ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ತಮ್ಮ ಪ್ರಮುಖ ಬೇಡಿಕೆಗಳಿಗೆ ಸರ್ಕಾರದಿಂದ ಭರವಸೆ ಸಿಕ್ಕ ನಂತರ 26 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಗುರುವಾರ ರಾತ್ರಿ ಅಂತ್ಯಗೊಳಿಸಿದ್ದಾರೆ. ಬೇಡಿಕೆಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಭಾಗವಾಗಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳ ನಡುವೆ ಶುಕ್ರವಾರ ವಿಠಲ ಭಾಯಿ ಪಟೇಲ್ ಹೌಸ್‌ನಲ್ಲಿ ಮಹತ್ವದ ಸಭೆ ನಡೆಯಿತು. ಸರ್ಕಾರದ ಪರವಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಪಿಎಂಒ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಪಾಲ್ಗೊಂಡರೆ, ಸಿಜೆಪಿ ಪರವಾಗಿ ರಾಷ್ಟ್ರೀಯ ವಕ್ತಾರ ಸೌರವ್ ದಾಸ್ ಹಾಗೂ ಇನ್ನೊಬ್ಬ ಯುವ ಪ್ರತಿನಿಧಿ ಭಾಗವಹಿಸಿದ್ದರು.
ಪ್ರಶ್ನೆಪತ್ರಿಕೆ ಸೋರಿಕೆ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಾಗುವುದು ಹಾಗೂ ಪರೀಕ್ಷೆ ರದ್ದಾಗಿ ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ ಎಂದು ಸೋನಮ್ ವಾಂಗ್ಚುಕ್ ತಿಳಿಸಿದ್ದಾರೆ. ಆದಾಗ್ಯೂ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಜೆಪಿ ಶುಕ್ರವಾರ ಬೆಳಿಗ್ಗೆ ಸ್ಪಷ್ಟಪಡಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಪ್ರತಿಭಟನೆಯ ಹಾದಿ ಕುರಿತು ಸೋನಮ್ ವಾಂಗ್ಚುಕ್ ಮತ್ತು ಸಿಜೆಪಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆಯೇ ಎಂಬ ಪ್ರಶ್ನೆ ಎದ್ದಿದೆ.
ಸಿಜೆಪಿ ಮತ್ತು ಸೋನಮ್ ವಾಂಗ್ಚುಕ್ ನಡುವೆ ಭಿನ್ನಾಭಿಪ್ರಾಯ?
ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿದ ಸಿಜೆಪಿ ವಕ್ತಾರ ಸೌರವ್ ದಾಸ್, ತಮ್ಮ ಹಾಗೂ ಸೋನಮ್ ವಾಂಗ್ಚುಕ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾವು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಬಯಸುತ್ತೇವೆ ಮತ್ತು ವಿದ್ಯಾರ್ಥಿಗಳ ದೊಡ್ಡ ಸಮಸ್ಯೆಗಳು (ಸಂತ್ರಸ್ತ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರವೂ ಸೇರಿದಂತೆ) ಬಗೆಹರಿಯಬೇಕು. ನಾವು ಹೋರಾಟ ಆರಂಭಿಸಿದ್ದೇವೆ ಎಂದರೆ ಅದನ್ನು ಅಂತ್ಯದವರೆಗೆ ಕೊಂಡೊಯ್ಯುತ್ತೇವೆ. ನಮಗೆ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಕಳವಳವಿದೆ, ಅವರು 11 ಕೆಜಿ ತೂಕ ಕಳೆದುಕೊಂಡಿದ್ದಾರೆ. ಅವರು ಪತ್ರ ಬರೆದಿದ್ದು, ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರ ಶ್ರಮವನ್ನು ನಾವು ವ್ಯರ್ಥವಾಗಲು ಬಿಡುವುದಿಲ್ಲ, ಈ ಚಳವಳಿಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ” ಎಂದು ಅವರು ಹೇಳಿದರು.
ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಶುಕ್ರವಾರ ಬೆಳಿಗ್ಗೆ ಜಂತರ್ ಮಂತರ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಗೆ ತಾಂವು ಬದ್ಧರಾಗಿರುವುದಾಗಿ ಪುನರುಚ್ಚರಿಸಿದ್ದಾರೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ವೀಡಿಯೊ ಸಂದೇಶದ ಮೂಲಕ ದೇಶಕ್ಕೆ ಭರವಸೆ ನೀಡಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಸಂಪುಟವು ಹೊಸ ಕಾನೂನನ್ನು ರೂಪಿಸುತ್ತಿದೆ ಎಂದಿದ್ದಾರೆ. ಈ ಎಲ್ಲಾ ಘಟನಾವಳಿಗಳ ನಡುವೆಯೂ ಸಿಜೆಪಿ ನಾಯಕರು ರಾಜೀನಾಮೆ ಬೇಡಿಕೆಗೆ ಪಟ್ಟು ಹಿಡಿದಿದ್ದಾರೆ.
