Home ಇನ್ನಷ್ಟು ಲೈಫ್‌ ಸ್ಟೈಲ್‌ “ಬದುಕಿನ ಕೊಲಾಜ್ ಚಿತ್ರಪಟಗಳು”

“ಬದುಕಿನ ಕೊಲಾಜ್ ಚಿತ್ರಪಟಗಳು”

0

ಕ್ಯಾಬಿನಲ್ಲಿ ಕೂತು ಪ್ರಯಾಣಿಸುವಾಗಲೂ ನಾವು ಸ್ಮಾರ್ಟ್‍ಫೋನುಗಳಲ್ಲಿ ಮುಳುಗಿರುವ ಪರಿಣಾಮವಾಗಿ ಸುತ್ತಮುತ್ತಲಿನ ಜಗತ್ತನ್ನು ಗಮನಿಸುವ ಅಭ್ಯಾಸವೇ ಹೊರಟುಹೋಗಿದೆ ಎಂದೂ ಅವನು ಹೇಳುತ್ತಿದ್ದ. ಇದು ಬಹುಮಟ್ಟಿಗೆ ಸತ್ಯವೂ ಹೌದು. ನನ್ನನ್ನೂ ಸೇರಿಸಿ! – ʼಮೆಟ್ರೋ ಟೈಮ್ಸ್‌ʼ ಅಂಕಣದಲ್ಲಿ ಪ್ರಸಾದ್‌ ನಾಯ್ಕ್, ದೆಹಲಿ.

ಹೆಸರು ನೆನಪಾಗದ ಚಿತ್ರವೊಂದರ ಸನ್ನಿವೇಶ.

“ನೀನು ನಿಜವಾಗಲೂ ಸುಖವಾಗಿದ್ದೀಯಾ?”

ಜೊತೆಯಲ್ಲಿ ಹೆಜ್ಜೆ ಹಾಕುತ್ತಿರುವ ಹುಡುಗ ಕೇಳುತ್ತಿದ್ದಾನೆ. ಅವಳು ಒಂದು ಕ್ಷಣ ತಡವರಿಸುತ್ತಾಳೆ. ಇಂಥದ್ದೊಂದು ಪ್ರಶ್ನೆಯನ್ನು ಈವರೆಗೆ ಯಾರೂ ಅವಳಿಗೆ ಕೇಳಿದ್ದಿಲ್ಲ. ಎಲ್ಲರೂ ಅವೇ ಕ್ಲೀಷೆ ಮಾದರಿಯ ನೀರಸ ಪ್ರಶ್ನೆಗಳನ್ನು ಕೇಳುವವರು. ತಮ್ಮ ಲಾಭ, ಅನುಕೂಲಗಳನ್ನು ನೋಡಿಕೊಂಡು ಏನೇನೋ ಕೇಳುವವರು. ಖಾಸಗಿ ಬದುಕಿನೊಳಗೆ ಇಣುಕಿ ನೋಡುವ ಕೆಟ್ಟ ಕುತೂಹಲದಿಂದಾಗಿ ನಿರುಪದ್ರವಿ ತನಿಖೆಯ ಧಾಟಿಯಲ್ಲಿ ಕೇಳುವವರು.

ನಿನಗೆ ವರ್ಷಕ್ಕೆಷ್ಟು ಪ್ಯಾಕೇಜ್?

ಬಾಯ್ ಫ್ರೆಂಡ್ ಇದ್ದಾನಾ?

ನಾನು ಇತ್ತೀಚೆಗೆ ಇಟಲಿ ಸುತ್ತಾಡಿ ಬಂದೆ. ನೀನೆಲ್ಲಿಗೆ ಹೋದೆ?

ಎಷ್ಟು ಶೇರು ಖರೀದಿಸಿದೆ?

ರೀಲ್ಸ್ ಯಾಕೆ ಮಾಡ್ತಿಲ್ಲ?

ವಾಟ್ಸಾಪ್ ನಂಬರ್ ಕೊಡ್ತೀಯಾ?

ಯುವರ್ ಪ್ಲೇಸ್ ಆರ್ ಮೈ ಪ್ಲೇಸ್?

ಎಲ್ಲಾ ಇಂಥವೇ!

ಅಂಥದ್ದರಲ್ಲಿ ಇವನೊಬ್ಬ ನಿನಗೆ ಬದುಕಿನಲ್ಲಿ ಸಂತಸ ಕೊಡುವ ಸಂಗತಿಗಳು ಯಾವುದೆಂದು ಕೇಳುತ್ತಿದ್ದಾನೆ. ನಿಜವಾಗಲೂ ಖುಷಿಯಾಗಿದ್ದೀಯಾ ಎಂದು ಕೇಳುತ್ತಾನೆ. ಯಾವ ಚಟುವಟಿಕೆಗಳನ್ನು ಮಾಡುತ್ತಾ ನೀನು ಕಳೆದುಹೋಗುತ್ತೀಯಾ ಎಂದು ಕೇಳುತ್ತಾನೆ. ಒಂದೆರಡು ಪದಗಳಲ್ಲಿ ಇವುಗಳಿಗೆ ಉತ್ತರಿಸುವುದಾದರೂ ಹೇಗೆ? ಬೆರಳೆಣಿಕೆಯ ಪದಗಳಲ್ಲಿ ಅಂತರಂಗವನ್ನು ಹೇಗೆ ಬಿಚ್ಚಿಡುವುದು?

