Home ಅಂಕಣ ಹಾಲಲ್ಲಿ ಸಕ್ಕರೆಯಂತೆ ಬೆರೆತ ಕರಾವಳಿಯ ಕ್ರೈಸ್ತರು

ಹಾಲಲ್ಲಿ ಸಕ್ಕರೆಯಂತೆ ಬೆರೆತ ಕರಾವಳಿಯ ಕ್ರೈಸ್ತರು

0

“..ನನ್ನ ಊರು ನಮ್ಮ ಗ್ರಾಮದಲ್ಲಿ ಗುಡ್ಡವೊಂದರಿಂದ ಪ್ರತ್ಯೇಕವಾಗಿ ಒಂಟಿಯಾಗಿದೆ. ಇಲ್ಲಿ ದಲಿತರು, ಮುಸ್ಲಿಮರು, ಕ್ರೈಸ್ತರು ಆಲ್ಲವೇ ಇಲ್ಲ. ಆದರೂ ಇಲ್ಲಿ ಒಳಗೊಳಗೇ ಪರಧರ್ಮ ದ್ವೇಷವನ್ನು ಹೇಗೆ ಬೆಳೆಸಲಾಗುತ್ತಿದೆ ಎಂದು ನೋಡಿದರೆ ಅಚ್ಚರಿಯಾಗುತ್ತದೆ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ನಾನು ತುಂಬಾ ಚಿಕ್ಕವನಿದ್ದಾಗ ನನ್ನ ತಾಯಿ ನನಗೊಂದು ಕತೆ ಹೇಳಿದ್ದರು. ಸಾಕಷ್ಟು ವಯಸ್ಸಾಗಿರುವ ಅವರಿಗೆ ಅದೀಗ ಮರೆತಿರಲೂಬಹುದು. ಆದರೆ, ನನಗೆ ಮರೆತಿಲ್ಲ. ನೂರಾರು ವರ್ಷಗಳ ಹಿಂದೆ ನಿರಾಶ್ರಿತರಾಗಿ ವಿದೇಶದಿಂದ ಬಂದ ಪಾರ್ಸಿ ಸಮುದಾಯದವರ ಗುಂಪೊಂದು ಗುಜರಾತಿಗೆ ಬಂದು ಅಲ್ಲಿನ ರಾಜನೊಬ್ಬನ ಆಸ್ಥಾನದಲ್ಲಿ ಆಶ್ರಯ ಕೇಳಿದರಂತೆ. ಆಗ ರಾಜನು ನಮ್ಮಲ್ಲೇ ಜನಸಂಖ್ಯೆ ಜಾಸ್ತಿ ಇದೆ; ಅಲ್ಲದೇ ನೀವು ಹೊರಗಿನವರಾದುದರಿಂದ ಇಲ್ಲಿನ ಜನರೊಂದಿಗೆ ಬೆರೆಯುವುದು ಕಷ್ಟ ಎಂದನಂತೆ. ಆಗ ಅವರ ನಾಯಕ ಒಂದು ಲೋಟ ಹಾಲು ಮತ್ತು ಸಕ್ಕರೆ ತರಲು ವಿನಂತಿಸಿದನಂತೆ. ಅದರಂತೆ, ರಾಜ ಹಾಲು ಮತ್ತು ಸಕ್ಕರೆ ತರಿಸಿದ. ಪಾರ್ಸಿಗಳ ನಾಯಕ ಹಾಲಲ್ಲಿ ಸಕ್ಕರೆ ಬೆರೆಸಿ ಕಲಸಿದನಂತೆ. “ಈಗ ನೋಡಿ. ಸಕ್ಕರೆ ಬೆರೆಸಿದರೂ ಹಾಲು ಹೆಚ್ಚಾಗಲಿಲ್ಲ. ಆದರೆ, ಸಿಹಿ ಮಾತ್ರ ಹೆಚ್ಚಾಯಿತು. ಅದೇ ರೀತಿ ನಾವು ಸಕ್ಕರೆಯಂತೆ ನಿಮ್ಮೊಳಗೆ ಬೆರೆಯುತ್ತೇವೆ. ನಿಮಗೆ ಹೊರೆಯಾಗುವುದಿಲ್ಲ” ಎಂದನಂತೆ. ರಾಜನು ಅವರಿಗೆ ಆಶ್ರಯ ನೀಡಿದ.

ಈ ಕತೆಯನ್ನು ಹೇಳುತ್ತಾ ನನ್ನ ತಾಯಿ ನನಗೊಂದು ಲೋಟ ಸಕ್ಕರೆ ಬೆರೆಸಿದ ಹಾಲು ಕುಡಿಸಿ, ನಾವು ಎಲ್ಲರೊಂದಿಗೆ ಸಕ್ಕರೆಯಂತೆ ಬೆರೆಯಬೇಕು ಎಂದಿದ್ದರು. ಅವರು ಪಾರ್ಸಿಗಳ ಕತೆಯನ್ನು ನನಗೇಕೆ ಹೇಳಿದರೆಂದರೆ, ಕೆಲವು ವರ್ಷಗಳ ಕಾಲ ಮುಂಬಯಿಯಲ್ಲಿ ತಂದೆಯ ಜೊತೆ ಉದ್ಯೋಗ ಮಾಡುತ್ತಿದ್ದ ಅವರು, ಪಾರ್ಸಿಗಳನ್ನು ಹತ್ತಿರದಿಂದ ನೋಡಿದ್ದುದರಿಂದ ಅವರ ಒಳ್ಳೆಯತನದ ಪ್ರಭಾವಕ್ಕೆ ಒಳಗಾಗಿದ್ದರು. ಇಂತಹ ದಂತಕತೆಗಳು ಎಲ್ಲಾ ಕಡೆ ಹುಟ್ಟುವುದರಿಂದ ಮತ್ತು ಅವುಗಳನ್ನು ಎಲ್ಲರೂ ತಮ್ಮ ಸಂದರ್ಭಕ್ಕೆ ಅನುಗುಣವಾಗಿ ಬಳಸಿಕೊಳ್ಳುವುದರಿಂದ ಈ ಕತೆ ನಿಜವೇ ಎಂದು ಇಂಟರ್ನೆಟ್‌ನಲ್ಲಿ ನೋಡಿದಾಗ, ಇದರ ಕುರಿತು ಬಹಳಷ್ಟು ಬರೆಯಲಾಗಿದೆ. ಹೌದು, ಇದು ನಿಜ.

