Home ದೇಶ “ಕಾಕ್‌ರೋಚ್ ಜನತಾ ಪಾರ್ಟಿ”: ಭಾರತದ “ಜೆನ್ ಝೀ” ಡಿಜಿಟಲ್ ದನಿ

“ಕಾಕ್‌ರೋಚ್ ಜನತಾ ಪಾರ್ಟಿ”: ಭಾರತದ “ಜೆನ್ ಝೀ” ಡಿಜಿಟಲ್ ದನಿ

0
ಸುಪ್ರೀಂಕೋರ್ಟ್ ಜಡ್ಜ್ ಬಳಸಿದ ಒಂದೇ ಪದದಿಂದ ಹುಟ್ಟಿದ ಚಳುವಳಿ.. ಮುಂದೆ ತಲುಪುವ ಗುರಿ ಎಲ್ಲಿಗೆ?

ಮೇ 2026ರ ಮಧ್ಯಭಾಗ ಅಂದ್ರೆ 15 ನೇ ತಾರೀಖಿನ ನಂತರದಲ್ಲಿ ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಚಿತ್ರ ಹೆಸರು ಅಲೆಯಂತೆ ಹರಡಿತು. “ಕಾಕ್‌ರೋಚ್ ಜನತಾ ಪಾರ್ಟಿ”. ಮೊದಲ ನೋಟಕ್ಕೆ ಇದು ನಗು ತರಿಸಬಹುದು. ಆದರೆ ಈ ಹೆಸರಿನ ಹಿಂದೆ ಇರುವ ಕಥೆ, ಕಾರಣ ಮತ್ತು ಸಂದೇಶ.. ಇವೆಲ್ಲ ಭಾರತದ ಯುವಜನರ ಅಸಮಾಧಾನ, ನೋವು ಮತ್ತು ಹೋರಾಟದ ದನಿಯನ್ನು ಪ್ರತಿಬಿಂಬಿಸಿದೆ.

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಆ ಒಂದು ಹೇಳಿಕೆ
ಮೇ 15, 2026ರಂದು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ವಿಚಾರಣೆ ನಡೆಯಿತು. ನಕಲಿ ಪದವಿ ಹೊಂದಿದ ವಕೀಲರ ಕುರಿತ ವಿಷಯ ಚರ್ಚೆಯಾಗುತ್ತಿದ್ದಾಗ, ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಒಂದು ಹೇಳಿಕೆ ನೀಡಿದರು. ಅವರು ಹೇಳಿದ್ದೇನೆಂದರೆ: “ಉದ್ಯೋಗ ಸಿಗದ, ವೃತ್ತಿಯಲ್ಲಿ ಸ್ಥಾನ ಇಲ್ಲದ ಕೆಲವು ಯುವಕರು ಕಾಕ್‌ರೋಚ್‌ಗಳಂತೆ ಇದ್ದಾರೆ. ಅವರು ಮಾಧ್ಯಮ, ಆರ್‌ಟಿಐ ಕಾರ್ಯಕರ್ತರು, ಸಾಮಾಜಿಕ ಮಾಧ್ಯಮ ಬಳಕೆದಾರರಾಗಿ ಎಲ್ಲರ ಮೇಲೂ ದಾಳಿ ಮಾಡುತ್ತಿದ್ದಾರೆ.”
ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿಯಂತೆ ಹಬ್ಬಿದವು. ನಿರುದ್ಯೋಗಿ ಯುವಜನರನ್ನು “ಪರೋಪಜೀವಿಗಳು” ಮತ್ತು “ಕಾಕ್‌ರೋಚ್”ಗಳಿಗೆ ಹೋಲಿಸಲಾಗಿದೆ ಎಂದು ಹಲವರು ಭಾವಿಸಿದರು. ನಂತರ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮಾತುಗಳು ತಪ್ಪಾಗಿ ಅರ್ಥೈಸಲ್ಪಟ್ಟಿವೆ ಎಂದು ಸ್ಪಷ್ಟಪಡಿಸಿದರು. ತಾವು ನಿರುದ್ಯೋಗಿ ಯುವಜನರ ಬಗ್ಗೆ ಹೇಳಿದ್ದಲ್ಲ, ನಕಲಿ ಪದವಿ ಹೊಂದಿದವರ ಬಗ್ಗೆ ಹೇಳಿದ್ದು ಎಂದು ಸ್ಪಷ್ಟಪಡಿಸಿದರೂ, ಅಷ್ಟರಲ್ಲಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇದರ ಅಲೆ ವ್ಯಾಪ್ತಿ ಮೀರಿ ಹೋಗಿತ್ತು.

