ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲು ಪಾಲಾಗಿರುವ ಸ್ವಯಂಘೋಷಿತ ಸ್ವಾಮೀಜಿ ಆಸಾರಾಂ ಬಾಪುಗೆ ರಾಜಸ್ಥಾನ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿದ್ದು, ಜೈಲಿನಲ್ಲಿ ಅವರಿಗೆ ಅಲ್ಕಲೈನ್ ನೀರು, ಹೊರಗಿನ ಆಹಾರ ಹಾಗೂ ಪ್ರತ್ಯೇಕ ಹಾಸಿಗೆ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ಮುಂದುವರಿಸುವಂತೆ ಜೋಧ್‌ಪುರ ಕೇಂದ್ರ ಜೈಲು ಆಡಳಿತ ಮಂಡಳಿಗೆ ಮಹತ್ವದ ನಿರ್ದೇಶನ ನೀಡಿದೆ.
ಆಸಾರಾಂ ಪರ ಸಲ್ಲಿಕೆಯಾಗಿದ್ದ ಕ್ರಿಮಿನಲ್ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಪುರೋಹಿತ್ ಅವರು ಈ ಆದೇಶ ಹೊರಡಿಸಿದ್ದಾರೆ. “ಒಬ್ಬ ಕೈದಿಯ ಅಪೀಲು ವಜಾಗೊಂಡ ತಕ್ಷಣವೇ ಆತನ ವಯಸ್ಸು ಮತ್ತು ಆರೋಗ್ಯದ ಅಗತ್ಯತೆಗಳು ಕೊನೆಗೊಳ್ಳುವುದಿಲ್ಲ” ಎಂದು ನ್ಯಾಯಾಲಯ ಮಾರ್ಮಿಕವಾಗಿ ನುಡಿದಿದೆ. ಆಸಾರಾಂ ಅವರ ವೈದ್ಯಕೀಯ ಅಗತ್ಯತೆಗಳು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಹಿಂದೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನೀಡಿದ್ದ ಎಲ್ಲಾ ಸೌಲಭ್ಯಗಳನ್ನು ಮುಂದುವರಿಸಬೇಕು ಎಂದು ಕೋರ್ಟ್ ತಿಳಿಸಿದೆ.
ಜೈಲು ಮಂಡಳಿಯ ಕ್ರಮಕ್ಕೆ ಹೈಕೋರ್ಟ್ ಬ್ರೇಕ್: ಮೇ 28 ರಂದು ಆಸಾರಾಂ ಅವರ ಮಧ್ಯಂತರ ಜಾಮೀನು ರದ್ದಾದ ನಂತರ ಅವರು ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದರು. ಇದರ ಬೆನ್ನಲ್ಲೇ ಜೈಲು ಆಡಳಿತ ಮಂಡಳಿಯು ಅವರಿಗೆ ನೀಡಲಾಗುತ್ತಿದ್ದ ಹಲವು ವಿಶೇಷ ಸೌಲಭ್ಯಗಳನ್ನು ಹಿಂಪಡೆದಿತ್ತು. ಇದನ್ನು ಪ್ರಶ್ನಿಸಿ ಆಸಾರಾಂ ಪರ ವಕೀಲರಾದ ಆರ್.ಎಸ್. ಸಲೂಜಾ ಮತ್ತು ಯಶ್‌ಪಾಲ್ ಸಿಂಗ್ ರಾಜಪುರೋಹಿತ್ ಕೋರ್ಟ್ ಮೆಟ್ಟಿಲೇರಿದ್ದರು. 85 ವರ್ಷದ ಆಸಾರಾಂ ಅವರು ತೀವ್ರ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಮೂತ್ರಪಿಂಡದ ಸಮಸ್ಯೆ, ಅಸ್ಥಿರಂಧ್ರತೆ (ಆಸ್ಟಿಯೋಪೊರೋಸಿಸ್) ಸೇರಿದಂತೆ ಹಲವು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ವೈದ್ಯಕೀಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಹೈಕೋರ್ಟ್ ನೀಡಿದ ಪ್ರಮುಖ ರಿಯಾಯಿತಿಗಳು:
- ಹೊರಗಿನ ಆಹಾರ ಮತ್ತು ನೀರು: ಆಸಾರಾಂ ಅವರಿಗೆ ಖಾಸಗಿ ಮೂಲಗಳಿಂದ ಬರುವ ಒಂದು ಹೊತ್ತಿನ ಊಟ ಹಾಗೂ ಅಲ್ಕಲೈನ್ ಕುಡಿಯುವ ನೀರನ್ನು ಸರಬರಾಜು ಮಾಡಲು ಕೋರ್ಟ್ ಅನುಮತಿ ಮುಂದುವರಿಸಿದೆ.