ಒಂದು ರೀತಿಯಲ್ಲಿ ನೋಡಿದರೆ, ನಾನು ಈ ರೀತಿ ಹುಡುಕುವ ಅಗತ್ಯವೇ ಇರಲಿಲ್ಲ! ನಂತರ ನಾನೇ ಯುವಕನಾಗಿ ಮುಂಬಯಿಗೆ ಹೋಗಿ, ಏಳು ವರ್ಷಗಳ ಕಾಲ ಇದ್ದಾಗ ಹಲವಾರು ಪಾರ್ಸಿಗಳನ್ನು ನೋಡಿ, ಈ ಕತೆ ನಿಜವೇ ಇರಬೇಕು ಎಂದು ಮನವರಿಕೆ ಆಗಿತ್ತು. ಆ ರಾಜನಿಗೆ ನೀಡಿದ ಭರವಸೆಯನ್ನು ಪಾರ್ಸಿಗಳು ಇಂದಿಗೂ ಉಳಿಸಿಕೊಂಡಿದ್ದಾರೆ. ಸಮಾಜದಲ್ಲಿ ಸಕ್ಕರೆಯಂತೆ ಬೆರೆತಿದ್ದಾರೆ. ಎಲ್ಲಾ ರಂಗಗಳಲ್ಲಿಯೂ ಅವರು ಮುಂದುವರಿದಿದ್ದು, ಉದ್ಯಮದಿಂದ ಹಿಡಿದು ವ್ಯಾಪಾರದ ತನಕ, ಕಲೆ, ಸಾಹಿತ್ಯ, ಸಂಗೀತ, ನಾಟಕ, ಸಿನಿಮಾ, ವೈದ್ಯಕೀಯ, ವಕೀಲ ವೃತ್ತಿ ತನಕ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಗುಜರಾತಿ, ಮರಾಠಿ ಕಲಿತರು; ಜನರ ಜೊತೆ ಬೆರೆತರು. ಆದರೆ, ತಮ್ಮ ಸಂಸ್ಕೃತಿಯನ್ನು ಹಾಗೆಯೇ ಉಳಿಸಿಕೊಂಡರು. ಇವರು ಮೂಲತಃ ಇರಾನಿನಿಂದ ಬಂದವರಾದುದರಿಂದ ಮುಸ್ಲಿಮರಿಗೆ ಹತ್ತಿರ ಎಂದು ಹಿಂದೂಗಳೂ, ಅಗ್ನಿಯನ್ನು ಪೂಜಿಸುವುದರಿಂದ ಹಿಂದೂಗಳಿಗೆ ಹತ್ತಿರ ಎಂದು ಮುಸ್ಲಿಮರು ಭ್ರಮಿಸಿಕೊಂಡಿದ್ದರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ.

ಇಡೀ ಭಾರತದಲ್ಲಿ ಕೇವಲ ಒಂದೂವರೆ ಲಕ್ಷದಷ್ಟು ಮಾತ್ರ ಜನಸಂಖ್ಯೆ ಇರುವ ಈ ಸಮುದಾಯ, ಎಷ್ಟು ಶಾಂತಿಪ್ರಿಯ ಎಂದರೆ, ಅಕ್ಷಯ್ ಕುಮಾರ್ ಸಿನೆಮಾ ಒಂದರಲ್ಲಿ ತೋರಿಸಿದ ನೌಕಾಧಿಕಾರಿ ತನ್ನ ಪತ್ನಿಯನ್ನು ವಂಚಿಸಿದವನನ್ನು ಕೊಲೆಮಾಡಿದ ಪ್ರಕರ ಸಬ್ಣ ಬಿಟ್ಟರೆ, ಬೇರೆ ಒಂದೂ ಕೊಲೆ ಪ್ರಕರಣ ಈ ತನಕ ದಾಖಲಾಗಿಲ್ಲ. ಕಳವು, ದರೋಡೆಗಳೆಲ್ಲಾ ದೂರದ ಮಾತು. ಆದರೆ, ವಕೀಲ ವೃತ್ತಿಯಲ್ಲಿ ಬಹಳ ಪ್ರಬಲ ಸಮುದಾಯ. ಆದರೆ, ಧಾರ್ಮಿಕವಾಗಿ ಮುಚ್ಚಿದ ಸಮುದಾಯವಿದು. ತಮ್ಮ ಅಗ್ನಿ ದೇವಾಲಯಗಳಿಗೆ ಬೇರೆಯವರಿಗೆ ಪ್ರವೇಶ ನೀಡುವುದಿಲ್ಲ. ಧರ್ಮ ಬಿಟ್ಟು ಹೊರಗೆ ಮದುವೆಯಾಗುವುದು ತೀರಾ ಕಡಿಮೆ. ಯಾರಾದರೂ ಆದರೆ, ಆಕ್ಷೇಪಿಸುವುದಿಲ್ಲ. ಅವರ ಮೇಲೆ ಮುಗಿಬೀಳುವುದಿಲ್ಲ. ಒಂದು ಉದಾಹರಣೆ ಎಂದರೆ, ನನ್ನ ಒಬ್ಬರು ದೊಡ್ಡಪ್ಪನ ಮಗಳು ಸಹಪಾಠಿ ಪಾರ್ಸಿಯನ್ನು ಮದುವೆಯಾಗಿ, ಯುಎಸ್‌ಎಯಲ್ಲಿ ಪತ್ರಕರ್ತೆಯಾಗಿದ್ದಾಳೆ.

ಇದೇನು! ಕರಾವಳಿಯ ಕ್ರೈಸ್ತರ ಬಗ್ಗೆ ಬರೆಯಲು ಹೋಗಿ ಪಾರ್ಸಿ ಪುರಾಣವನ್ನು ಹೇಳುತ್ತಿದ್ದಾನಲ್ಲ ಎಂದು ಯೋಚಿಸಬೇಡಿ. ಇದನ್ನು ಬರೆಯಲು ಕಾರಣ ಒಂದಿದೆ. ಅದುವೇ ಕರಾವಳಿಯ ಕ್ರೈಸ್ತರಿಗೂ, ಪಾರ್ಸಿಗಳಿಗೂ ಇರುವ ಸಾಮ್ಯತೆ. ಅದೇ ಕರುಣೆ, ಸೇವಾ ಮನೋಭಾವ, ಸಮುದಾಯದೊಂದಿಗೆ ಬೆರೆಯುವಿಕೆ, ಶಾಂತಿಪ್ರಿಯತೆ, ಕಲೆ, ಸಂಗೀತ, ಸಾಹಿತ್ಯ, ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ದಂಗುಬಡಿಸುವ ಪ್ರಗತಿ, ತಮ್ಮ ವಿಶಿಷ್ಟ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡಿರುವುದು, ದುಡಿಯುವ ಗುಣ. ಕರಾವಳಿಯ ಕ್ರೈಸ್ತರ ಸಾರ್ವತ್ರಿಕ ಗುಣವೂ ಆಗಿದೆ. ಇಂದು ಎಲ್ಲಾ ಕಡೆ ಕೋಮುವಿಷವನ್ನು ಉದ್ದೇಶಪೂರ್ವಕವಾಗಿ ಹರಡಲಾಗುತ್ತಿರುವ ಸಂದರ್ಭದಲ್ಲಿ ವ್ಯತಿರಿಕ್ತ ಗುಣಸ್ವಭಾವಗಳು ಈ ಸಮುದಾಯದಲ್ಲೂ, ತೀರಾ ಕಡಿಮೆ ಪ್ರಮಾಣದಲ್ಲಿಯಾದರೂ ಬೆಳೆಯುತ್ತಿರುವುದು ಆತಂಕಕಾರಿ ವಿಷಯ.

