ಉತ್ತರಾಖಂಡದ ಪವಿತ್ರ ಧಾರ್ಮಿಕ ನಗರಿ ಹರಿದ್ವಾರದಲ್ಲಿ “ವೆಜ್ ಬಿರಿಯಾನಿ” ಎಂಬ ಪದದ ಬಳಕೆಯ ವಿರುದ್ಧ ಹೊಸದೊಂದು ಅಭಿಯಾನ ಆರಂಭವಾಗಿದ್ದು, ನಗರದಾದ್ಯಂತ ಇರುವ ಆಹಾರದ ಅಂಗಡಿಗಳು ಹಾಗೂ ಹೋಟೆಲ್‌ಗಳ ನಾಮಫಲಕಗಳಲ್ಲಿನ ‘ವೆಜ್ ಬಿರಿಯಾನಿ’ ಎಂಬ ಹೆಸರನ್ನು ತೆಗೆಸಿ ಅದರ ಜಾಗದಲ್ಲಿ “ವೆಜ್ ಪಲಾವ್” ಎಂಬ ಬೋರ್ಡ್‌ಗಳನ್ನು ಹಾಕಲಾಗುತ್ತಿದೆ. ಈ ವಿಶಿಷ್ಟ ಅಭಿಯಾನವು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹರಿದ್ವಾರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ಮಿತೆಯನ್ನು ರಕ್ಷಿಸುವ ಉದ್ದೇಶದಿಂದ ‘ಅಖಂಡ ಪರಶುರಾಮ್ ಅಖಾಡ’ ಹಾಗೂ ಸ್ಥಳೀಯ ಸಾಧು-ಸಂತರ ಸಮುದಾಯವು ಈ ಅಭಿಯಾನವನ್ನು ಜಂಟಿಯಾಗಿ ಹಮ್ಮಿಕೊಂಡಿದೆ. ‘ಶ್ರೀ ಹಿಂದೂ ತಖ್ತ್’ ರಾಜ್ಯ ಘಟಕದ ಅಧ್ಯಕ್ಷ ಯಶ್ ದೇವ್ ಕೌಶಿಕ್ ಅವರ ನೇತೃತ್ವದಲ್ಲಿ ವಿವಿಧ ಸಂತರ ಸಂಘಟನೆಗಳು, ಬ್ರಾಹ್ಮಣ ಸಮಾಜದ ಮುಖಂಡರು ಮತ್ತು ಮುಸ್ಲಿಂ ಸಮುದಾಯದ ಕೆಲವು ಪ್ರಮುಖ ನಿವಾಸಿಗಳು ಹರಿದ್ವಾರ ಮತ್ತು ಕಂಖಾಲ್ ಭಾಗದ ಹೋಟೆಲ್‌ಗಳು, ರಸ್ತೆ ಬದಿಯ ಆಹಾರದ ಮಳಿಗೆಗಳಿಗೆ ಖುದ್ದಾಗಿ ಭೇಟಿ ನೀಡಿ ‘ವೆಜ್ ಬಿರಿಯಾನಿ’ ಎಂದು ಬರೆಯಲಾಗಿದ್ದ ಪೋಸ್ಟರ್‌ಗಳನ್ನು ತೆರವುಗೊಳಿಸಿ, ‘ವೆಜ್ ಪಲಾವ್’ ಎಂಬ ಹೊಸ ಬೋರ್ಡ್‌ಗಳನ್ನು ವಿತರಿಸಿದ್ದಾರೆ.
ಹರಿದ್ವಾರದ ಧಾರ್ಮಿಕ ಅನನ್ಯತೆ ಕಾಪಾಡಲು ಕ್ರಮ: ಈ ಅಭಿಯಾನದ ಕುರಿತು ಮಾತನಾಡಿದ ಯಶ್ ದೇವ್ ಕೌಶಿಕ್, “ಹರಿದ್ವಾರವು ಹಿಂದೂಗಳ ಅತ್ಯಂತ ಪವಿತ್ರ ಮತ್ತು ಧಾರ್ಮಿಕ ನಗರಿಯಾಗಿದೆ. ಹೀಗಾಗಿ ಇಲ್ಲಿನ ಮಾಯಾಪುರಿ ಮತ್ತು ಹರ್ ಕಿ ಪೌರಿಯಂತಹ ಪವಿತ್ರ ಪ್ರದೇಶಗಳಲ್ಲಿ ‘ಬಿರಿಯಾನಿ’ ಎಂಬ ಪದದ ಬದಲು ‘ಪಲಾವ್’ ಎಂಬ ಹೆಸರನ್ನೇ ಬಳಸಬೇಕು. ಸಾಮಾನ್ಯವಾಗಿ ಬಿರಿಯಾನಿ ಎಂಬ ಪದವನ್ನು ಕೇಳಿದ ತಕ್ಷಣ ಜನರ ಮನಸ್ಸಿನಲ್ಲಿ ಮಾಂಸಾಹಾರಿ ಆಹಾರದ ಚಿತ್ರಣ ಮೂಡುತ್ತದೆ. ಆದರೆ, ಪಲಾವ್ ಎಂಬುದು ಭಾರತೀಯ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಮತ್ತು ಸನಾತನ ಸಂಸ್ಕೃತಿಗೆ ಅತ್ಯಂತ ನಿಕಟವಾದ ಪದವಾಗಿದೆ. ಹರಿದ್ವಾರದ ಪಾವಿತ್ರ್ಯತೆ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ಈ ಬದಲಾವಣೆ ಅಗತ್ಯ” ಎಂದು ಪ್ರತಿಪಾದಿಸಿದ್ದಾರೆ.
