ಎಸ್‌ಐಆರ್ ಪ್ರಕ್ರಿಯೆಗೆ ಶಿಕ್ಷಕರ ಬಳಕೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದೆಹಲಿ ಹೈಕೋರ್ಟ್
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯಕ್ಕಾಗಿ ಶಾಲಾ ಶಿಕ್ಷಕರನ್ನು ನಿಯೋಜಿಸಿರುವುದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಭಾರತೀಯ ಚುನಾವಣಾ ಆಯೋಗವನ್ನು (ECI) ತೀವ್ರವಾಗಿ ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರನ್ನೊಳಗೊಂಡ ಪೀಠವು, ಚುನಾವಣಾ ಆಯೋಗವು ಸಂವಿಧಾನದ ವಿಧಿ 324 ಅನ್ನು ಬಳಸಿಕೊಂಡು ತನ್ನಿಷ್ಟದಂತೆ ನಡೆದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿತು. “ವಿಧಿ 324 ರ ನೆಪದಲ್ಲಿ ನೀವು ಏನು ಬೇಕಾದರೂ ಮಾಡುತ್ತೀರಾ?” ಎಂದು ಪೀಠವು ಕಿಡಿಕಾರಿತು.
‘ಬಾರ್ ಅಂಡ್ ಬೆಂಚ್’ ವರದಿಯ ಪ್ರಕಾರ, “ನಿಮ್ಮ ಗೌರವಧನ ಅಥವಾ ಪರಿಹಾರದಲ್ಲಿ ಯಾರಿಗೂ ಆಸಕ್ತಿಯಿಲ್ಲ. ನೀವು ನೀಡಿರುವ ಈ ನಿರ್ದೇಶನಗಳು ಕಡ್ಡಾಯವೇ? ‘ನಾವು ಪರಿಹಾರ ನೀಡುತ್ತಿದ್ದೇವೆ, ದಯವಿಟ್ಟು ಬನ್ನಿ’ ಎಂದು ಹೇಳಲು ಸಾಧ್ಯವೇ? ನೀವು ಅವರ ರಜಾದಿನಗಳನ್ನು ಹಾಳು ಮಾಡುತ್ತಿದ್ದೀರಾ? ಅವರಿಗೆ ವಿಶ್ರಾಂತಿಯ ಅಗತ್ಯವಿಲ್ಲವೇ?” ಎಂದು ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು.
ಯಾವ ಅಧಿಕಾರದ ಅಡಿಯಲ್ಲಿ ಶಾಲಾ ಶಿಕ್ಷಕರಿಗೆ ಎಸ್‌ಐಆರ್ ಕೆಲಸ ಮಾಡಲು ನಿರ್ದೇಶನ ನೀಡಲಾಗುತ್ತಿದೆ ಎಂದು ನ್ಯಾಯಾಲಯ ಆಯೋಗವನ್ನು ಪ್ರಶ್ನಿಸಿತು. ಕೆಲಸ ಮಾಡದ ಶಿಕ್ಷಕರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬಹುದು ಅಥವಾ ಶಿಕ್ಷಿಸಬಹುದು ಎಂದು ನ್ಯಾಯಪೀಠ ಉಲ್ಲೇಖಿಸಿತು.
ಚುನಾವಣಾ ಆಯೋಗದ ಪರವಾಗಿ ವಾದ ಮಂಡಿಸಿದ ವಕೀಲ ಸಂಜಯ್ ವಸಿಷ್ಠ, ದೆಹಲಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದ್ದು, ಕೇವಲ ಶೇ. 10 ರಿಂದ 14 ರಷ್ಟು ಶಾಲಾ ಶಿಕ್ಷಕರನ್ನು ಮಾತ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 13B (2) ರ ಅಡಿಯಲ್ಲಿ ಆಯೋಗಕ್ಕೆ ಸಿಬ್ಬಂದಿಯನ್ನು ನಿಯೋಜಿಸುವ ಅಧಿಕಾರವಿದ್ದು, ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಈ ಅಧಿಕಾರವನ್ನು ಉದಾರವಾಗಿ ಬಳಸಲಾಗುತ್ತಿದೆ ಎಂದು ವಾದಿಸಿದರು.
ಆದರೆ, ಆಯೋಗವು ಸಿಬ್ಬಂದಿಯನ್ನು “ಸ್ವಯಂಸೇವಕರು” ಎಂದು ಕರೆದರೂ, ಶಿಕ್ಷಕರಿಗೆ ಎಸ್‌ಐಆರ್ ಕರ್ತವ್ಯವನ್ನು ನಿರಾಕರಿಸುವ ಯಾವುದೇ ಆಯ್ಕೆ ಇಲ್ಲದಿರುವುದನ್ನು ನ್ಯಾಯಾಲಯ ಗಮನಿಸಿತು. “ಇದು ಸಂಪೂರ್ಣ ಸ್ವಯಂಪ್ರೇರಿತ ಎಂದು ಸ್ಪಷ್ಟ ಹೇಳಿಕೆ ನೀಡಿ, ನಾವು ಅರ್ಜಿಯನ್ನು ವಿಲೇವಾರಿ ಮಾಡುತ್ತೇವೆ” ಎಂದು ಕೋರ್ಟ್ ತಿಳಿಸಿತು.