ಅದೇ ರೀತಿಯಲ್ಲಿ ಪಾರ್ಸಿಗಳಿಗೂ ಕರಾವಳಿಯ ಕ್ರೈಸ್ತರಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ, ಕ್ರೈಸ್ತರು ಧಾರ್ಮಿಕವಾಗಿ ಪಾರ್ಸಿಗಳಂತೆ ಕರ್ಮಠರಲ್ಲ. ಆದರೂ, ಈಗಿನ ರಾಜಕೀಯ, ಸಾಮಾಜಿಕ ಸಂದರ್ಭದಲ್ಲಿ ಕರ್ಮಠತೆಯ ಕಡೆಗೆ ಸಾಗುವ ಪ್ರವೃತ್ತಿ ಹುಟ್ಟಿಕೊಳ್ಳಬಹುದಾದುದು ಸಹಜವಾದರೂ, ಅದನ್ನು ತಡೆಯುವ ಶಕ್ತಿಯೂ ಸಮುದಾಯದೊಳಗೇ ಅಡಕವಾಗಿದೆ.

ಯಾವುದೇ ಸಮುದಾಯಗಳ ನಡುವೆ ಅಪನಂಬಿಕೆ, ದ್ವೇಷಗಳಿಗೆ ಕಾರಣವೇ ಪರಸ್ಪರರ ನಡುವೆ ಒಡನಾಟದ ಕೊರತೆ ಮತ್ತು ಅದರಿಂದ ಹುಟ್ಟುವ ತಿಳುವಳಿಕೆಯ ಕೊರತೆ. ಆದರೆ, ಇಂತಹಾ ಒಡನಾಟ ಮತ್ತು ತಿಳುವಳಿಕೆಗಳು ಹೇಗೆ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸೌಹಾರ್ದದ ಭಾವನೆಯನ್ನು ಹರಡುತ್ತಾ ಹೋಗುತ್ತವೆ ಎಂಬುದನ್ನು ಅನುಭವಿಸಿದವನಾದುದರಿಂದ, ನನ್ನ ಅನುಭವ ಮತ್ತು ತಿಳುವಳಿಕೆಯ ಆಧಾರದಲ್ಲಿ ಮಾತ್ರವೇ ಕರಾವಳಿಯ ಕ್ರೈಸ್ತ ಸಮುದಾಯದ ಕುರಿತು ನನ್ನ ಅಭಿಪ್ರಾಯಗಳನ್ನು ಬರೆಯುತ್ತಿದ್ದೇನೆ. ಇದನ್ನು ಮೀರಿ ಹೋಗುವುದಿಲ್ಲ.

ಬಾಲ್ಯದಲ್ಲಿ ನನ್ನ ತಾಯಿಯ ತಾಯಿ- ಅಜ್ಜಿಯ- ಮನೆ ಇದ್ದುದು ಮಂಗಳೂರಿನ ಬೋಳಾರದಲ್ಲಿ, ಮಂಗಳಾದೇವಿ ಮತ್ತು ಮಾರಿಗುಡಿ ನಡುವೆ. ಮಂಗಳಾದೇವಿಯ ಎದುರು ಪ್ರೊಟೆಸ್ಟೆಂಟರ ಕಾಂತಿ ಚರ್ಚ್ ಇತ್ತು. ಮಂಗಳಾದೇವಿ ದೇವಸ್ಥಾನಕ್ಕೆ ಅಜ್ಜಿಯ ಜೊತೆಗೆ ಹೋಗುವುದು ಮಾಮೂಲಿಯಾದರೂ, ಅಜ್ಜಿಯ ಜೊತೆ ಜಪ್ಪು ಮೀನು ಮಾರ್ಕೆಟ್‌ಗೆ ಹೋದಾಗ ಚರ್ಚಿನ ದಾರಿಯಲ್ಲಿ ಬರುತ್ತಿದ್ದೆವು. ಮಧ್ಯಾಹ್ನದ ಹೊತ್ತು ಚರ್ಚ್ ಖಾಲಿ ಇದ್ದರೂ, ಅಜ್ಜಿ, ನಾನು ಸುಮ್ಮನೇ ಒಳಗೆ ಹೋಗಿ ಕೈಮುಗಿದು ಬರುತಿದ್ದೆವು. ಅದೇ ರೀತಿ ನೆಹರೂ ಮೈದಾನದ ಕಡೆಗೆ ಹೋದಾಗ ಸೈದಾನಿ ಬೀಬಿ ದರ್ಗಾ ಭೇಟಿ ಮಾಮೂಲಿಯಾಗಿತ್ತು. ಕೆಲವೊಮ್ಮೆ ಮಲ್ಲಿಗೆಯ ತುಂಡು ಮಾಲೆ ಇರಿಸುತ್ತಿದ್ದುದೂ ಉಂಟು. ಮಾವಂದಿರು, ಚಿಕ್ಕಮ್ಮನ ಜೊತೆ ಕೆಲವೊಮ್ಮೆ ರೊಸಾರಿಯೋ, ಮಿಲಾಗ್ರಿಸ್ ಚರ್ಚ್‌ಗಳಿಗೆ ಹೋಗುತ್ತಿದ್ದುದುಂಟು. ಈ ರೀತಿಯ ಸರ್ವಧರ್ಮ ಗೌರವವು ನಮ್ಮ ಕರಾವಳಿಯಲ್ಲಿ ಮಾಮೂಲಿ ವಿಷಯವಾಗಿತ್ತು- ನಾನೀಗ ಹೇಳುತ್ತಿರುವ ಐದು ದಶಕಗಳ ಹಿಂದಿನ ತನಕ.