ರಾಹುಲ್ ಗಾಂಧಿ ಶಾಂತಿಯುತ ಪ್ರತಿಭಟನೆಗೆ ಬೆಂಬಲ – ಸೌರವ್ ದಾಸ್
ರಾಹುಲ್ ಗಾಂಧಿ ಬುಧವಾರ ಪ್ರಧಾನಿ ನಿವಾಸದ ಹೊರಗೆ ಪ್ರತಿಭಟನೆ ನಡೆಸುವ ಬದಲು ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಬೇಕಿತ್ತು ಎಂದು ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಹೇಳಿದ್ದರು. ಈ ಬಗ್ಗೆ ಮಾತನಾಡಿದ ಸಿಜೆಪಿ ವಕ್ತಾರ ದಾಸ್, “ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯವಿರುತ್ತದೆ. ರಾಹುಲ್ ಗಾಂಧಿ ಅವರ ಪ್ರತಿಭಟನೆ ಶಾಂತಿಯುತವಾಗಿರುವವರೆಗೆ ನಾನು ಅದನ್ನು ಬೆಂಬಲಿಸುತ್ತೇನೆ, ಏಕೆಂದರೆ ಅದು ಸಂವಿಧಾನದ ವ್ಯಾಪ್ತಿಯಲ್ಲಿ ಬರುತ್ತದೆ. ಜಂತರ್ ಮಂತರ್‌ನಲ್ಲೂ ನಿರ್ಬಂಧಗಳಿವೆ, ಇದು ಸಂವಿಧಾನದ ಉಲ್ಲಂಘನೆಯಾಗಿದೆ ಏಕೆಂದರೆ ಸಂವಿಧಾನ ನಮಗೆ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ನೀಡಿದೆ. ರಾಹುಲ್ ಗಾಂಧಿ ಒಳ್ಳೆಯ ಕೆಲಸ ಮಾಡಿದ್ದಾರೆ, ವಿರೋಧ ಪಕ್ಷದ ನಾಯಕರಾಗಿ ಪ್ರತಿಭಟನೆಯ ನೇತೃತ್ವ ವಹಿಸುವುದು ಅವರ ಜವಾಬ್ದಾರಿಯಾಗಿದೆ” ಎಂದಿದ್ದಾರೆ.
ಜಂತರ್ ಮಂತರ್‌ನಲ್ಲಿ ನಡೆದ ಸಮಾವೇಶದಿಂದ ಕಾಂಗ್ರೆಸ್‌ನ ಉನ್ನತ ನಾಯಕರು ದೂರ ಉಳಿದಿರುವ ಬಗ್ಗೆ ಮಾತನಾಡಿದ ಸೌರವ್ ದಾಸ್, “ನಾವು ಈ ಯಾವುದೇ ಗೊಂದಲಗಳಿಗೆ ಬೀಳಲು ಬಯಸುವುದಿಲ್ಲ. ನಾವು ಸತ್ಯದ ಹಾದಿಯಲ್ಲಿ ಚಳವಳಿ ನಡೆಸುತ್ತಿದ್ದೇವೆ. ನಮ್ಮ ಆಲೋಚನೆಗಳು ಹೊಸದಾಗಿವೆ ಮತ್ತು ದೇಶಾದ್ಯಂತ ಲಕ್ಷಾಂತರ ಜನರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ. ಕ್ರೆಡಿಟ್ ಯಾರು ತೆಗೆದುಕೊಳ್ಳುತ್ತಾರೆ, ಯಾರು ಬರುತ್ತಾರೆ ಎಂಬುದರೊಂದಿಗೆ ನಮಗೆ ಸಂಬಂಧವಿಲ್ಲ. ನಾವು ಎಲ್ಲರನ್ನೂ ಕರೆದಿದ್ದೆವು, ರಾಹುಲ್ ಗಾಂಧಿಯವರಿಗೂ ಪತ್ರ ಬರೆದಿದ್ದೆವು. ಅವರು ಬರಲಿಲ್ಲ, ಅದು ಅವರ ಇಷ್ಟ. ಹಲವು ಪ್ರಮುಖ ನಾಯಕರು ಬಂದಿದ್ದಾರೆ. ಪ್ರತಿಯೊಬ್ಬರೂ ಬಂದು ವಿದ್ಯಾರ್ಥಿಗಳಿಗೆ ಬೆಂಬಲ ನೀಡಬೇಕು. ಕ್ರೆಡಿಟ್ ಯಾರು ತೆಗೆದುಕೊಳ್ಳುತ್ತಾರೆ ಎಂಬುದು ನಮಗೆ ಮುಖ್ಯವಲ್ಲ” ಎಂದು ತಿಳಿಸಿದರು. ವಿದ್ಯಾರ್ಥಿಗಳಿಗಾಗಿ ಧ್ವನಿ ಎತ್ತುವ ಪ್ರತಿಯೊಬ್ಬರೂ ಮಹಾನ್ ಎಂದು ಅವರು ಹೇಳಿದರು.
ಅಭಿಜಿತ್ ದಿಪ್ಕೆ ಆರೋಗ್ಯ ಹೇಗಿದೆ?
ಅಭಿಜಿತ್ ದಿಪ್ಕೆ ಅವರ ಆರೋಗ್ಯದ ಬಗ್ಗೆ ಕೇಳಿದಾಗ ಸೌರವ್ ದಾಸ್, “ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ವೈದ್ಯರ ಬಳಿ ಕರೆದೊಯ್ಯಲಾಗಿತ್ತು, ಇಂಜೆಕ್ಷನ್ ನೀಡಲಾಗಿದೆ. ಆಹಾರ ವಿಷಪೂರಿತಗೊಂಡಿದ್ದರಿಂದ (ಫುಡ್ ಪಾಯ್ಸನಿಂಗ್) ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಚಳವಳಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವುದರಿಂದ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅಸ್ವಸ್ಥಗೊಳ್ಳುತ್ತಿದ್ದಾರೆ. ಆಶುತೋಷ್ ಕೂಡ ಈಗ ಆರಾಮಾಗಿದ್ದಾರೆ” ಎಂದು ಮಾಹಿತಿ ನೀಡಿದರು.