ಪಾರ್ಟಿಯ ಜನನ: ಒಂದು ವ್ಯಂಗ್ಯದ ಟ್ವೀಟ್‌ನಿಂದ ಬೃಹತ್ ಚಳವಳಿ
CJI ಹೇಳಿಕೆ ವೈರಲ್ ಆದ ಮರುದಿನ, ಅಂದರೆ ಮೇ 16, 2026ರಂದು, ಅಭಿಜೀತ್ ದೀಪ್ಕೆ ಎಂಬ ಯುವಕ X (ಟ್ವಿಟ್ಟರ್)ನಲ್ಲಿ ಒಂದು ತಮಾಷೆಯ ಪೋಸ್ಟ್ ಮಾಡಿದರು. ಅಮೆರಿಕಾದ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ 30 ವರ್ಷದ ಈ ಭಾರತೀಯ ವಿದ್ಯಾರ್ಥಿ, ರಾಜಕೀಯ ಭಾಷ್ಯಕಾರ ಹಾಗೂ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಕೂಡ ಆಗಿದ್ದಾರೆ. ಅವರ ಮೊದಲ ಪೋಸ್ಟ್ ಸರಳವಾಗಿತ್ತು: “ಎಲ್ಲ ‘ಕಾಕ್‌ರೋಚ್’ಗಳಿಗಾಗಿ ಒಂದು ಹೊಸ ವೇದಿಕೆ ಆರಂಭಿಸುತ್ತಿದ್ದೇನೆ. ಅರ್ಹತೆಗಳು: ನಿರುದ್ಯೋಗಿ, ಸೋಮಾರಿ, ಸದಾ ಆನ್‌ಲೈನ್‌ನಲ್ಲಿ ಇರುವವರು, ವೃತ್ತಿಪರವಾಗಿ ದೂರು ಹೇಳುವ ಸಾಮರ್ಥ್ಯ ಇರುವವರು.”

ಅದೇ ದಿನ cockroachjantaparty.org ಎಂಬ ವೆಬ್‌ಸೈಟ್ ತೆರೆದುಕೊಂಡಿತು. 24 ಗಂಟೆಗಳ ಒಳಗೆ 15,000 ಅನುಯಾಯಿಗಳು ಸೇರ್ಪಡೆಯಾದರು. 48 ಗಂಟೆಗಳಲ್ಲಿ 25,000 ಸದಸ್ಯರು ದಾಖಲಾದರು. ಮೂರೇ ದಿನಗಳಲ್ಲಿ 70,000 ಮಂದಿ ತಮ್ಮನ್ನು ಈ “ಪಾರ್ಟಿ”ಯ ಭಾಗ ಎಂದು ಘೋಷಿಸಿಕೊಂಡರು.