ನನ್ನ ಊರು ನಮ್ಮ ಗ್ರಾಮದಲ್ಲಿ ಗುಡ್ಡವೊಂದರಿಂದ ಪ್ರತ್ಯೇಕವಾಗಿ ಒಂಟಿಯಾಗಿದೆ. ಇಲ್ಲಿ ದಲಿತರು, ಮುಸ್ಲಿಮರು, ಕ್ರೈಸ್ತರು ಆಲ್ಲವೇ ಇಲ್ಲ. ಆದರೂ ಇಲ್ಲಿ ಒಳಗೊಳಗೇ ಪರಧರ್ಮ ದ್ವೇಷವನ್ನು ಹೇಗೆ ಬೆಳೆಸಲಾಗುತ್ತಿದೆ ಎಂದು ನೋಡಿದರೆ ಅಚ್ಚರಿಯಾಗುತ್ತದೆ. ಈ ಕಾರಣದಿಂದ ನನಗೆ ಕ್ರೈಸ್ತ,, ಮುಸ್ಲಿಂ ಮಕ್ಕಳ ಒಡನಾಟವಾದುದು ನಮ್ಮ ಪೇಟೆಯ ಕೊಂಕಣಿ ಮಾತೃಭಾಷೆಯ ಜಿಎಸ್‌ಬಿ ಒಡೆತನದ ಬಹಳ ದೊಡ್ಡ ಅನುದಾನಿತ ಶಾಲೆಯಲ್ಲಿ. ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ, ಕ್ರೈಸ್ತ ಮಕ್ಕಳು ಓದುತ್ತಿದ್ದರು. ಹಲವಾರು ಗೆಳೆಯರ ನೆನಪು ಇನ್ನೂ ಇದೆ. ಜಾತಿ, ಧರ್ಮ ದ್ವೇಷಗಳು ಇರಲಿಲ್ಲವಾದರೂ ಮೇಲು ಕೀಳಿನ ಭಾವನೆ ಒಳಗೊಳಗೇ ಇದ್ದು, ಆಗಾಗ ತಲೆಯೆತ್ತುತ್ತಿತ್ತು. ಮೇಲ್ಜಾತಿ ಶಿಕ್ಷಕರಲ್ಲಿಯೇ ಇದು ಹೆಚ್ಚು; ಮಕ್ಕಳಲ್ಲಿ ಅಲ್ಲ.

ಹೀಗಿರುತ್ತಾ ಒಂದು ದಿನ, ಏಸುಕ್ರಿಸ್ತನನ್ನು ಅವಹೇಳನ ಮಾಡುವ ಹಾಡೊಂದನ್ನು ಕೆಲವು ಮಕ್ಕಳು ತಮ್ಮೊಳಗೇ ಹಾಡಿಕೊಳ್ಳುತ್ತಿದ್ದರು. ಏಸುಕ್ರಿಸ್ತ ಮೋಸಮಾಡುವವನು, ಅದಕ್ಕಾಗಿ ಅವನಿಗೆ “ಫಾಸಿ” ಆಯಿತು ಎಂಬ ಹಾಡು. ಆಗ ಜಿಎಸ್‌ಬಿಗಳ ನಡುವೆ ಇದ್ದ ಸಂಘಿಗಳೇ ಈ ಹಾಡಿನ ಮೂಲ ಎಂದು ನಂತರ ನನಗೆ ತಿಳಿಯಿತು. ಎರಡೋ ಮೂರನೇ ಕ್ಲಾಸಿನಲ್ಲಿದ್ದ ನನಗೆ ಅದರ ಗಂಭೀರತೆ ಬಿಡಿ, ತಲೆಬುಡವೂ ಅರ್ಥವಾಗಿರಲಿಲ್ಲ. ಆದರೆ, ರಾಗ ಅಕರ್ಷಕವಾಗಿದ್ದುದರಿಂದ ಅದು ನನ್ನ ತಲೆಯಲ್ಲಿ ಕೂತಿತ್ತು. ಒಂದು ದಿನ ಸಂಜೆ ಅಂಗಳದಲ್ಲಿ ಆಡುತ್ತಿದ್ದಾಗ ಈ ಹಾಡನ್ನು ಗುಣುಗುಣಿಸುತ್ತಿದ್ದೆ. ಅದು ಅಲ್ಲೆಲ್ಲೋ ಕೆಲಸ ಮಾಡುತ್ತಿದ್ದ ನನ್ನ ತಾಯಿಯ ಕಿವಿಗೆ ಬಿತ್ತು. ತಕ್ಷಣವೇ ನನ್ನನ್ನು ಕರೆದು ಹಾಗೆಲ್ಲಾ ಹೇಳಬಾರದು ಎಂದರು. ಅವರೇನು ಬೈಯ್ಯಲಿಲ್ಲ. ನನಗೆ ಏಸುಕ್ರಿಸ್ತನ ಕತೆಯನ್ನೇ ಚಿಕ್ಕದಾಗಿ ಹೇಳಿ, ಅವನೊಬ್ಬ ಮಹಾತ್ಮ ಎಂದರು. ಯಾವುದೇ ಧರ್ಮವನ್ನು ನಿಂದಿಸಬಾರದು ತಿಳಿಹೇಳಿದರು. ಅದು ನನ್ನ ತಲೆಯಲ್ಲಿ ಕೂತುಬಿಟ್ಟಿತು. ಆಗ ಈ ನಿಂದನೆ ಎಂದರೇನು ಎಂದು ಸ್ಪಷ್ಟವಾಗಿ ಗೊತ್ತಿರದಿದ್ದರೂ ಮುಂದೆ ಗೀತೆ, ಪುರಾಣ, ರಾಮಾಯಣ, ಮಹಾಭಾರತಗಳ ಜೊತೆ, ಬೈಬಲ್, ಅಲ್ಪ ಸ್ವಲ್ಪ ಕುರಾನ್ ಓದುವುದಕ್ಕೆ ಇದು ಕಾರಣವಾಯಿತು. ಈಗ ವಿವರಗಳು ಮರೆತಿದ್ದರೂ ಸಾರ ಉಳಿದಿದೆ.

