Home ದೇಶ ಕೋಲ್ಡ್ರಿಫ್ ಸಿರಪ್ ಸಾವು ಪ್ರಕರಣ: ಶ್ರೇಸನ್ ಫಾರ್ಮಾ ಮಾಲೀಕನ ಬಂಧನ

ಕೋಲ್ಡ್ರಿಫ್ ಸಿರಪ್ ಸಾವು ಪ್ರಕರಣ: ಶ್ರೇಸನ್ ಫಾರ್ಮಾ ಮಾಲೀಕನ ಬಂಧನ

0

ಚೆನ್ನೈ: ಕೆಮ್ಮಿನ ಔಷಧಿ ಎಂದರೆ ಭಯಪಡುವಂತೆ ಮಾಡಿದ ಕೋಲ್ಡ್ರಿಫ್ ಕಾಫ್ ಸಿರಪ್‌ಅನ್ನು (Coldrif Cough Syrup) ತಯಾರಿಸುತ್ತಿದ್ದ ಕಂಪನಿಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಚೆನ್ನೈನಲ್ಲಿರುವ ಶ್ರೇಸನ್ ಫಾರ್ಮಾಸ್ಯೂಟಿಕಲ್ಸ್ (Sresan Pharmaceuticals) ಕಂಪನಿಯ ಮಾಲೀಕ ರಂಗನಾಥನ್ ಅವರನ್ನು ಮಧ್ಯಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಿರಪ್ ಸೇವನೆಯಿಂದಾಗಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಇಲ್ಲಿಯವರೆಗೆ ಸುಮಾರು 20 ಮಕ್ಕಳು ಮೃತಪಟ್ಟಿದ್ದಾರೆ.

ಮಕ್ಕಳ ಸಾವು ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ, ಕಾಂಚೀಪುರಂನಲ್ಲಿರುವ ಶ್ರೇಸನ್ ಫಾರ್ಮಾಸ್ಯೂಟಿಕಲ್ಸ್‌ ಸಂಸ್ಥೆಯಲ್ಲಿ ಈ ತಿಂಗಳ 1 ಮತ್ತು 2ರಂದು ಮಧ್ಯಪ್ರದೇಶದ ಆಹಾರ ಮತ್ತು ಔಷಧ ಆಡಳಿತ (FDA) ಮತ್ತು ತಮಿಳುನಾಡಿನ ಡ್ರಗ್ಸ್ ಕಂಟ್ರೋಲ್ ಘಟಕದ ಅಧಿಕಾರಿಗಳು ತಪಾಸಣೆ ನಡೆಸಿದ್ದರು.

ಈ ತಪಾಸಣೆ ವೇಳೆ ಕೋಲ್ಡ್ರಿಫ್ ಸಿರಪ್ ತಯಾರಿಕಾ ಘಟಕದಲ್ಲಿ ಗ್ಯಾಸ್ ಸ್ಟವ್‌ಗಳ ಮೇಲೆ ರಾಸಾಯನಿಕಗಳನ್ನು ಬಿಸಿ ಮಾಡುತ್ತಿರುವುದು, ತುಕ್ಕು ಹಿಡಿದ ಉಪಕರಣಗಳು, ಕೊಳಕು ಪೈಪ್‌ಗಳು ಹಾಗೂ ಸಿಬ್ಬಂದಿ ಗ್ಲೌಸ್ ಮತ್ತು ಮಾಸ್ಕ್ ಧರಿಸದೆ ಪದಾರ್ಥಗಳನ್ನು ಮಿಶ್ರಣ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಅಲ್ಲಿನ ಕಾರ್ಮಿಕರಲ್ಲಿ ಹೆಚ್ಚಿನವರು ಅನುಭವ ಇಲ್ಲದವರಾಗಿದ್ದು, ಶುದ್ಧತೆಯ ಪರೀಕ್ಷೆ ಮಾಡದೆಯೇ ಸಿರಪ್‌ಗಳ ತಯಾರಿಕೆಗೆ ನೀರನ್ನು ಬಳಸುತ್ತಿರುವುದು ಕಂಡುಬಂದಿದೆ. ಅಲ್ಲದೆ, ಏರ್ ಫಿಲ್ಟರ್‌ಗಳು ಮತ್ತು ಎಚ್‌ಇಪಿಎ (HEPA) ವ್ಯವಸ್ಥೆಗಳಂತಹ ಅಗತ್ಯ ಸಾಧನಗಳ ಕೊರತೆ ಇರುವುದನ್ನು ಗುರುತಿಸಲಾಗಿದೆ.

ಈ ಘಟಕದಲ್ಲಿ ತಯಾರಾದ ಎಸ್‌ಆರ್-13 (SR-13) ಬ್ಯಾಚ್‌ನ ಕೋಲ್ಡ್ರಿಫ್ ಸಿರಪ್‌ಗಳು ಎರಡು ವರ್ಷಗಳ ಕಾಲಾವಧಿಯೊಂದಿಗೆ ಕಳೆದ ಮೇ ತಿಂಗಳಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ ಮತ್ತು ಪುದುಚೇರಿಯ ಮಾರುಕಟ್ಟೆಗೆ ಹೋಗಿವೆ.

ಈ ಸಿರಪ್‌ಗಳಲ್ಲಿ ಡೈಎಥಿಲೀನ್ ಗ್ಲೈಕಾಲ್ ಅಂಶವು 48.6 ಪ್ರತಿಶತ ದಷ್ಟು ಇರುವುದಾಗಿ ಬಯಾಪ್ಸಿ ವರದಿಗಳು ಬಹಿರಂಗಪಡಿಸಿವೆ. ಇದು ಅನುಮತಿಸಲಾದ ಮಿತಿಗಿಂತ 500 ಪಟ್ಟು ಹೆಚ್ಚು (ವಾಸ್ತವವಾಗಿ ಇದು 0.1 ಪ್ರತಿಶತಕ್ಕಿಂತ ಹೆಚ್ಚಿರಬಾರದು). ಈ ರಾಸಾಯನಿಕವು ಮೂತ್ರಪಿಂಡ, ಯಕೃತ್ತು ಮತ್ತು ನರಮಂಡಲದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಈ ಕಾರಣದಿಂದಲೇ ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಕೋಲ್ಡ್ರಿಫ್ ಕಾಫ್ ಸಿರಪ್ ಮೇಲೆ ಎಲ್ಲಾ ರಾಜ್ಯಗಳು ನಿಷೇಧ ಹೇರಿವೆ. ಇದೀಗ, ಕಂಪನಿಯ ಮಾಲೀಕ ರಂಗನಾಥನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

You cannot copy content of this page

Exit mobile version