ಬೆಂಗಳೂರು: ಚಾಮರಾಜನಗರದಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮೃತಪಟ್ಟ ಪ್ರಕರಣ ವಿಧಾನಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯಿತು.ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಸದನದಲ್ಲಿ ನೀಡಿದ ಉತ್ತರದಿಂದ ತೃಪ್ತರಾಗದ ಪ್ರತಿಪಕ್ಷ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.ವಿಷಯ ಪ್ರಸ್ತಾಪಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಎನ್‌ಕೌಂಟರ್ ನಡೆದ ಸ್ಥಳಕ್ಕೆ ಹತ್ತಿರದಲ್ಲೇ ಚಾಮರಾಜನಗರದಲ್ಲಿ ಆಸ್ಪತ್ರೆ ಇದ್ದರೂ ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ಏಕೆ ಕರೆದೊಯ್ಯಲಾಯಿತು ಎಂದು ಪ್ರಶ್ನಿಸಿದರು.
ಮೃತರಿಗೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು, ಸರ್ಕಾರ ಮಾತ್ರ ಇದನ್ನು ಆತ್ಮರಕ್ಷಣೆಗಾಗಿ ನಡೆದ ಗುಂಡಿನ ದಾಳಿ ಎಂದು ಸಮರ್ಥಿಸಿಕೊಳ್ಳುತ್ತಿದೆ ಎಂದು ದೂರಿದರು.ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರೆ ಎದೆ ಮತ್ತು ಕುತ್ತಿಗೆಗೆ ಗುಂಡು ಹಾರಿಸುವ ಬದಲು ಕಾಲಿಗೆ ಗುಂಡು ಹಾರಿಸಬಹುದಿತ್ತು ಎಂದು ಅಶೋಕ್ ಹೇಳಿದರು.ಗುಂಡಿನ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದರು ಎನ್ನಲಾಗಿದ್ದು, ಅವರ ಪೈಕಿ ನಾಲ್ಕನೇ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂಬ ವಿಚಾರವನ್ನೂ ಅಶೋಕ್ ಪ್ರಸ್ತಾಪಿಸಿದರು.
ರಾಮಲಿಂಗಾರೆಡ್ಡಿ ಅವರ ಉತ್ತರದಲ್ಲಿ ನಾಲ್ಕನೇ ವ್ಯಕ್ತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆತ ಈಗ ಎಲ್ಲಿದ್ದಾನೆ? ಸತ್ಯವನ್ನು ಬಹಿರಂಗಪಡಿಸಬಹುದು ಎಂಬ ಭಯದಿಂದ ಆತನನ್ನು ಯಾವುದಾದರೂ ದೂರದ ಸ್ಥಳದಲ್ಲಿ ಇರಿಸಲಾಗಿದೆಯೇ?” ಎಂದು ಪ್ರಶ್ನಿಸಿದರು. ಘಟನೆ ನಡೆದ ಸಂದರ್ಭದಲ್ಲಿ 5,000ಕ್ಕೂ ಹೆಚ್ಚು ರೈತರು ಪ್ರತಿಭಟನೆಗೆ ಸೇರಿದ್ದರು ಎಂದು ಹೇಳಿದ ಅಶೋಕ್, ಮೃತರು ನಿಜವಾಗಿಯೂ ಬೇಟೆಗಾರರಾಗಿದ್ದರೆ ಇಷ್ಟೊಂದು ಸಂಖ್ಯೆಯಲ್ಲಿ ರೈತರೇಕೆ ಪ್ರತಿಭಟನೆ ನಡೆಸುತ್ತಿದ್ದರು ಎಂದು ಪ್ರಶ್ನಿಸಿದರು. ಬೇಟೆಗಾರರ ಬಗ್ಗೆ ಮೊದಲೇ ಮಾಹಿತಿ ಇದ್ದರೆಸ ಅರಣ್ಯ ಇಲಾಖೆ ಕೇವಲ ಸಣ್ಣ ತಂಡವನ್ನು ಏಕೆ ಕಳುಹಿಸಿತ್ತು ಎಂದೂ ಪ್ರಶ್ನಿಸಿದರು.