ಇದನ್ನು ನಾನು ಏಕೆ ಹೇಳುತ್ತಿದ್ದೇನೆ ಎಂದರೆ, ನನ್ನ ತಾಯಿ ಇದನ್ನು ಹೇಳಲು ಅವರಿಗೆ ಸಾಧ್ಯವಾದುದು ಹೇಗೆ? ಹೇಗೆಂದರೆ, ಅನಕ್ಷರಸ್ಥ ತಂದೆತಾಯಿಯ ಮಗಳಾದ ಅವರು ಮತ್ತು ನನ್ನ ಚಿಕ್ಕಮ್ಮ ಆ ಕಾಲಕ್ಕೇ ಕಲಿತದ್ದು ಜೆಪ್ಪುವಿನ ಜೆರೋಸಾ ಮತ್ತು ಸೈಂಟ್ ಆನ್ಸ್ ಕಾನ್ವೆಂಟಿನಲ್ಲಿ. ನನ್ನ ಮಾವಂದಿರು ಕಲಿತದ್ದು ಬೋಳಾರದ ರೊಸಾರಿಯೋ ಹೈಸ್ಕೂಲಿನಲ್ಲಿ. ಅಲ್ಲಿ ಕಲಿತ ಮಾನವೀಯ ಮೌಲ್ಯಗಳನ್ನು, ಪರಧರ್ಮ ಗೌರವವನ್ನು ಅವರು ನನ್ನ ಮೂಲಕ ಮುಂದಿನ ಪೀಳಿಗೆಗಳಿಗೆ ದಾಟಿಸಿದರು. ಅವರು ಕ್ರೈಸ್ತರು ಬಹಳ ಹಿಂದೆಯೇ ಸ್ಥಾಪಿಸಿದ್ದ ಶಾಲೆಯಲ್ಲಿ ಕಲಿಯದೇ ದ್ವೇಷ ಕಲಿಸುವ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರೆ, ಅಥವಾ ಶಿಕ್ಷಣವನ್ನೇ ಪಡೆಯದಿದ್ದಿದ್ದರೆ, ಇಂದಿನ ನಾನು ನಾನಾಗಿಯೇ ಇರುತ್ತಿದ್ದೆನೆ? ಹಿಂದೆ ಕ್ರೈಸ್ತ ಶಾಲೆಗಳಲ್ಲಿ ಕಲಿತ ಬಹಳಷ್ಟು ಜನರೇ ಕರಾವಳಿಯ ಜಾತ್ಯತೀತ ಸ್ವಭಾವ, ಸಾಮರಸ್ಯವನ್ನು ಬಹಳಷ್ಟು ಮಟ್ಟಿಗೆ ಕಾಯ್ದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ನನಗನಿಸುತ್ತದೆ. ಹಾಗೆಂದು ಉಳಿದ ಶಾಲೆಗಳಲ್ಲಿ ಧಾರ್ಮಿಕ ದ್ವೇಷವನ್ನು ಕಲಿಸುತ್ತಿದ್ದರು ಎಂದು ಅರ್ಥವಲ್ಲ. ಆದರೆ, ಹೆಚ್ಚಿನ ಶಾಲೆಗಳಲ್ಲಿ ಜಾತಿ-ಧರ್ಮ ಭೇದಭಾವ ಒಳಗೊಳಗೇ ಸ್ಥಾಯಿಯಾಗಿ ಹರಿಯುತ್ತಿತ್ತು. ಅದನ್ನು ನಿವಾರಿಸುವ ಪ್ರಯತ್ನಗಳು ನಡೆಯುತ್ತಿರಲಿಲ್ಲ.

ನಾನು ಕಲಿತ ಶಾಲೆಯಲ್ಲಿ ಹೆಚ್ಚಿನ ಶಿಕ್ಷಕರು ಬ್ರಾಹ್ಮಣರು ಮತ್ತು ಜಿಎಸ್‌ಬಿಯವರಾಗಿದ್ದರು ಒಂದಿಬ್ಬರು ಶೂದ್ರರು ಮತ್ತು ಒಬ್ಬರೇ ಒಬ್ಬರು ಕ್ರೈಸ್ತರು. ಮುಸ್ಲಿಮರು, ದಲಿತರು ಇರಲೇ ಇಲ್ಲ. ಹೆಚ್ಚಿನವರು ಉತ್ತಮ ಶಿಕ್ಷಕರೂ, ಗೌರವಕ್ಕೆ ಅರ್ಹರೂ ಆಗಿದ್ದರು. ಆದರೆ, ಒಳಗೊಳಗೇ ತಾರತಮ್ಯ ಇತ್ತು. ಇಲ್ಲಿ ಇದ್ದ ಏಕೈಕ ಟೀಚರ್ ಬಗ್ಗೆ ಬರೆಯಬೇಕು. “ಸೋಜಾ ಟೀಚರ್” ಎಂದೇ ಪರಿಚಿತರಾಗಿದ್ದ ಅವರ ಹೆಸರು ನನಗೆ ಇವತ್ತಿಗೂ ಗೊತ್ತಿಲ್ಲ. ಕೇವಲ ಎರಡನೆಯ ತರಗತಿಯ ಒಂದು ವಿಭಾಗಕ್ಕೆ ಮಾತ್ರ ಕಲಿಸುತ್ತಿದ್ದ ಅವರು ನನಗೆ ಎಂದೂ ಕಲಿಸಿದ್ದಿಲ್ಲ. ಆದರೂ ನನಗೆ ಹತ್ತಿರ. ಯಾಕೆಂದರೆ, ತನ್ನ ತರಗತಿಯ ಮಾತ್ರವಲ್ಲ; ಇಡೀ ಶಾಲೆಯ ಮಕ್ಕಳ ಹೆಸರು ಹೇಳಿ ಮಾತನಾಡಿಸುತ್ತಿದ್ದರು.

ನನಗಿಂತ ಎರಡು ವರ್ಷ ದೊಡ್ಡವನಾದ ಮಗುವನ್ನು ಶಾಲೆಯ ಎದುರೇ, ಆಗಿನ ಹೊಸ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಕಳೆದುಕೊಂಡಿದ್ದ ಅವರಿಗೆ, ಎಲ್ಲಾ ಮಕ್ಕಳು ತನ್ನ ಮಕ್ಕಳಂತೆಯೇ ಕಾಣುತ್ತಿದ್ದರೋ ಏನೋ. ಎಲ್ಲಾ ಶಿಕ್ಷಕರು ದೊಡ್ಡ ದೊಡ್ಡ ನಾಗರಬೆತ್ತ ಹಿಡಿದುಕೊಂಡು, ನಿಜವಾಗಿಯೂ ಶಿಕ್ಷೆ ನೀಡುವವರೇ ಆಗಿದ್ದ ಕಾಲದಲ್ಲಿ ಅವರು ಮಕ್ಕಳಿಗೆ ಕೈಯಿಂದ ಹೊಡೆದುದು ಬಿಡಿ, ದನಿಯೇರಿಸಿ ಬೈದದ್ದೂ ಇಲ್ಲ. ಎಂತಹಾ ಪೋಕ್ರಿಗಳೂ ಅವರೆದರು ಮೆತ್ತಗಾಗುತ್ತಿದ್ದರು. ಅವರು ಎಲ್ಲೇ ಹೋಗಲಿ, ಮಕ್ಕಳದ್ದೊಂದು ಗುಂಪು. ಇಂದು ದಶಕಗಳ ಬಳಿಕ ಶಾಲೆಯ ಬಗ್ಗೆ ಮಾತು ಹೊರಳಿದಾಗ ಇಂದು ಸ್ವಲ್ಪ ಮಟ್ಟಿಗೆ ದ್ವೇಷದ ಅಮಲು ಹತ್ತಿಸಿಕೊಂಡವರೂ, ಅವರು ಕಾಲವಾಗಿ ವರ್ಷಗಳೇ ಕಳೆದರೂ “ಸೋಜ” ಟೀಚರ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ನನ್ನ ಮಟ್ಟಿಗೆ ಅವರು ಕ್ರೈಸ್ತ ಧರ್ಮದ ಪ್ರೀತಿ, ಕರುಣೆಗಳ ಸಂಕೇತವಾಗಿದ್ದಾರೆ. ಯಾವುದೇ ಧರ್ಮಕ್ಕಿಂತಲೂ, ಶಿಕ್ಷಣಕ್ಕಿಂತಲೂ ಅದು ರೂಪಿಸುವ ವ್ಯಕ್ತಿತ್ವವೇ ಸಮಾಜದ ಮೇಲೆ ಬಹಳ ಕಾಲ ಪ್ರಭಾವ ಬೀರುತ್ತಾ ಇರುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಇದನ್ನು ಬರೆಯುತ್ತಿದ್ದೇನೆ ಅಷ್ಟೇ.

ಆ ಶಾಲೆಯಲ್ಲಿ ಕೆಲವು ಅತ್ಯುತ್ತಮ ಶಿಕ್ಷಕರಿದ್ದರೂ, ಜಾತಿಭೇದ ತೋರಿಸದಿದ್ದರೂ ಒಂದಿಬ್ಬರು ದುಷ್ಟರೂ ಇದ್ದರು. ಇವರಲ್ಲೊಬ್ಬ ಜಿಎಸ್‌ಬಿ ಶಿಕ್ಷಕರು ಸದಾ ಮುಸ್ಲಿಂ, ಕ್ರೈಸ್ತ ಮಕ್ಕಳನ್ನು ಕ್ಲಾಸಿನಲ್ಲೇ ಅವಹೇಳನ ಮಾಡುತ್ತಿದ್ದರು. ಇದರಿಂದ ಮುಸ್ಲಿಂ, ಕ್ರೈಸ್ತ ಗೆಳೆಯರನ್ನು ಹೊಂದಿದ್ದ ನನಗೆ ಕಸಿವಿಸಿ ಆಗುತ್ತಿತ್ತು. ಏಳುನೂರರಷ್ಟು ಮಕ್ಕಳಿದ್ದ ಈ ಶಾಲೆಯಲ್ಲಿ ನನಗೆ ಗೊತ್ತಿರುವಂತೆ, ಕೊರಗರೂ ಸೇರಿದಂತೆ ದಲಿತರು ಯಾರೂ ಇರಲಿಲ್ಲ ಎಂಬುದು “ಹಿಂದೂ ಒಂದು” ಘೋಷಣೆಯ ಪೊಳ್ಳುತನವನ್ನು ಸೂಚಿಸುತ್ತದೆ. ಮುಸ್ಲಿಂ ಮಕ್ಕಳನ್ನು ಅವಹೇಳನ ಮಾಡುವ ಯಾವ ಅವಕಾಶವನ್ನೂ ಕಳೆದುಕೊಳ್ಳುತ್ತಿರಲಿಲ್ಲ. ಬ್ಯಾರಿ ಭಾಷೆಯನ್ನು ಅಣಕಿಸುತ್ತಾ “ಸೆಂಟ್ ನಾರ್‌ಡ್, ಪೀ ಮಣಕ್‌ಡ್” (ಸೆಂಟು ನಾರುತ್ತದೆ, ಹೇಲು ಪರಿಮಳ ಬೀರುತ್ತದೆ) ಎಂದು ಹೇಳುತ್ತಾ, ಅವರು ಹೀಗೆಯೇ, ಎಲ್ಲಾ ಉಲ್ಟಾ ಎಂದು ಮಕ್ಕಳ ತಲೆಯಲ್ಲಿ ವಿಷಬಿತ್ತುತ್ತಿದ್ದರು.

ಒಂದು ಘಟನೆಯನ್ನು ಮಾತ್ರ ನೆನಪಿಸುತ್ತೇನೆ. ನಮ್ಮಲ್ಲಿ ತಿಂಗಳ ಹಬ್ಬ ನಡೆಯುತ್ತಿತ್ತು. ನನ್ನ ಕ್ಲಾಸಿನಲ್ಲಿ ಜೋಕಿಂ ಡಿಸೋಜ, ಜೋಕಿಂ ಲೋಬೋ ಮತ್ತು ವಲೇರಿಯನ್ ಕ್ರಾಸ್ತ ನನ್ನ ಆತ್ಮೀಯರಾಗಿದ್ದರು. ಅವರಲ್ಲಿ ವಲೇರಿಯನ್ ಒಂದು ಸಲ ಒಂದು ಇಂಗ್ಲೀಷ್ ಹಾಡು ಹಾಡಿದ. “ಬ್ರಷ್, ಬ್ರಷ್… ಬ್ರಷ್ ಯುವರ್ ಟೀತ್…ಬ್ರಷ್ ಆನ್ ಎವೆರಿ ಡೇ… ಫಾದರ್, ಮದರ್, ಸಿಸ್ಟರ್, ಬ್ರದರ್…” ಹೀಗೆ ಸಾಗುತ್ತಿದ್ದ ಈ ಹಾಡನ್ನು ಆಗ ಚಾಲ್ತಿಯಲ್ಲಿದ್ದ “ಟ್ವಿಸ್ಟ್” ಶೈಲಿಯಲ್ಲಿ ಕುಣಿಯುತ್ತಾ ಹಾಡಿದ್ದ. ಅದು ಮುಗಿದ ಬಳಿಕ ಮೇಲೆ ಹೇಳಿದ ಶಿಕ್ಷಕರು ಎಲ್ಲರ ಎದುರು, “ನಿಮ್ಮ ಜಾತಿಯಲ್ಲಿ ಹಲ್ಲು ಉಜ್ಜುವಾಗ ಎಲ್ಲರೂ ಕುಂಡೆ ತಿರುಗಿಸುತ್ತಾರ?” ಎಂದು ಗಹಗಹಿಸಿ ನಕ್ಕಿದ್ದರು. ನಂತರ ಕ್ಲಾಸಿನಲ್ಲೂ “ಇವನು, ಇವನ ತಂದೆ, ತಾಯಿ, ಅಣ್ಣ, ತಂಗಿ, ಇವನ ಜಾತಿಯವರೆಲ್ಲರೂ ಹಲ್ಲುಜ್ಜುವಾಗ ಕುಂಡೆ ತಿರುಗಿಸುತ್ತಾರೆ” ಎಂದು ಅವಮಾನಿಸುತ್ತಿದ್ದರು. ಇಲ್ಲಿ ದಶಕಗಳ ಹಿಂದೆಯೇ ಕೋಮುಭಾವನೆಯನ್ನು ಹೇಗೆ ಬಿತ್ತಲಾಗುತ್ತಿತ್ತು ಎಂಬುದನ್ನು ತೋರಿಸುವುದೇ ಇದನ್ನು ಹೇಳುವ ಉದ್ದೇಶ. ನನಗೆ ನಲ್ವತ್ತೈದು ವರ್ಷಗಳ ನಂತರವೂ ಇದು ನೆನಪಿದೆ ಎಂದರೆ, ಮಕ್ಕಳ ಮೇಲಾಗುವ ಪರಿಣಾಮವನ್ನು ಊಹಿಸಬಹುದು. ಅವರು ಅನೇಕ ಕೋಮುವಾದಿಗಳನ್ನು ಸೃಷ್ಟಿಸಿರಬಹುದು; ಆದರೆ, ನನ್ನಂತೆ ಕೋಮುವಾದದ ಬದ್ಧ ವಿರೋಧಿಗಳನ್ನೂ ಸೃಷ್ಟಿಸಿದ್ದಾರೆ ಎಂಬುದೇ ಒಂದು ಸಮಾಧಾನ.