ರಜಾದಿನಗಳಲ್ಲಿ ಮತ್ತು ಬೋಧನೇತರ ಸಮಯಗಳಲ್ಲಿ ಮಾತ್ರ ಶಿಕ್ಷಕರು ಕೆಲಸ ಮಾಡಬೇಕಾಗುತ್ತದೆ ಎಂದು ಆಯೋಗ ತಿಳಿಸಿದಾಗ, ಸಾಮಾನ್ಯ ಸರ್ಕಾರಿ ನೌಕರರಂತೆ ಶಿಕ್ಷಕರು ತಮ್ಮ ರಜಾದಿನಗಳಿಗೆ ಏಕೆ ಅರ್ಹರಲ್ಲ ಮತ್ತು ಅವರು ರಜಾದಿನಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳಾಗಿ (BLO) ಏಕೆ ಕೆಲಸ ಮಾಡಬೇಕು ಎಂದು ನ್ಯಾಯಾಲಯ ಪ್ರಶ್ನಿಸಿತು.
ಈ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿ ಅಫಿಡವಿಟ್ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಜುಲೈ 28 ಕ್ಕೆ ಕಾಯ್ದಿರಿಸಿದೆ.
ಎಸ್‌ಐಆರ್ ಕರ್ತವ್ಯಕ್ಕೆ ಶಿಕ್ಷಕರ ಸೇವೆ ಪಡೆದುಕೊಳ್ಳುವ ಇಸಿಐ ನಿರ್ಧಾರವನ್ನು ಪ್ರಶ್ನಿಸಿ ವಕೀಲರಾದ ರಾಜೇಶ್ ಕುಮಾರ್ ಗೋಗ್ನಾ ಮತ್ತು ಅಶೋಕ್ ಅಗರ್ವಾಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. ಹಲವು ಶಾಲೆಗಳಲ್ಲಿ ಬೋಧನಾ ವೇಳೆಯಲ್ಲಿ ಸಂಪೂರ್ಣ ಖಾಯಂ ಶಿಕ್ಷಕರು ಗೈರುಹಾಜರಾಗುತ್ತಿದ್ದು, ಅತಿಥಿ ಶಿಕ್ಷಕರು ಅಥವಾ ಇತರ ವಿಷಯಗಳ ಶಿಕ್ಷಕರಿಂದ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಖಾಸಗಿ ಅನುದಾನರಹಿತ ಶಾಲೆಗಳಿಗೆ ವಿನಾಯಿತಿ ನೀಡಿ, ಈ ಹೊಣೆಯನ್ನು ಸಂಪೂರ್ಣವಾಗಿ ಬಡವರ ಮಕ್ಕಳೇ ಕಲಿಯುವ ಸರ್ಕಾರಿ ಶಾಲೆಗಳ ಮೇಲೆ ಹೇರಲಾಗಿದೆ ಎಂದು ಆರೋಪಿಸಲಾಗಿದೆ. ಈ ನಿಯೋಜನೆಯು ‘ಇಸಿಐ ವಿರುದ್ಧ ಸೆಂಟ್ ಮೇರಿಸ್ ಸ್ಕೂಲ್’ ಪ್ರಕರಣದಲ್ಲಿ ನೀಡಲಾದ ತೀರ್ಪಿಗೆ ವಿರುದ್ಧವಾಗಿದೆ ಹಾಗೂ ಆರ್‌ಟಿಇ (RTE) ಕಾಯ್ದೆ 2009 ರ ಸೆಕ್ಷನ್ 27 ರ ಉಲ್ಲಂಘನೆಯಾಗಿದೆ ಎಂದು ವಾದಿಸಲಾಗಿದೆ.
ಎಸ್‌ಐಆರ್ ಕರ್ತವ್ಯವು ರಜಾದಿನಗಳು ಅಥವಾ ಬೋಧಕೇತರ ಸಮಯಕ್ಕೆ ಮಾತ್ರ ಸೀಮಿತವಾಗಿಲ್ಲ; ಶಿಕ್ಷಕರು ಇಡೀ ದಿನದ ತರಬೇತಿ ಶಿಬಿರಗಳಲ್ಲಿ ಭಾಗವಹಿಸಬೇಕಾಗುತ್ತದೆ, ಶಾಲಾ ವೇಳೆಯಲ್ಲೇ ಮನೆ ಮನೆಗೆ ತೆರಳಿ ಜನಗಣತಿ/ಪರಿಶೀಲನೆ ನಡೆಸಬೇಕಾಗುತ್ತದೆ ಮತ್ತು ದೀರ್ಘಾವಧಿಯ ಡೇಟಾ ಎಂಟ್ರಿ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಶಾಲಾ ಬೋಧನೆಗೆ ನಿರಂತರ ಅಡಚಣೆಯಾಗುತ್ತಿದ್ದು, ಇದು ಕೇವಲ ಮತದಾನದ ದಿನಕ್ಕೆ ಸೀಮಿತವಾಗಿಲ್ಲ ಎಂದು ತಿಳಿಸಲಾಗಿದೆ.
ಸರ್ಕಾರಿ ಶಾಲೆಗಳು, ಪಾಲಿಕೆ ಶಾಲೆಗಳು ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದ್ದು, ಯಾವುದೇ ಖಾಸಗಿ ಶಾಲೆಗಳಿಂದ ಒಬ್ಬೇ ಒಬ್ಬ ಶಿಕ್ಷಕರನ್ನೂ ನಿಯೋಜಿಸದಿರುವುದು ತಾರತಮ್ಯದಿಂದ ಕೂಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಸರ್ಕಾರಿ ಮತ್ತು ಪಾಲಿಕೆ ಶಾಲೆಗಳಲ್ಲಿ ಮುಖ್ಯವಾಗಿ ಕೆಳ ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳ ಮಕ್ಕಳು ಓದುತ್ತಿದ್ದು, ಅವರ ಶಿಕ್ಷಣ ಮಾತ್ರ ಕುಂಠಿತಗೊಳ್ಳುತ್ತಿದೆ ಎಂದು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದಿದ್ದಾರೆ.
