Home ದೇಶ ಪ್ರಜಾಪ್ರಭುತ್ವವೋ ಅಥವಾ ದಮನಕಾರಿ ಆಡಳಿತವೋ? ನೀಟ್ ಹೋರಾಟದ ಮೇಲಿನ ಪೊಲೀಸ್ ದೌರ್ಜನ್ಯ ಹುಟ್ಟಿಸುವ ಹಲವು ಪ್ರಶ್ನೆಗಳು

ಪ್ರಜಾಪ್ರಭುತ್ವವೋ ಅಥವಾ ದಮನಕಾರಿ ಆಡಳಿತವೋ? ನೀಟ್ ಹೋರಾಟದ ಮೇಲಿನ ಪೊಲೀಸ್ ದೌರ್ಜನ್ಯ ಹುಟ್ಟಿಸುವ ಹಲವು ಪ್ರಶ್ನೆಗಳು

0

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ಹೊಣೆಗಾರಿಕೆ ನಿಗದಿಪಡಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುವುದು ವಿದ್ಯಾರ್ಥಿಗಳನ್ನು ಕ್ರೂರವಾಗಿ ಹೊಡೆಯಬಹುದಾದ ಅಥವಾ ಅವರೊಂದಿಗೆ ದುರ್ವರ್ತನೆ ತೋರುವಂತಹ ಅಪರಾಧವೇ?

ಪ್ರಜಾಸತ್ತಾತ್ಮಕ ದೇಶದ ಪ್ರಜೆಯಾಗಿ ಜನರು ಸರ್ಕಾರದ ಯಾವುದೇ ಲೋಪವನ್ನು ಪ್ರಶ್ನಿಸಿದರೆ ಅಥವಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರೆ, ಅವರನ್ನು ಸುಮ್ಮನಾಗಿಸಲು ಪೊಲೀಸರ ಬೆದರಿಕೆ ಮತ್ತು ದೌರ್ಜನ್ಯದ ಹಾದಿ ಹಿಡಿಯುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ? ನೀಟ್ 2026 ರ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಯುವಕರ ವಿರುದ್ಧ ಪೊಲೀಸರು ನಡೆದುಕೊಂಡ ರೀತಿ ಪ್ರಸಕ್ತ ಸಾಲಿನಲ್ಲಿ ಹಲವು ತೀವ್ರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ಮಾಡುವುದು ಕೊನೆಯ ಆಯ್ಕೆಯಾಗಿತ್ತೇ ಎಂಬ ಬಗ್ಗೆ ಯೋಚಿಸುವ ಸೌಜನ್ಯವನ್ನೂ ಪೊಲೀಸರು ತೋರಿಸಲಿಲ್ಲ.

ಮೊದಲನೆಯದಾಗಿ, ಚಳವಳಿನಿರತರೊಂದಿಗೆ ಸಂವಾದ ನಡೆಸಿ ಸಮಸ್ಯೆ ಬಗೆಹರಿಸುವ ಕನಿಷ್ಠ ಪ್ರಯತ್ನವೂ ನಡೆಯಲಿಲ್ಲ. ಅದಾದ ನಂತರ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಪೊಲೀಸರು ತೋರಿದ ಕ್ರೌರ್ಯ, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ನಡೆಸಿದ ಲಾಠಿಚಾರ್ಜ್ ಸರ್ಕಾರದ ಉದ್ದೇಶ ಹಾಗೂ ಪ್ರಜಾಪ್ರಭುತ್ವದ ಮೇಲಿನ ಅದರ ಹೊಣೆಗಾರಿಕೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಇದೇ ವಿಷಯವಾಗಿ ಹಾಗೂ ಜಂತರ್ ಮಂತರ್‌ನಲ್ಲಿ ನಡೆದ ಲಾಠಿಚಾರ್ಜ್ ಖಂಡಿಸಿ ಮುಂಬೈನಲ್ಲಿ ನಡೆದ ಪ್ರತಿಭಟನೆಯಲ್ಲಿ, ಪೋಲಿಸ ಅಧಿಕಾರಿಯೊಬ್ಬ ವಿದ್ಯಾರ್ಥಿಗಳಿಗೆ ಆಕ್ಷೇಪಾರ್ಹ ಹಾಗೂ ಕಾನೂನುಬಾಹಿರ ರೀತಿಯಲ್ಲಿ ಬೆದರಿಕೆ ಹಾಕಿದ್ದಾನೆ. “ಮನೆಗೆ ಹೊರಟು ಹೋಗಿ, ಇಲ್ಲದಿದ್ದರೆ ಜೇಬಿನಲ್ಲಿ ‘ಪೌಡರ್’ (ಮಾದಕ ದ್ರವ್ಯ) ಹಾಕಿ ಇಡೀ ಜೀವನ ಹಾಳು ಮಾಡುತ್ತೇನೆ” ಎಂದು ಬೆದರಿಸಿದ್ದಾನೆ.