ಇನ್ನೊಂದು ಘಟನೆ: ಏಳನೇ ತರಗತಿಯಲ್ಲಿರುವಾಗ ಸುರತ್ಕಲ್ಲಿನ ಹೈಸ್ಕೂಲೊಂದರಲ್ಲಿ ಸೌಟ್ಸ್, ಗೈಡ್ಸ್ ಶಿಬಿರವಿತ್ತು. ನಾನು ಟ್ರೂಪ್ ಲೀಡರ್ ಆಗಿದ್ದೆ. ಒಂದು ದಿನ ಬೆಳಿಗ್ಗೆ ಎದ್ದು ನಾನೂ, ಉಳಿದ ಕೆಲವರೂ ದೊಡ್ಡದಾದ ಕ್ಯಾಂಪಸಲ್ಲಿ ತಿರುಗಾಡುತ್ತಿದ್ದಾಗ ಅಲ್ಲೊಂದು ಚರ್ಚಿನಲ್ಲಿ (ಚಾಪೆಲ್ ಇರಬಹುದು) ಪೂಜೆ ನಡೆಯುತ್ತಿದ್ದು, ಬಹಳ ಜನರು ಸೇರಿದ್ದರು. ನಾವೂ ಬೆರಗಿನಿಂದ ಹೊಕ್ಕೆವು. ನನ್ನ ತಂದೆಯವರು ಹಲವಾರು ಬಾರಿ ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜಿನ ಚಿಕ್ಕ ಬೊಟಾನಿಕಲ್ ಗಾರ್ಡನ್, ಅಲ್ಲಿನ ಚಾಪೆಲ್‌ಗೆ ಕರೆದೊಯ್ದು ಅಲ್ಲಿನ ಅಂತೋನಿಯೋ ಮೋಸ್ಚೆನಿಯವರ ಅದ್ಬುತ ಭಿತ್ತಿಚಿತ್ರಗಳನ್ನು ತೋರಿಸಿದ್ದರು. ಚರ್ಚಿಗೆ ಹೋಗುವುದು ನನಗೆ ಹೊಸದಲ್ಲವಾದರೂ, ಉಳಿದ, ಜಿಎಸ್‌ಬಿ ಮತ್ತು ಬ್ರಾಹ್ಮಣ ಹುಡುಗರಿಗೆ ಹೊಸತು. ಅಲ್ಲಿ ಎಲ್ಲಾ ಮಕ್ಕಳು ಸಾಲಾಗಿ ನಿಂತಿದ್ದರು. ನಾವೂ ಸೇರಿಕೊಂಡೆವು. ಎಲ್ಲರೂ ಮೊಣಕಾಲೂರಿದರು. ನಾವೂ ಊರಿದೆವು. ಪಾದ್ರಿಯವರು ಎಲ್ಲರ ನಾಲಗೆ ಮೇಲೆ ಚಿಕ್ಕ ವೇಫರ್‌ನಂತದ್ದು ಇಟ್ಟರು. ನಾವು ಅದನ್ನು ದೇವರ ಪ್ರಸಾದ ಎಂದು ನುಂಗಿದೆವು. ಅದನ್ನು ಹೋಲಿ ಕಮ್ಯುನಿಯನ್, ಹೋಲಿ ಕನ್ಫರ್ಮೇಷನ್ ಆದ ಮಕ್ಕಳಿಗೆ ಮಾತ್ರ ಕೊಡುವುದೆಂದು ಆಗ ನನಗೆ ಗೊತ್ತಿರಲಿಲ್ಲ.

ನಾವು ಶಾಲೆಗೆ ಮರಳಿದ ನಂತರ ಅಲ್ಲಲ್ಲಿ ಗುಸುಗುಸು ಶುರುವಾಯಿತು. ನನ್ನನ್ನು ಎಲ್ಲರೂ ನನ್ನನ್ನು ವಿಚಿತ್ರವಾಗಿ ನೋಡುತ್ತಿರುವಂತಿತ್ತು. ಆರೋಪ ಎಂದರೆ ನಾನು ಜಿಎಸ್‌ಬಿ ಮತ್ತು ಬ್ರಾಹ್ಮಣ ಹುಡುಗರ ಜಾತಿ ಕೆಡಿಸಿದೆ ಎಂದು. ನನ್ನ ಮನೆಗೆ ದೂರು ಹೋದರೂ ಯಾರೂ ಕ್ಯಾರೇ ಅನ್ನಲಿಲ್ಲ. ಇದನ್ನು ಮಹಾಪರಾಧ ಎಂಬಂತೆ ಗುಸುಗುಸು ಹಂತದಲ್ಲೇ ಮುಚ್ಚಿಹಾಕಲಾಯಿತು. ನನ್ನನ್ನು ವಿಚಾರಿಸಿದಾಗ ನಾನು, “ದೇವರೊಬ್ಬನೇ ನಾಮ ಹಲವು” ಎಂದು ನೀವೇ ಕಲಿಸಿದ್ದು ಎಂದು ಮುಗ್ಧವಾಗಿ ಹೇಳಿದೆ. ಘಟನೆಯನ್ನು ಯಾರಿಗೂ ಹೇಳಬಾರದು ಎಂದು ಎಲ್ಲರಿಗೂ ತಾಕೀತು ಮಾಡಲಾಯಿತು.