ದೀಪ್ಕೆ ಅವರೇ ಹೇಳಿದಂತೆ: “ಇದು ಒಂದೇ ಒಂದು ವ್ಯಂಗ್ಯದ ಟ್ವೀಟ್ ಆಗಬೇಕಿತ್ತು. ಇದು ನಿಜವಾದ ರಾಜಕೀಯ ಪಕ್ಷವಾಗಬೇಕೆಂದು ನಾವು ಉದ್ದೇಶಿಸಿರಲಿಲ್ಲ.”
ಪಾರ್ಟಿಯ ಪರಿಚಯ: ವ್ಯಂಗ್ಯದ ಒಳಗೆ ಗಂಭೀರ ಸಂದೇಶ
ಘೋಷಣೆ: “Secular – Socialist – Democratic – Lazy” (ಜಾತ್ಯತೀತ – ಸಮಾಜವಾದಿ – ಪ್ರಜಾಸತ್ತಾತ್ಮಕ – ಸೋಮಾರಿ)
ತನ್ನನ್ನು ತಾನು ಹೀಗೆ ಬಣ್ಣಿಸಿಕೊಳ್ಳುತ್ತದೆ:
“ಸೋಮಾರಿ ಮತ್ತು ನಿರುದ್ಯೋಗಿಗಳ ದನಿ. ವ್ಯವಸ್ಥೆ ಲೆಕ್ಕ ಹಾಕದ ಜನರಿಗಾಗಿ ಒಂದು ರಾಜಕೀಯ ಪಕ್ಷ. ಐದು ಬೇಡಿಕೆಗಳು. ಶೂನ್ಯ ಪ್ರಾಯೋಜಕರು. ಒಂದು ದೊಡ್ಡ, ಹಟಮಾರಿ ಹಿಂಡು.”
ಮುಖ್ಯ ಕಾರ್ಯಾಲಯ: “wifi ಎಲ್ಲಿ ಸಿಗುತ್ತದೆಯೋ ಅಲ್ಲಿ”
ಸದಸ್ಯತ್ವದ ಅರ್ಹತೆ:
ನಿರುದ್ಯೋಗಿ – ಒತ್ತಾಯದಿಂದ, ಆಯ್ಕೆಯಿಂದ ಅಥವಾ ಸಿದ್ದಾಂತದಿಂದ
ಸದಾ ಆನ್‌ಲೈನ್‌ನಲ್ಲಿ ಮುಳುಗಿರುವವರು
ವೃತ್ತಿಪರವಾಗಿ ದೂರು ಹೇಳುವ ಕಲೆ ಇರುವವರು
ಜಾತಿ, ಧರ್ಮ, ಲಿಂಗ ಭೇದವಿಲ್ಲ
ಐದು ಬೇಡಿಕೆಗಳು: ಹಾಸ್ಯದ ಹೊರತೆಯಲ್ಲಿ ನಿಜವಾದ ಪ್ರಶ್ನೆಗಳು
ಈ “ಪಾರ್ಟಿ”ಯ ಐದು ಅಂಶಗಳ ಅಜೆಂಡಾ ನಿಜವಾದ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ:
ನಿರುದ್ಯೋಗ ಸಮಸ್ಯೆ – ಪದವಿ ಪಡೆದರೂ ಕೆಲಸ ಇಲ್ಲದ ಲಕ್ಷಾಂತರ ಯುವಕರ ಪರಿಸ್ಥಿತಿ
ಪರೀಕ್ಷಾ ವ್ಯವಸ್ಥೆ ಸುಧಾರಣೆ – NEET ಮತ್ತು ಇತರ ಪರೀಕ್ಷೆಗಳ ಸೋರಿಕೆ, ಅಕ್ರಮಗಳ ವಿರುದ್ಧ ಪ್ರಶ್ನೆ
ಸಂಸ್ಥೆಗಳ ಉತ್ತರದಾಯಿತ್ವ – ನ್ಯಾಯಾಂಗ, ಮಾಧ್ಯಮ, ರಾಜಕೀಯ ಎಲ್ಲ ಸಂಸ್ಥೆಗಳ ಪಾರದರ್ಶಕತೆ
ಯುವ ರಾಜಕೀಯ ಭಾಗವಹಿಸುವಿಕೆ – ಆರ್‌ಟಿಐ, ನಾಗರಿಕ ಚಟುವಟಿಕೆ, ಡಿಜಿಟಲ್ ಸಕ್ರಿಯತೆಯ ಮೂಲಕ
ಮಾಧ್ಯಮ ಸ್ವಾತಂತ್ರ್ಯ – ಪ್ರೆಸ್ ಸ್ವಾತಂತ್ರ್ಯ ಕೊರತೆ ಮತ್ತು ಸ್ವತಂತ್ರ ಪತ್ರಿಕೋದ್ಯಮದ ಅಗತ್ಯ
NEET ಸೋರಿಕೆ ವಿವಾದದ ಕುರಿತು ಈ ಗುಂಪು “ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು” ಎಂದು ಸ್ಪಷ್ಟವಾಗಿ ಆಗ್ರಹಿಸಿದೆ.

ಯುವ ನಿರುದ್ಯೋಗ: ಅಂಕಿ-ಸಂಖ್ಯೆಗಳ ನೋಟ
ಇದು ಕೇವಲ ಮೀಮ್ ಸಂಸ್ಕೃತಿ ಅಲ್ಲ – ಇದರ ಹಿಂದೆ ಕಠಿಣ ವಾಸ್ತವವಿದೆ. ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯ ಮಾರ್ಚ್ 2026ರಲ್ಲಿ ಪ್ರಕಟಿಸಿದ “State of Working India 2026” ವರದಿಯ ಪ್ರಕಾರ:
15–25 ವಯಸ್ಸಿನ ಯುವಜನರಲ್ಲಿ ಸರಿಸುಮಾರು 40% ನಿರುದ್ಯೋಗಿಗಳು
25–29 ವಯೋಮಾನದಲ್ಲಿ ಸ್ನಾತಕ ಪದವೀಧರರ ನಿರುದ್ಯೋಗ ಪ್ರಮಾಣ ಸುಮಾರು 20%
ಭಾರತದ ಜನಸಂಖ್ಯೆಯ 65% 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು
ಪದವಿ ಪಡೆದ ಒಂದು ವರ್ಷದೊಳಗೆ ಸ್ಥಿರ ಉದ್ಯೋಗ ಪಡೆಯುವವರ ಸಂಖ್ಯೆ ಬಹಳ ಕಡಿಮೆ
ಏಪ್ರಿಲ್ 2026ರಲ್ಲಿ ದೇಶದ ಒಟ್ಟಾರೆ ನಿರುದ್ಯೋಗ ದರ ಶೇ.5.2

“ಕಾಕ್‌ರೋಚ್” ಪ್ರತೀಕ: ಅವಮಾನವನ್ನು ಅಭಿಮಾನವಾಗಿ ಪರಿವರ್ತಿಸಿದ ಯುವಜನ
ಕಾಕ್‌ರೋಚ್ ಎಂಬ ಹೆಸರು ಸಾಮಾನ್ಯವಾಗಿ ಅಸಹ್ಯ ಮತ್ತು ಕೀಳಾದ ಕೀಟವೆಂದು ಪರಿಗಣಿಸಲ್ಪಡುತ್ತದೆ. ಆದರೆ ಈ ಯುವಕರು ಅದರ ಮತ್ತೊಂದು ಗುಣವನ್ನು ಬಳಸಿಕೊಂಡರು – ಕಾಕ್‌ರೋಚ್ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಬದುಕುಳಿಯುತ್ತದೆ ಎಂಬ ಸ್ವಭಾವ.
“ಹೌದು, ನಾವು ಕಾಕ್‌ರೋಚ್‌ಗಳಿರಬಹುದು. ಆದರೆ ಬದುಕುಳಿಯುವ ಶಕ್ತಿ ನಮ್ಮಲ್ಲಿದೆ. ನಮ್ಮನ್ನು ಅಳಿಸಿಹಾಕಲು ಆಗುವುದಿಲ್ಲ” – ಇದು ಈ ಚಳವಳಿಯ ಆತ್ಮ.
ಹೀಗೆ ಅವಮಾನಕ್ಕಾಗಿ ಬಳಕೆಯಾದ ಪದವನ್ನೇ ಅಭಿಮಾನದ ಗುರುತಾಗಿ ಮಾರ್ಪಡಿಸಿದ ಯುವಜನರ ಈ ತಂತ್ರ ಸಮಾಜದ ಗಮನ ಸೆಳೆದಿದೆ.