ನಾನು ನಿಜವಾಗಲೂ ಖುಷಿಯಾಗಿದ್ದೇನಾ ಎಂದು ಯೋಚಿಸುತ್ತಾಳೆ ಅವಳು. ಕೆಲ ಉತ್ತರಗಳು ಅಷ್ಟು ಬೇಗ ಸಿಗುವಂಥದ್ದಲ್ಲ!

********

ಚಿತ್ರ 1:

ಎಂದಿನಂತೆ ಅದೂ ಒಂದು ದಿನ.

ಅದೊಂದು ದೊಡ್ಡದಾದ ಫಲಕವು ಥಟ್ಟನೆ ನನ್ನನ್ನು ಆಕರ್ಷಿಸಿತ್ತು. ಇಡೀ ನಗರವನ್ನು ಕಾಯುತ್ತಿದೆಯೇನೋ ಎಂಬಂತೆ ಸಾಕಷ್ಟು ಎತ್ತರದಲ್ಲಿ ಕಾಣುತ್ತಿದ್ದ, ಮಿನಿ ಟವರಿನಂತಿದ್ದ ಅಗಲವಾದ ಜಾಹೀರಾತು ಫಲಕ. ಬೀದಿಯ ಅಂದಗೆಡಿಸಲು ಜಾಹೀರಾತು ಫ್ಲೆಕ್ಸ್ ಒಂದಿದ್ದರೆ ಸಾಕು. ಅದರಲ್ಲೂ ದಿಲ್ಲಿಯಂತಹ ಮೆಟ್ರೋ ಸಿಟಿಗಳಲ್ಲಿ ಹಾಕಲಾಗುವ ಜಾಹೀರಾತು ಫಲಕಗಳು ದೈತ್ಯ ಗಾತ್ರದ್ದಾಗಿರುತ್ತವೆ. ರಸ್ತೆ, ಫ್ಲೈ-ಓವರ್, ಮೆಟ್ರೋ ರೈಲು… ಹೀಗೆ ಎಲ್ಲೆಡೆ ಸಾಗುವ ವ್ಯಕ್ತಿಗೂ ಸ್ಪಷ್ಟವಾಗಿ ಕಾಣುವಷ್ಟು. ತನ್ನ ಚಮಕ್-ಧಮಕ್ಕಿನಿಂದ ಕಣ್ಣಿಗೆ ರಾಚುವಷ್ಟು.

ಅಷ್ಟೇ ಆಗಿದ್ದಲ್ಲಿ ಆ ಫಲಕವೂ ಹತ್ತರಲ್ಲಿ ಹನ್ನೊಂದನೆಯದಾಗಿ ಮರೆತು ಹೋಗುತ್ತಿತ್ತೇನೋ. ಆದರೆ ಅದೊಂದು ಜಾಹೀರಾತು ಫಲಕವು ವಿಶೇಷವಾಗಿ ಗಮನ ಸೆಳೆಯಲು ಕಾರಣಗಳೂ ಇದ್ದವು. ಮೊದಲನೆಯದಾಗಿ ಇನ್ನೇನು ಬಿಡುಗಡೆಯಾಗಲಿರುವ ಹೊಸ ಪುಸ್ತಕವೊಂದರ ಜಾಹೀರಾತು ಆಗಿತ್ತದು. ಪುಸ್ತಕಗಳಿಗೆ ಈ ಮಟ್ಟಿನ ಪ್ರಚಾರ ಕೊಡುವುದನ್ನು ನಮ್ಮ ದೇಶದಲ್ಲಿ ನಾನು ಅಷ್ಟಾಗಿ ನೋಡಿದ ಹಾಗಿಲ್ಲ. ಅಲ್ಲದೆ ಅಡಿಬರಹ, ತಲೆಬರಹ, ಬೇರ್ಯಾವ ಬರಹ-ಲೇಬಲ್ಲುಗಳಿಲ್ಲದೆ ಕೇವಲ ಮುಖಪುಟವನ್ನಷ್ಟೇ ತನ್ನಲ್ಲಿ ತುಂಬಿಕೊಂಡಿದ್ದ ಜಾಹೀರಾತು ಫಲಕ ಬೇರೆ. ಕಪ್ಪು ಹಿನ್ನೆಲೆಯ ಅಷ್ಟು ದೊಡ್ಡ ಫ್ರೇಮಿನಲ್ಲಿ ಕಪ್ಪು ಬಣ್ಣದ ಮುಖಪುಟವೊಂದನ್ನು ಬಿಟ್ಟು ಬೇರೇನಿಲ್ಲ.