ಸಾಧು-ಸಂತರ ಪೂರ್ಣ ಬೆಂಬಲ: ಈ ನೂತನ ಅಭಿಯಾನಕ್ಕೆ ಜುನಾ ಅಖಾಡದ ಸಾಧುಗಳು ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಹರಿದ್ವಾರದ ಪ್ರಸಿದ್ಧ ಮಾಯಾದೇವಿ ದೇವಾಲಯದ ಮುಖ್ಯ ಅರ್ಚಕರಾದ ಭಾಸ್ಕರ್ ಪುರಿ ಮಹಾರಾಜ್ ಅವರು ಮಾತನಾಡಿ, “ಭಾಷೆ ಮತ್ತು ಪದಗಳು ಸಮಾಜದ ಮೇಲೆ ಹಾಗೂ ಜನರ ಆಹಾರ ಪದ್ಧತಿಯ ಆಲೋಚನೆಗಳ ಮೇಲೆ ತೀವ್ರವಾದ ಪ್ರಭಾವ ಬೀರುತ್ತವೆ. ಬಿರಿಯಾನಿ ಬದಲಿಗೆ ಪಲಾವ್ ಎಂಬ ಪದವನ್ನು ಬಳಸುವುದರಿಂದ ಜನರ ಗ್ರಹಿಕೆಯಲ್ಲಿ ದೊಡ್ಡ ಬದಲಾವಣೆ ತರಬಹುದು. ಗಂಗಾ ನದಿಯ ತೀರ ಹಾಗೂ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ಈ ಹೆಜ್ಜೆ ಶ್ಲಾಘನೀಯ” ಎಂದಿದ್ದಾರೆ.
ಮುಸ್ಲಿಂ ಸಮುದಾಯದ ಮುಖಂಡರೂ ಭಾಗಿ: ಈ ಅಭಿಯಾನದಲ್ಲಿ ಸ್ಥಳೀಯ ಮುಸ್ಲಿಂ ಸಮುದಾಯದ ಕೆಲವು ನಾಯಕರು ಭಾಗವಹಿಸಿರುವುದು ವಿಶೇಷ ಗಮನ ಸೆಳೆದಿದೆ. ‘ನ್ಯಾಷನಲ್ ಸೂಫಿ ಸೇಂಟ್ ಫೌಂಡೇಶನ್’ ಅಧ್ಯಕ್ಷ ನೌಶಾದ್ ಅಲಿ ಶಬ್ರಿ ಮಾತನಾಡಿ, “ಬಿರಿಯಾನಿ ಮತ್ತು ಪಲಾವ್ ಎರಡೂ ಮೂಲತಃ ಪರ್ಷಿಯನ್ ಭಾಷೆಯಿಂದ ಬಂದ ಪದಗಳಾಗಿದ್ದರೂ, ಪಲಾವ್ ಎಂಬುದು ಭಾರತೀಯ ಸಂಸ್ಕೃತಿಯ ಬೇರುಗಳೊಂದಿಗೆ ಹಾಸುಹೊಕ್ಕಾಗಿದೆ. ಒಂದು ನಿರ್ದಿಷ್ಟ ಪದದ ಬಳಕೆಯಿಂದ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದ್ದರೆ ಅಥವಾ ನೋವಾಗುತ್ತಿದ್ದರೆ, ಅದಕ್ಕೆ ಪರ್ಯಾಯವಾಗಿ ಮತ್ತೊಂದು ಸೂಕ್ತ ಪದವನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಹೇಳುವ ಮೂಲಕ ಸಂತರ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.