ಒಂದು ಹೆಜ್ಜೆ ಮುಂದೆ ಹೋಗಿ, ದೆಹಲಿಯ ಕಾಳಿಂದಿ ಕುಂಜ್‌ನಲ್ಲಿ ಕೆಲವು ಕಾರ್ಯಕರ್ತರು ಕಾಕ್‌ರೋಚ್ ಉದ್ದನ್ನ ಹಾಕಿಕೊಂಡು, “I am a Cockroach” ಎಂಬ ಫಲಕ ಹಿಡಿದು ಸ್ವಚ್ಛತಾ ಅಭಿಯಾನ ನಡೆಸಿದರು. ವ್ಯಂಗ್ಯ ಮತ್ತು ಪ್ರತಿಭಟನೆ ಒಟ್ಟಿಗೆ ಮೇಳೈಸಿದ ಈ ದೃಶ್ಯ ವ್ಯಾಪಕ ಸ್ಪಂದನೆ ಪಡೆದಿತು.

ರಾಜಕಾರಣಿಗಳ ಆಸಕ್ತಿ: ವ್ಯಂಗ್ಯ ಪಕ್ಷದೊಳಗೆ ನಿಜ ರಾಜಕಾರಣಿಗಳು
ಈ ಆನ್‌ಲೈನ್ ಚಳವಳಿ ಎಷ್ಟು ವ್ಯಾಪಕವಾಗಿ ಹಬ್ಬಿತೆಂದರೆ, ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುಆ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಅವರು ಈ “ಪಾರ್ಟಿ”ಗೆ ಸೇರ್ಪಡೆಯಾಗಲು ಆಸಕ್ತಿ ವ್ಯಕ್ತಪಡಿಸಿದರು. “Maadhyam” ಎಂಬ ಮಾಧ್ಯಮ ಸ್ವಾತಂತ್ರ್ಯ ಸಂಸ್ಥೆ ಸಹ ಈ ಚಳವಳಿಗೆ ಬೆಂಬಲ ಸೂಚಿಸಿತು.

ಮಹುಆ ಮೊಯಿತ್ರಾ ಅವರನ್ನು ಸ್ವಾಗತಿಸುತ್ತ ಕಾಕ್‌ರೋಚ್ ಜನತಾ ಪಾರ್ಟಿ ಬರೆದದ್ದು: “ಚುನಾವಣೆ ಮೋಸ ಮಾಡುವವರೂ, ಕೋಮು ದ್ವೇಷ ಹರಡುವವರೂ ನಿಜವಾದ ರಾಷ್ಟ್ರದ್ರೋಹಿಗಳು. ನೀವು ಪ್ರಜಾಪ್ರಭುತ್ವಕ್ಕೆ ಬೇಕಾದ ನಿಜವಾದ ಹೋರಾಟಗಾರರು.”

ಚಳವಳಿಯ ವೈಶಿಷ್ಟ್ಯ: ಇದು ಯಾರ ಪಕ್ಷವೂ ಅಲ್ಲ, ಎಲ್ಲರ ದನಿ
“ಕಾಕ್‌ರೋಚ್ ಜನತಾ ಪಾರ್ಟಿ”ಯ ಮುಖ್ಯ ಆಕರ್ಷಣೆ ಎಂದರೆ, ಇದು ಯಾವುದೇ ರಾಜಕೀಯ ಸಿದ್ಧಾಂತ ಅಥವಾ ಪಕ್ಷದ ಪರ ನಿಲ್ಲುವುದಿಲ್ಲ. ಆಡಳಿತ ಪಕ್ಷ ಆಗಲಿ, ವಿರೋಧ ಪಕ್ಷ ಆಗಲಿ, ನ್ಯಾಯಾಂಗ ಆಗಲಿ, ಮಾಧ್ಯಮ ಆಗಲಿ — ವ್ಯವಸ್ಥೆಯ ಎಲ್ಲ ಭಾಗಗಳ ಮೇಲೂ ಇದು ವ್ಯಂಗ್ಯ ಮಾಡುತ್ತದೆ. ಹೀಗಾಗಿ ಇದು “ವ್ಯವಸ್ಥೆ ವಿರುದ್ಧದ ಡಿಜಿಟಲ್ ಪ್ರತಿಭಟನೆ” ಎಂದು ಹೇಳಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ವಿಷಯಗಳು:
ಕೃತಕ ಚುನಾವಣಾ ಘೋಷಣಾಪತ್ರಗಳು
ನಕಲಿ ಪ್ರಚಾರ ಪೋಸ್ಟರ್‌ಗಳು
“ಕಾಕ್‌ರೋಚ್ ಸರ್ಕಾರ ಬಂದರೆ…” ಎಂಬ ಹಾಸ್ಯ ವಿಡಿಯೋಗಳು
NEET, CBSE ಪರೀಕ್ಷಾ ಹಗರಣಗಳ ಮೇಲೆ ತೀಕ್ಷ್ಣ ವ್ಯಂಗ್ಯ ಪೋಸ್ಟ್‌ಗಳು
Gen Z ರಾಜಕಾರಣ: ಭಾಷೆ ಬದಲಾಗಿದೆ, ಆದರೆ ಆಕ್ರೋಶ ಹಳತೇ
ಈ ಚಳವಳಿ ಮುಖ್ಯವಾಗಿ Instagram Reels, X, Facebook ಮತ್ತು YouTube Shorts ಮೂಲಕ ಹರಡಿದೆ. ಭಾರತದ “Gen Z” — ಅಂದರೆ 1996–2010 ನಡುವೆ ಹುಟ್ಟಿದ ಯುವ ತಲೆಮಾರು — ರಾಜಕಾರಣವನ್ನು ಮೀಮ್ ಮತ್ತು ವ್ಯಂಗ್ಯದ ಮೂಲಕ ಅರ್ಥ ಮಾಡಿಕೊಳ್ಳುತ್ತದೆ, ವ್ಯಕ್ತಪಡಿಸುತ್ತದೆ.