ಮುಂದೆ ಹೈಸ್ಕೂಲು, ಕಾಲೇಜಿಗೆ ಹೋದಾಗಲೂ ಸಂಸ್ಥೆಗಳ ಮಾಲಕತ್ವ, ಶಿಕ್ಷಕರ ಸ್ವರೂಪ, ಹಿಂದೂ, ಮುಸ್ಲಿಂ, ಕ್ರೈಸ್ತ ಗೆಳೆಯರು ಇತ್ಯಾದಿಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಇಂದಿನಂತೆ ಕೋಮು, ಜಾತಿ ಆಧಾರಿತ ಗಲಾಟೆಗಳೂ ಇರಲಿಲ್ಲ. ವಿಲಿಯಂ ಎಂಬ ಸೀನಿಯರ್‌ನ ತಂಡಕ್ಕೂ ಇನ್ನೊಂದು ತಂಡಕ್ಕೂ ಆಗಾಗ ಭಯಂಕರ ಗಲಾಟೆಗಳು ನಡೆಯುತ್ತಿದ್ದರೂ, ಎರಡೂ ಕಡೆಗಳಲ್ಲಿ ಎರಡೂ ಜಾತಿ ಧರ್ಮಗಳ “ಪುಡಿ” ಹೀರೋಗಳು ಇರುತ್ತಿದ್ದರು. ಆ ಮಟ್ಟಿಗೆ “ಜಾತಿ-ಕೋಮು ಸಾಮರಸ್ಯ”, “ಸೌಹಾರ್ದ” ಇತ್ತು! ಈಗಿನ ಕೋಮುವಿಭಜನೆ ಇರಲಿಲ್ಲ.

ಮುಂದೆ, ಮುಂಬಯಿಗೆ ಹೋದಾಗ ಮೊದಲು ನಾನಿದ್ದ ಸಾಂತಾಕ್ರೂಸ್ ಈಸ್ಟ್‌ನ ಕೋಲಿವೇರಿ ಮತ್ತು ಕಲೀನಾ ಎಂಬ ಅವಳಿ “ಹಳ್ಳಿ”ಗಳಲ್ಲಿ ಕ್ರೈಸ್ತರೇ ಅಧಿಕ ಸಂಖ್ಯೆಯಲ್ಲಿ ಇದ್ದರು. ಅಲ್ಲೇ ಬೆಳೆದು ಅಲ್ಲಿನವಳಾಗಿದ್ದ ಅಂದರೆ ಕರಾವಳಿಯ ಕ್ರೈಸ್ತ ಹುಡುಗಿಯೊಂದಿಗೆ ನನ್ನ ಮದುವೆಯಾಯಿತು… ಇನ್ನಷ್ಟು ವಿಷಯಗಳನ್ನು ಮುಂದೆ ಬರೆಯುವೆ.

ಇಂದು ಕರಾವಳಿಯಲ್ಲಿ ಕೋಮುವಿಷ ಹರಡುತ್ತಿರುವ ಸಂದರ್ಭದಲ್ಲಿ ನಾವು ಕುಟುಂಬ, ಧರ್ಮ, ಸುತ್ತಲಿನ ಸಮಾಜ ಮಾತ್ರವಲ್ಲ; ಕೆಲವು, ಸಾಮಾಜಿಕ, ರಾಜಕೀಯ ನಿಲುವು, ನಿರ್ಧಾರಗಳನ್ನೂ ಮಾಡಬೇಕಾಗುತ್ತದೆ. ನಾವೆಲ್ಲರೂ- ಕೆನರಾ ಎಂದು ಬ್ರಿಟಿಷರ ಹೆಸರಿನಿಂದಲೇ ಪ್ರಖ್ಯಾತವಾದ, ತುಳುನಾಡು ಎಂದೇ ಗುರುತಿಸಿರುವ- ಕನ್ನಡ ಮಾತೃಭಾಷೆಯಲ್ಲದಿದ್ದರೂ, ತುಳು, ಎರಡು ರೀತಿಯ ಕೊಂಕಣಿ, ಬ್ಯಾರಿ, ಮಲಾಮೆ, ಅರೆಬಾಸೆ, ಕುಂದಗನ್ನಡ, ಮಲಯಾಳಂ, ಹಿಂದಿ ಎಂಬ ಸ್ವಾತಂತ್ರ್ಯ ಕಾಲದಲ್ಲಿ ಹರಡಿದ, ಇಂದು ಹೇರಲಾಗುತ್ತಿರುವ ಭಾಷೆ ಹಿಂದಿ, ಆಡಳಿತ ಭಾಷೆಯಾಗಿ ಈಗ ಚಲಾವಣೆಯಲ್ಲಿ ಇರುವ ಇಂಗ್ಲೀಷ್- ಇತ್ಯಾದಿ ಹಲವು ಭಾಷೆಗಳನ್ನು ಒಡಲಲ್ಲಿ ಇಟ್ಟುಕೊಂಡ ಈ “ಕೆನರಾ” ಪ್ರದೇಶವು ಎಂದೂ ಭಾಷಾಧಾರದಲ್ಲಿ ವಿಭಜನಗೊಂಡಿಲ್ಲ; ಅದನ್ನು ಧರ್ಮಧಾರದಲ್ಲಿ ವಿಭಸುವ ಎಲ್ಲಾ ದುಷ್ಟ ಪ್ರಯತ್ನಗಳನ್ನು ನಾವೆಲ್ಲರೂ ಸೇರಿ ಸಾತ್ವಿಕವಾಗಿ ಎದುರಿಸಬಹುದು. ಆ ನಿಟ್ಟಿನಲ್ಲಿ ಪರಸ್ಪರ ತಿಳುವಳಿಕೆಯ ಆಗತ್ಯವಿದೆ. ಕರಾವಳಿ ಕ್ರೈಸ್ತರ ಬಗ್ಗೆ, ಈ ನೆಲಕ್ಕೆ ಅವರ ಕೊಡುಗೆಗಳ ಬಗ್ಗೆ ನನ್ನ ಅರಿವಿಗೆ ನಿಲುಕಿದ್ದನ್ನು ಮುಂದೆ ಇಲ್ಲಿಯೇ ಬರೆಯಬೇಕೆಂದಿದ್ದೇನೆ.

You cannot copy content of this page

Exit mobile version