ಶಾಂತಿಯುತ ಪ್ರಜಾಸತ್ತಾತ್ಮಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ ಅಥವಾ ಯಾವುದೇ ವ್ಯಕ್ತಿಗೆ ಪೊಲೀಸರು ಇಂತಹ ಬೆದರಿಕೆ ಹಾಕಿದರೆ ಅದನ್ನು ಹೇಗೆ ನೋಡುವುದು? ಇದು ಅಂತಿಮವಾಗಿ ಕಾನೂನಿನ ಆಡಳಿತಕ್ಕೆ ಧಕ್ಕೆ ತರುವ ಕೃತ್ಯವಲ್ಲವೇ? ವಿಶೇಷವಾಗಿ, ಕಾನೂನನ್ನು ರಕ್ಷಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೇ ಹಿಂಜರಿಕೆಯಿಲ್ಲದೆ ಕಾನೂನುಬಾಹಿರ ಬೆದರಿಕೆ ಒಡ್ಡಿದಾಗ ಪ್ರಜೆಗಳು ಯಾರನ್ನು ತಾನೆ ನಂಬಲು ಸಾಧ್ಯ?

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಜಾಗರೂಕರಾಗಿರುವುದು ಪೊಲೀಸರ ಜವಾಬ್ದಾರಿಯ ಭಾಗವಾಗಿರಬಹುದು, ಆದರೆ ಪೊಲೀಸ್ ಅಧಿಕಾರಿಯ ನಡವಳಿಕೆಯಿಂದಲೇ ಕಾನೂನಿನ ಆಡಳಿತ ಉಲ್ಲಂಘನೆಯಾದರೆ ಅದನ್ನು ಏನೆನ್ನಬೇಕು? ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುವುದು ವಿದ್ಯಾರ್ಥಿಗಳನ್ನು ನಿಷ್ಕರುಣೆಯಿಂದ ಹೊಡೆಯುವ ಅಥವಾ ಕಿರುಕುಳ ನೀಡುವಂತಹ ಸಂಗತಿಯೇ? ಅದೇ ಸಮಯದಲ್ಲಿ, ಕೆಲವು ಕಡೆಗಳಲ್ಲಿ ಪ್ರತಿಭಟನಾಕಾರರು ನಡೆಸಿದ ಗಲಾಟೆ ಹಾಗೂ ಪೊಲೀಸರ ಮೇಲಿನ ದಾಳಿಯನ್ನೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.

ಇದರ ಮಧ್ಯೆ ಮತ್ತೊಂದು ಗಂಭೀರ ಪ್ರಶ್ನೆ ಎದ್ದಿದೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿದವರಲ್ಲಿ ಪೊಲೀಸರನ್ನು ಹೊರತುಪಡಿಸಿ, ಯಾವುದೇ ಗುರುತಿನ ಚೀಟಿ ಇಲ್ಲದ ವ್ಯಕ್ತಿಗಳೂ ಸೇರಿದ್ದರು. ಅವರಲ್ಲಿ ಹಲವರು ಸಾಮಾನ್ಯ ನಾಗರಿಕರಂತಿದ್ದರು, ಮತ್ತೆ ಕೆಲವರ ಸಮವಸ್ತ್ರದ ಮೇಲೆ ಹೆಸರಿನ ಪಟ್ಟಿಯೂ ಇರಲಿಲ್ಲ. ಪ್ರತಿಭಟನಾಕಾರರ ವಿರುದ್ಧ ಈ ರೀತಿ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಆದೇಶ ನೀಡಿದವರು ಯಾರು?

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ ಮತ್ತು ಈ ನಿಟ್ಟಿನಲ್ಲಿ ಪೊಲೀಸರು ಕಠಿಣ ನಿಲುವು ತಳೆಯಬೇಕಾಗುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಜವಾಬ್ದಾರಿಯೊಂದಿಗೆ ಸರ್ಕಾರದ ಯಾವುದೇ ಕ್ರಮ ಅಥವಾ ಪ್ರಕ್ರಿಯೆಯು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ದುರ್ಬಲಗೊಳಿಸುವಂತೆ ಇರಬಾರದು ಎಂಬುದು ಕಡ್ಡಾಯ. ಸರ್ಕಾರ ಈ ತನ್ನ ಕರ್ತವ್ಯದ ಬಗ್ಗೆ ಗಮನ ಹರಿಸದಿದ್ದರೆ, ಅದಕ್ಕೆ ನಾಗರಿಕರ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಕಾಳಜಿಯಿಲ್ಲ ಎಂದೇ ಅರ್ಥ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ಪ್ರತಿಭಟನಾಕಾರರೊಂದಿಗೆ ಪೊಲೀಸರು ನಡೆದುಕೊಂಡ ರೀತಿಯಿಂದ ಸರ್ಕಾರ ಸಮಾಜಕ್ಕೆ ನೀಡಲು ಹೊರಟಿರುವ ಸಂದೇಶವಾದರೂ ಏನು?

You cannot copy content of this page

Exit mobile version