ಕಾಕ್‌ರೋಚ್ ಜನತಾ ಪಾರ್ಟಿ ಈ ತಲೆಮಾರಿನ ಭಾಷೆಯಲ್ಲೇ ಮಾತನಾಡಿದ್ದರಿಂದ ಅದು ಭಾರೀ ಜನಪ್ರಿಯತೆ ಪಡೆಯಿತು. ಒಬ್ಬ ಬಳಕೆದಾರ ಬರೆದದ್ದು: “ದೇಶದ ಮೊದಲ ಪಕ್ಷ ಯುವಜನರ ನೋವನ್ನು ಅರ್ಥ ಮಾಡಿಕೊಂಡ ಪಕ್ಷ.” ಮತ್ತೊಬ್ಬರು ತಮಾಷೆಯಾಗಿ ಹೇಳಿದರು: “ರಾಜಕಾರಣ ಈಗ Reddit ಮತ್ತು Instagram Reels ಆಯ್ತು.”

ಸ್ಥಾಪಕ ದೀಪ್ಕೆ ಅವರು ಹೇಳಿದ ಮಾತು ಗಮನಾರ್ಹ: “ಈ ಯುವಕರು ಪ್ರಸ್ತುತ ರಾಜಕೀಯ ಪಕ್ಷಗಳಿಂದ ಬೇರ್ಪಟ್ಟ ಭಾವನೆ ಹೊಂದಿದ್ದಾರೆ. ತಮ್ಮ ಭಾಷೆಯಲ್ಲಿ, ತಮ್ಮ ಹಾಸ್ಯದ ಮೂಲಕ, ತಮ್ಮ ಅಸಮಾಧಾನ ಪ್ರತಿಫಲಿಸುವ ರಾಜಕಾರಣ ಅವರಿಗೆ ಬೇಕು.”