- ನೆರವಿಗಾಗಿ ಸಹಾಯಕರು: ಜೈಲಿನಲ್ಲಿ ಆಸಾರಾಂಗೆ ಸಹಾಯ ಮಾಡಲು ಇಬ್ಬರು ಸಹಾಯಕರನ್ನು ನೇಮಿಸಲು ಅನುಮತಿಸಲಾಗಿದೆ. ಆದರೆ, ತಮ್ಮದೇ ಆಯ್ಕೆಯ ಸಹಾಯಕರನ್ನು ನೇಮಿಸಬೇಕೆಂಬ ಆಸಾರಾಂ ಬೇಡಿಕೆಯನ್ನು ತಿರಸ್ಕರಿಸಿರುವ ಕೋರ್ಟ್, ಜೈಲು ಆಡಳಿತವೇ ಸೂಕ್ತ ವ್ಯಕ್ತಿಗಳನ್ನು ಗುರುತಿಸಿ ನೇಮಿಸಲಿದೆ ಎಂದು ಹೇಳಿದೆ.
- ಖಾಸಗಿ ವೈದ್ಯರ ಭೇಟಿ: ಆಸಾರಾಂ ಅವರ ವೈಯಕ್ತಿಕ ವೈದ್ಯರಾದ ಡಾ. ಸಚಿತ್ ಭೋಲಾ ಅವರು ಪ್ರತಿ 15 ದಿನಗಳಿಗೊಮ್ಮೆ ಜೈಲಿಗೆ ಭೇಟಿ ನೀಡಿ ತಪಾಸಣೆ ನಡೆಸಲು ಕೋರ್ಟ್ ಸಮ್ಮತಿಸಿದೆ. ಆದರೆ, ಶಾಶ್ವತ ಖಾಸಗಿ ಆಂಬ್ಯುಲೆನ್ಸ್ ಸೌಲಭ್ಯವನ್ನು ನಿರಾಕರಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ಸೂಕ್ತ ಆಂಬ್ಯುಲೆನ್ಸ್ ಒದಗಿಸುವಂತೆ ಜೈಲು ಮಂಡಳಿಗೆ ಸೂಚಿಸಿದೆ.
ಜೀವಾವಧಿ ಶಿಕ್ಷೆ ಎತ್ತಿಹಿಡಿದಿದ್ದ ಹೈಕೋರ್ಟ್: ಇತ್ತೀಚೆಗಷ್ಟೇ ರಾಜಸ್ಥಾನ ಹೈಕೋರ್ಟ್‌ನ ದ್ವಿಸದಸ್ಯ ಪೀಠವು 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆಸಾರಾಂಗೆ ಕೆಳ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು ಹಾಗೂ ಅವರ ಮಧ್ಯಂತರ ಜಾಮೀನನ್ನು ರದ್ದುಗೊಳಿಸಿ ತಕ್ಷಣವೇ ಶರಣಾಗುವಂತೆ ಆದೇಶಿಸಿತ್ತು. “ಜೈಲಿನ ಗೋಡೆಗಳು ಆರೋಪಿಯನ್ನು ಬಂಧಿಸಬಹುದೇ ಹೊರತು ಸಂತ್ರಸ್ತೆ ಅನುಭವಿಸುತ್ತಿರುವ ಜೀವಮಾನದ ಆಘಾತವನ್ನಲ್ಲ” ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಇದೇ ವೇಳೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಹ-ಆರೋಪಿಗಳಾದ ಹಾಸ್ಟೆಲ್ ವಾರ್ಡನ್ ಶಿಲ್ಪಿ ಮತ್ತು ಗುರುಕುಲದ ನಿರ್ದೇಶಕ ಶರತ್ ಚಂದ್ರ ಅವರನ್ನು ಕೋರ್ಟ್ ಖುಲಾಸೆಗೊಳಿಸಿತ್ತು. 2018ರಲ್ಲಿ ವಿಚಾರಣಾ ನ್ಯಾಯಾಲಯವು ಆಸಾರಾಂಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಪ್ರಸ್ತುತ ಹೈಕೋರ್ಟ್‌ನ ನೂತನ ಆದೇಶದ ಬೆನ್ನಲ್ಲೇ ಅವರು ಜೋಧ್‌ಪುರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
