ಸಿಬಿಎಸ್‌ಇ-ನೀಟ್ (CBSE-NEET) ಪರೀಕ್ಷಾ ಅಕ್ರಮ ಮತ್ತು ಗೊಂದಲಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಜೂನ್ 11 ರಿಂದ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿದೆ. ಜೂನ್ 6 ರಂದು ನವದೆಹಲಿಯಲ್ಲಿ ನಡೆದ ಯಶಸ್ವಿ ಪ್ರತಿಭಟನೆಯ ನಂತರ, ಈ ಯುವ ಆಂದೋಲನವನ್ನು ಮತ್ತಷ್ಟು ತೀವ್ರಗೊಳಿಸಲು ಸಂಘಟನೆ ಮುಂದಾಗಿದೆ.
ಒಂದು ವೇಳೆ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಮುಂಬರುವ ಜೂನ್ 20 ರಂದು ದೆಹಲಿಯ ಪ್ರಖ್ಯಾತ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ನಲ್ಲಿ ಬೃಹತ್ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ. ಇದಕ್ಕೂ ಮುನ್ನ, ಜೂನ್ 11 ರಿಂದ ಮಹಾರಾಷ್ಟ್ರದ ಪುಣೆಯಿಂದ ರಾಷ್ಟ್ರವ್ಯಾಪಿ ಪ್ರತಿಭಟನಾ ಅಭಿಯಾನ ಆರಂಭವಾಗಲಿದ್ದು, ಆನಂತರ ಲಕ್ನೋ, ಅಮೃತಸರ, ಬೆಂಗಳೂರು, ಜೈಪುರ ಮತ್ತು ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸರಣಿ ಪ್ರತಿಭಟನೆಗಳು ನಡೆಯಲಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಸಂಘಟನೆಯ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಬೋಸ್ಟನ್‌ನಿಂದ ಭಾರತಕ್ಕೆ ಮರಳಿದ ಬೆನ್ನಲ್ಲೇ ಜೂನ್ 6 ರಂದು ದೆಹಲಿಯಲ್ಲಿ ಮೊದಲ ಹಂತದ ಪ್ರತಿಭಟನೆ ನಡೆಸಲಾಗಿತ್ತು. “ಜೂನ್ 6 ರಂದು ಜಂತರ್ ಮಂತರ್‌ನಲ್ಲಿ ಸೇರಿದ ಐತಿಹಾಸಿಕ ಜನಸ್ತೋಮವು ಈ ದೇಶದ ಯುವಶಕ್ತಿ ಸರ್ಕಾರವನ್ನು ಪ್ರಶ್ನಿಸಲು ಹೆದರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ನಿರಂತರ ಪರೀಕ್ಷಾ ವೈಫಲ್ಯಗಳು, ಪೇಪರ್ ಲೀಕ್ (ಪ್ರಶ್ನೆಪತ್ರಿಕೆ ಸೋರಿಕೆ), ತಾಂತ್ರಿಕ ದೋಷಗಳು ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದಿಂದಾಗಿ ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಲಾಗುತ್ತಿದ್ದು, ಇದಕ್ಕೆ ಶಿಕ್ಷಣ ಸಚಿವರೇ ನೇರ ಹೊಣೆಗಾರರಾಗಬೇಕು ಎಂದು ದೇಶಾದ್ಯಂತದ ವಿದ್ಯಾರ್ಥಿಗಳು ಒಗ್ಗೂಡಿದ್ದಾರೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಲಕ್ಷಾಂತರ ಕುಟುಂಬಗಳು ಮತ್ತು ಯುವಕರ ಭವಿಷ್ಯವನ್ನು ಪಣಕ್ಕಿಟ್ಟಿರುವ ಈ ಗಂಭೀರ ಸಮಸ್ಯೆಗೆ ಶಿಕ್ಷಣ ಸಚಿವರು ಜವಾಬ್ದಾರಿ ಹೊರಲು ವಿಫಲರಾಗಿದ್ದಾರೆ. ನಾಯಕತ್ವದ ಉನ್ನತ ಮಟ್ಟದಿಂದಲೇ ಉತ್ತರದಾಯಿತ್ವ ಆರಂಭವಾಗಬೇಕಿರುವುದರಿಂದ ಅವರ ರಾಜೀನಾಮೆಗೆ ಪಟ್ಟು ಹಿಡಿಯಲಾಗಿದೆ. ಸರ್ಕಾರ ಈ ಬೇಡಿಕೆಗೆ ಮಣಿಯದಿದ್ದರೆ ಜೂನ್ 20 ರಂದು ದೆಹಲಿಯಲ್ಲಿ ಸಚಿವರು ರಾಜೀನಾಮೆ ನೀಡುವವರೆಗೂ ಅನಿರ್ದಿಷ್ಟಾವಧಿ ಶಾಂತಿಯುತ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಸಲಾಗಿದ್ದು, ದೇಶದ ಶಿಕ್ಷಣ ವ್ಯವಸ್ಥೆಯ ಪಾವಿತ್ರ್ಯತೆಯನ್ನು ರಕ್ಷಿಸಲು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಈ ಹೋರಾಟದಲ್ಲಿ ಕೈಜೋಡಿಸುವಂತೆ ಸಂಘಟನೆ ಕರೆ ನೀಡಿದೆ.