ಭವಿಷ್ಯ: ಮೀಮ್ ಮೀರಿ ಚಳವಳಿ ಆಗುವುದೇ?
ಕಾಕ್‌ರೋಚ್ ಜನತಾ ಪಾರ್ಟಿ ಇದುವರೆಗೆ:
ಅಧಿಕೃತ ನೋಂದಣಿ ಇಲ್ಲ – ಚುನಾವಣಾ ಆಯೋಗದ ಮಾನ್ಯತೆ ಇಲ್ಲ
ಔಪಚಾರಿಕ ನಾಯಕತ್ವ ಇಲ್ಲ – ಇದೊಂದು ಆನ್‌ಲೈನ್ ವ್ಯಂಗ್ಯ ಚಳವಳಿ ಮಾತ್ರ
ಪ್ರಸ್ತುತ ಒಟ್ಟು ಸದಸ್ಯರ ಸಂಖ್ಯೆ instagram followers 50 ಲಕ್ಷ ದಾಟಿದೆ
ದೀಪ್ಕೆ ಅವರ ಮುಂದಿನ ಯೋಜನೆ: ಸದಸ್ಯರನ್ನು ನೇರವಾಗಿ ತೊಡಗಿಸಿಕೊಳ್ಳುವ “Gen Z ವರ್ಚುಯಲ್ ಸಮಾವೇಶ” ನಡೆಸುವುದು. ಇದು ನಿಜವಾದ ರಾಜಕೀಯ ಪಕ್ಷವಾಗಬಹುದೇ ಎಂಬ ಪ್ರಶ್ನೆಗೆ ಅವರ ಉತ್ತರ ಸ್ಪಷ್ಟ: “ಹೆಸರು ಬದಲಾಯಿಸುವ ಮಾತೇ ಇಲ್ಲ. ಯುವಕರು ಇದರ ಜೊತೆ ಗುರುತಿಸಿಕೊಳ್ಳುತ್ತಾರೆ. ‘ಕಾಕ್‌ರೋಚ್’ ಎಂಬ ಪದ ಬದುಕುಳಿಯುವ ಶಕ್ತಿಯ ಸಂಕೇತ.”

ನಗಿಸುತ್ತಲೇ ಚಿಂತನೆಗೆ ಹಚ್ಚುವ ಚಳವಳಿ
“ಕಾಕ್‌ರೋಚ್ ಜನತಾ ಪಾರ್ಟಿ” ಇಂದಿನ ಭಾರತದ ಯುವಜನರ ಒಂದು ಅನನ್ಯ ಅಭಿವ್ಯಕ್ತಿ. ಇದು ಬರಿಯ ಮೀಮ್ ಸಂಸ್ಕೃತಿಯಲ್ಲ; ಇದು ವ್ಯವಸ್ಥೆ ವಿಫಲವಾದಾಗ ತಮ್ಮ ದನಿ ಎತ್ತಲು ಹೊಸ ದಾರಿ ಹುಡುಕಿಕೊಂಡ ಒಂದು ತಲೆಮಾರಿನ ಕಥೆ.

ನಿರುದ್ಯೋಗ, ಪರೀಕ್ಷಾ ಅಕ್ರಮ, ಸಂಸ್ಥೆಗಳ ಮೇಲಿನ ನಂಬಿಕೆ ಕಡಿಮೆಯಾಗುತ್ತಿರುವುದು – ಇವು ಹಾಸ್ಯದಲ್ಲಿ ಕಾಣಿಸಿಕೊಂಡರೂ ಅವು ಭಾರತದ ಪ್ರಮುಖ ಸಾಮಾಜಿಕ ಪ್ರಶ್ನೆಗಳು. ಯಾವ ರಾಜಕಾರಣಿಗಳ ಮಾತೂ ತಲುಪದ ಜಾಗದಲ್ಲಿ ಒಂದು ಮೀಮ್ ತಲುಪಿದೆ ಎಂದರೆ, ಆ ವ್ಯವಸ್ಥೆ ಮತ್ತೆ ತನ್ನನ್ನು ತಾನು ಪ್ರಶ್ನಿಸಿಕೊಳ್ಳಬೇಕಾಗಿದೆ.
“ಕಾಕ್‌ರೋಚ್”ಗಳು ಬದುಕುಳಿಯುತ್ತಾರೆ – ಇದು ಅವರ ಸಂದೇಶ. ಆದರೆ ಅವರನ್ನು ಬದುಕಿಸಲು ವ್ಯವಸ್ಥೆ ಮಾಡಬಹುದಾದರೆ, ಅದು ಇನ್ನೂ ಉತ್ತಮ ಎಂದು ಈ ಚಳವಳಿ ಸ್ಪಷ್ಟವಾಗಿ ಸೂಚಿಸುತ್ತಿದೆ.

You cannot copy content of this page

Exit mobile version