ಬೆಂಗಳೂರು : ರಾಜ್ಯ ಸರ್ಕಾರದಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಲಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಲಹೆ ಮೇರೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸಚಿವರ ಖಾತೆ ಮರುಹಂಚಿಕೆ ಕುರಿತು ಹೊಸ ಅಧಿಸೂಚನೆ ಹೊರಡಿಸಿದ್ದಾರೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಹೊಸ ಅಧಿಸೂಚನೆಯ ಪ್ರಕಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು, ಸಚಿವ ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ಮಾಹಿತಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಶಾಸನ ವ್ಯವಹಾರಗಳು, ಕೃಷಿ ಮಾರುಕಟ್ಟೆ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ಮುಂದುವರಿಸಿಕೊಂಡಿದ್ದಾರೆ.
ಇದರ ಜೊತೆಗೆ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ಸಂಸ್ಥೆಗಳಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (BMRDA), ನಗರ ಮತ್ತು ಗ್ರಾಮ ಯೋಜನಾ ಆಯುಕ್ತಾಲಯ ಹಾಗೂ ಈ ವ್ಯಾಪ್ತಿಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ಮೇಲಿನ ನಿಯಂತ್ರಣವೂ ಮುಖ್ಯಮಂತ್ರಿಗಳ ವಶದಲ್ಲೇ ಉಳಿದಿದೆ.
ಇನ್ನೊಂದೆಡೆ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಇದರಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ನಗರ ನಿಗಮಗಳು, ಬೆಂಗಳೂರು ಜಲಮಂಡಳಿ (BWSSB), ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ಸಂಸದೀಯ ವ್ಯವಹಾರಗಳ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಸರ್ಕಾರದ ಈ ನಿರ್ಧಾರದಿಂದ ರಾಜಧಾನಿ ಬೆಂಗಳೂರಿನ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಮುಖ್ಯಮಂತ್ರಿಗಳ ನೇರ ಮೇಲ್ವಿಚಾರಣೆ ಮತ್ತಷ್ಟು ಬಲವಾಗಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ನಡೆದ ಬೆನ್ನಲ್ಲೇ ಈ ಮರುಹಂಚಿಕೆ ಮಹತ್ವ ಪಡೆದಿದೆ.
ಅಧಿಸೂಚನೆ ಹೊರಬಿದ್ದ ಬಳಿಕ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳ ಅಧಿಕಾರ ಹಂಚಿಕೆ ಕುರಿತು ರಾಜಕೀಯ ಹಾಗೂ ಆಡಳಿತ ವಲಯಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಕೃಷ್ಣ ಬೈರೇಗೌಡ ಅವರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿಯ ಜವಾಬ್ದಾರಿ ನೀಡಲಾಗಿದ್ದರೂ, ಬಡಾ (BDA) ಮತ್ತು ಬಿಎಂಆರ್‌ಡಿಎ (BMRDA) ಮುಖ್ಯಮಂತ್ರಿಗಳ ವಶದಲ್ಲೇ ಉಳಿದಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
