ಇಂದು ಚುನಾವಣೆ ನಡೆದರೆ ‘ಕಾಕ್ರೋಚ್ ಜನತಾ ಪಾರ್ಟಿ’ಗೆ ಜನರು ಮತ ನೀಡುವರೇ? ಸಮೀಕ್ಷೆ ಹೇಳುವುದೇನು?

ದೆಹಲಿ: ನೀಟ್ (NEET) ಪೇಪರ್ ಸೋರಿಕೆ ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ‘ಜೆನ್ ಜಿ’ (Gen Z) ಯುವಜನರು ನಡೆಸಿದ ಪ್ರತಿಭಟನೆಯ ಮೂಲಕ ದೇಶದ ಗಮನ ಸೆಳೆದಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ರಾಜಕೀಯ ಪಕ್ಷವಾಗಿ ಬದಲಾದರೆ ಅದನ್ನು ಮತಗಳನ್ನಾಗಿ ಪರಿವರ್ತಿಸುವುದು ಸುಲಭವಲ್ಲ ಎಂದು ಇತ್ತೀಚಿನ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಯ ಪ್ರಕಾರ, ಶೇ. 43ರಷ್ಟು ಜನರು ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯ ಪಕ್ಷವಾಗಿ ಚುನಾವಣೆಗೆ ಸ್ಪರ್ಧಿಸಿದರೆ ಮತ ನೀಡುವುದಿಲ್ಲ ಎಂದು ಹೇಳಿದ್ದಾರೆ. ಶೇ. 33ರಷ್ಟು ಜನರು ಪಕ್ಷಕ್ಕೆ ಮತ ನೀಡುವುದಾಗಿ ಬೆಂಬಲ ವ್ಯಕ್ತಪಡಿಸಿದ್ದರೆ, ಉಳಿದ ಶೇ. 24ರಷ್ಟು ಜನರು ತಾವು ಬೆಂಬಲಿಸುವ ಬಗ್ಗೆ ಯಾವುದೇ ಸ್ಪಷ್ಟ ನಿಲುವು ಹೊಂದಿಲ್ಲ ಎಂದು ತಿಳಿಸಿದ್ದಾರೆ. ನೇರ ರಾಜಕೀಯಕ್ಕೆ ಪ್ರವೇಶಿಸದೆ ಕೇವಲ ಒಂದು ಒತ್ತಡದ ಗುಂಪಾಗಿ (pressure group) ಉಳಿಯಲು ಈ ಸಂಘಟನೆ ನಿರ್ಧರಿಸಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 39ರಷ್ಟು ಜನರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

‘ಕಾಕ್ರೋಚ್ ಜನತಾ ಪಾರ್ಟಿ’ ಮುನ್ನೆಲೆಗೆ ಬಂದಿದ್ದು ಹೇಗೆ?

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಯೊಂದರ ವಿರುದ್ಧ ಆನ್‌ಲೈನ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನಲ್ಲಿ ಖಾತೆಯೊಂದನ್ನು ಆರಂಭಿಸಲಾಗಿತ್ತು. ಕೆಲವೇ ದಿನಗಳಲ್ಲಿ ಅಪಾರ ಅನುಯಾಯಿಗಳನ್ನು ಪಡೆದ ಈ ಸಂಘಟನೆಯು, ನೀಟ್ ಪೇಪರ್ ಸೋರಿಕೆ ವಿರೋಧಿಸಿ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಈ ತೀವ್ರ ಪ್ರತಿಭಟನೆಯಿಂದಾಗಿ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಪ್ರಸ್ತುತ ದೇಶಾದ್ಯಂತ ಶಾಲೆಗಳ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸಿಜೆಪಿ ‘ಸ್ಕೂಲ್ ಠೀಕ್ ಕರೋ’ (ಶಾಲೆ ಸರಿಪಡಿಸಿ) ಅಭಿಯಾನವನ್ನು ಮುನ್ನಡೆಸುತ್ತಿದೆ.

ಸೆಪ್ಟೆಂಬರ್ 5ರಂದು ದೆಹಲಿ ಚಲೋ:

ಜುಲೈ 25ರಂದು ತಾವು ಪ್ರತಿಭಟನೆ ಹಿಂಪಡೆಯುವ ವೇಳೆ ಮಾಡಿಕೊಂಡಿದ್ದ ಒಪ್ಪಂದದ ನಾಲ್ಕು ಪ್ರಮುಖ ಬೇಡಿಕೆಗಳ ಪೈಕಿ ಮೂರು ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಆರೋಪಿಸಿರುವ ಸಿಜೆಪಿ, ಸೆಪ್ಟೆಂಬರ್ 5ರಂದು ದೆಹಲಿಯಲ್ಲಿ ಬೃಹತ್ ರ್ಯಾಲಿ ನಡೆಸಲು ತೀರ್ಮಾನಿಸಿದೆ. ಸಂತ್ರಸ್ತ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ, ಪ್ರತಿಭಟನಾಕಾರರ ಮೇಲಿನ ಎಫ್‌ಐಆರ್ ವಾಪಸ್ ಪಡೆಯುವುದು ಮತ್ತು ಆರ್‌ಎಎಫ್ (RAF) ಹಾಗೂ ದೆಹಲಿ ಪೊಲೀಸರು ಕ್ಷಮೆಯಾಚಿಸಬೇಕು ಎಂಬ ಬೇಡಿಕೆಗಳು ಇನ್ನೂ ಬಾಕಿ ಇವೆ ಎಂದು ಸಂಘಟನೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು