ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರ ಪೊಲೀಸ್ ಬೆಂಗಾವಲು ವಾಹನ ಚಾಲಕ (ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ – CAR ಕಾನ್‌ಸ್ಟೆಬಲ್) ಶರಣಪ್ಪ (33) ಅವರು ಬುಧವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶರಣಪ್ಪ ಅವರು ಮೂಲತಃ ಕಲಬುರಗಿ ಜಿಲ್ಲೆಯವರಾಗಿದ್ದು, ಬೆಂಗಳೂರಿನ ಬಾಪೂಜಿನಗರದ ಬಾಡಿಗೆ ಮನೆಯಲ್ಲಿ ಪತ್ನಿ ಶೈಲಶ್ರೀ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ದರು. ಅವರ ಪತ್ನಿ ಶೈಲಶ್ರೀ ಅವರು ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಶರಣಪ್ಪ ಅವರು ಆರ್. ಅಶೋಕ್ ಅವರ ಬೆಂಗಾವಲು ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಬುಧವಾರ ಸಂಜೆ ಕರ್ತವ್ಯ ಮುಗಿಸಿಕೊಂಡು ಮನೆಗೆ ಹೋದ ಶರಣಪ್ಪ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಪತ್ನಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ಕಾರಣಕ್ಕೆ ಶರಣಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಶರಣಪ್ಪ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶರಣಪ್ಪ ತುಂಬಾ ಸೈಲೆಂಟ್ ಮತ್ತು ಒಳ್ಳೆಯ ವ್ಯಕ್ತಿ ಎಂದು ಬಣ್ಣಿಸಿದರು. “ತನ್ನ ಕೆಲಸ ಆಯ್ತು, ತಾನಾಯ್ತು ಅಂತ ಇದ್ದವರು. ನನಗೆ ಕಳೆದ 2 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಹಣಕಾಸಿನ ಸಮಸ್ಯೆ ಇರಲಿಲ್ಲ,” ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, “ಈ ನವರಾತ್ರಿ ಹಬ್ಬಕ್ಕೆ ನಾನು ಸ್ವೀಟ್ಸ್ ಮತ್ತು ಬಟ್ಟೆ ಕೊಟ್ಟಿದ್ದೆ, ಆಗ ಆಕಸ್ಮಿಕವಾಗಿ ನನಗೆ ನಮಸ್ಕಾರ ಮಾಡಿದ್ದರು. ಸಾಮಾನ್ಯವಾಗಿ ಪೊಲೀಸ್ ಸಿಬ್ಬಂದಿ ಹಾಗೆ ಯಾರ ಕಾಲಿಗೆ ಬೀಳಲ್ಲ, ಆದರೆ ಅವತ್ತು ನನಗೆ ನಮಸ್ಕಾರ ಮಾಡಿದ್ದರು. ಅಂತಹ ಒಳ್ಳೆಯ ವ್ಯಕ್ತಿಯನ್ನು ಇಂದು ಕಳೆದುಕೊಂಡಿದ್ದೇವೆ,” ಎಂದು ಅಶೋಕ್ ವಿಷಾದ ವ್ಯಕ್ತಪಡಿಸಿದರು. ಡೆತ್ ನೋಟ್ ಏನಾದರೂ ಸಿಕ್ಕಿದೆಯೇ ಎಂದು ಪರಿಶೀಲಿಸುವಂತೆ ಡಿಸಿಪಿ ಜೊತೆ ಮಾತನಾಡಿದ್ದಾಗಿ ಅವರು ತಿಳಿಸಿದರು.