Home ಬ್ರೇಕಿಂಗ್ ಸುದ್ದಿ 2026ರಿಂದ SSLC ಹೊಸ ನಿಯಮ: ಹಿಂದಿ ಸೇರಿದಂತೆ ತೃತೀಯ ಭಾಷೆ ಅಂಕಗಳಿಗೆ ಕೊಕ್

2026ರಿಂದ SSLC ಹೊಸ ನಿಯಮ: ಹಿಂದಿ ಸೇರಿದಂತೆ ತೃತೀಯ ಭಾಷೆ ಅಂಕಗಳಿಗೆ ಕೊಕ್

0

ರಾಜ್ಯದ SSLC ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯನ್ನು ಸರ್ಕಾರ ಘೋಷಿಸಿದೆ. ಇನ್ನುಮುಂದೆ SSLC ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಸಲಾಗಿದ್ದು, ಹಿಂದಿ ಸೇರಿದಂತೆ ತೃತೀಯ ಭಾಷೆಯ ಅಂಕಗಳನ್ನು ಒಟ್ಟು ಫಲಿತಾಂಶದಲ್ಲಿ ಪರಿಗಣಿಸದೇ ಇರಲು ತೀರ್ಮಾನಿಸಲಾಗಿದೆ.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಈ ಹೊಸ ನಿಯಮವನ್ನು 2026ರಲ್ಲಿ ನಡೆಯಲಿರುವ SSLC ಪರೀಕ್ಷೆಯಿಂದಲೇ ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದುವರೆಗೆ ವಿದ್ಯಾರ್ಥಿಗಳು 625 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದರು. ಆದರೆ ಇನ್ನುಮುಂದೆ ತೃತೀಯ ಭಾಷೆಯ 100 ಅಂಕಗಳನ್ನು ಒಟ್ಟು ಅಂಕಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ. ಆದಾಗ್ಯೂ, ಹಿಂದಿನಂತೆ ಆ ವಿಷಯಕ್ಕೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, ಅದರ ಫಲಿತಾಂಶವನ್ನು ಅಂಕಗಳ ಬದಲು “ಗ್ರೇಡ್” ರೂಪದಲ್ಲಿ ಅಂಕಪಟ್ಟಿಯಲ್ಲಿ ನಮೂದಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಈ ಕ್ರಮದಿಂದ ವಿದ್ಯಾರ್ಥಿಗಳ ಮೇಲಿನ ಅಂಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶವಿದೆ ಎಂದು ಸಚಿವರು ಹೇಳಿದ್ದಾರೆ. ಹೊಸ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಒಟ್ಟು ಅಂಕಗಳನ್ನು 525ಕ್ಕೆ ಮಾತ್ರ ಲೆಕ್ಕ ಹಾಕಲಾಗುವುದರಿಂದ ಶೇಕಡಾವಾರು ಫಲಿತಾಂಶದಲ್ಲಿಯೂ ಬದಲಾವಣೆ ಕಾಣಿಸಿಕೊಳ್ಳಲಿದೆ.

ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಈ ನಿರ್ಧಾರ ಪ್ರಮುಖ ಬದಲಾವಣೆಯಾಗಿ ಪರಿಗಣಿಸಲಾಗುತ್ತಿದ್ದು, ಹಿಂದಿ ಹೇರಿಕೆಯ ಗಂಭೀರ ವಿಷಯದ ಹಿನ್ನೆಲೆಯಲ್ಲಿ ಸರ್ಕಾರದ ಈ ನಿರ್ಧಾರದ ಬಗ್ಗೆ ಮೆಚ್ಚುಗೆಯ ಮಾತುಗಳು ಸಿಗುವ ಸಾಧ್ಯತೆ ಇದೆ.

You cannot copy content of this page

Exit mobile version