲ್ಲ ಎಂದು ತಿಳಿಸಿರುವ ಸರ್ಕಾರ, ಕಾರ್ಡ್ ಇಲ್ಲದವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೋಂದಾಯಿಸಿಕೊಳ್ಳಲು ಸೂಚಿಸಿದೆ.
ವೇತನ ಪಾವತಿ, ದೂರುಗಳ ಪರಿಹಾರ ಮತ್ತು ನಿಯಮಗಳ ಬದಲಾವಣೆಗೆ ಸಂಬಂಧಿಸಿದ ಕರಡನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಅದನ್ನು ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಗ್ರಾಮ ಪಂಚಾಯಿತಿಗಳೇ ಗ್ರಾಮೀಣ ಬದಲಾವಣೆಯ ಮೂಲಸ್ತಂಭಗಳು ಎಂದು ಬಣ್ಣಿಸಿರುವ ಸರ್ಕಾರ, ಹೊಸ ಕಾಯ್ದೆಯು ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ ಎಂದು ಪ್ರತಿಪಾದಿಸಿದೆ.