ಅಂದಹಾಗೆ ಅದು ಇಂದ್ರಾಣಿ ಮುಖರ್ಜಿಯವರು ಬರೆದಿರುವ “Unbroken” ಕೃತಿಯ ಮುಖಪುಟ. ದೇಶದಾದ್ಯಂತ ಕುತೂಹಲವನ್ನು ಹುಟ್ಟಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಇಂದ್ರಾಣಿಯೇ ಈ ಲೇಖಕಿ. ತನ್ನ ಮಗಳು ಶೀನಾಳನ್ನು ಕೊಲ್ಲಿಸಿದ ಆರೋಪದ ಮೇಲೆ ಕೆಲಕಾಲ ಜೈಲಿಗೂ ಹೋಗಿಬಂದವರು. ಮೀಡಿಯಾ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದ ಇಂದ್ರಾಣಿ ಮುಖರ್ಜಿ ಈ ಪ್ರಕರಣದಿಂದಾಗಿ ಅಷ್ಟೇ ಕುಖ್ಯಾತಿಯನ್ನು ಕೂಡ ಪಡೆದಿದ್ದರು. ಸದರಿ ಪ್ರಕರಣವೂ ಸೇರಿದಂತೆ, ತನ್ನ ಬದುಕಿನ ಹಲವು ಏಳುಬೀಳುಗಳ ಕತೆಗಳನ್ನು ಈ ಕೃತಿಯಲ್ಲಿ ಲೇಖಕಿ ದಾಖಲಿಸಿದ್ದಾರಂತೆ.

ಅಚ್ಚರಿಯೆಂದರೆ ನನ್ನ ಸಹೋದ್ಯೋಗಿಯೊಬ್ಬ ಅದೇ ದಾರಿಯಲ್ಲಿ ನಿತ್ಯವೂ ಸಾಗುವವನು. ಅಷ್ಟು ದಿನಗಳಾದರೂ ಅದೊಂದು ಜಾಹೀರಾತು ಫಲಕವನ್ನು ಅವನು ಗಮನಿಸಿಯೇ ಇರಲಿಲ್ಲವಂತೆ. ಹೌದು, ಇದು ಎಲ್ಲ ಜಾಹೀರಾತು ಫಲಕಗಳಂತಿಲ್ಲ ಎಂಬುದನ್ನು ನಂತರ ಅವನು ಒಪ್ಪಿಕೊಂಡಿದ್ದ. ಸಾಂಪ್ರದಾಯಿಕ ಶೈಲಿಯಿಂದ ಹೊರತಾಗಿದ್ದ ಆ ಫಲಕವು ತನ್ನ ಅಷ್ಟೆತ್ತರದ ಗಾತ್ರದ ಹೊರತಾಗಿಯೂ ಅವನ ಗಮನವನ್ನು ಸೆಳೆದಿರಲಿಲ್ಲ. ಕ್ಯಾಬಿನಲ್ಲಿ ಕೂತು ಪ್ರಯಾಣಿಸುವಾಗಲೂ ನಾವು ಸ್ಮಾರ್ಟ್‍ಫೋನುಗಳಲ್ಲಿ ಮುಳುಗಿರುವ ಪರಿಣಾಮವಾಗಿ ಸುತ್ತಮುತ್ತಲಿನ ಜಗತ್ತನ್ನು ಗಮನಿಸುವ ಅಭ್ಯಾಸವೇ ಹೊರಟುಹೋಗಿದೆ ಎಂದೂ ಅವನು ಹೇಳುತ್ತಿದ್ದ.

ಇದು ಬಹುಮಟ್ಟಿಗೆ ಸತ್ಯವೂ ಹೌದು. ನನ್ನನ್ನೂ ಸೇರಿಸಿ!

********

ಚಿತ್ರ 2

ಪ್ರವೀಣ್ ರಾಜಸ್ಥಾನ ಮೂಲದ ಯುವಕ. ತನ್ನ ವೃತ್ತಿಯ ಕಾರಣದಿಂದಾಗಿ ಹೊಸ ವ್ಯಕ್ತಿಗಳನ್ನು ಭೇಟಿಯಾಗುವುದು ಮತ್ತು ಅವರೊಂದಿಗೆ ಒಡನಾಡುವುದು ಅವನ ನಿತ್ಯದ ಚಟುವಟಿಕೆಗಳಲ್ಲೊಂದು.

ಪ್ರವೀಣ್ ಸದ್ಯ ದಿಲ್ಲಿಯಲ್ಲಿ ರೈಡಿಂಗ್ ಇನ್ಸ್ಟ್ರಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೈಕಲ್ ಓಡಿಸಲು ಬರದಿದ್ದವರು ಇವರ ಬಳಿ ಬಂದು ಸೈಕಲ್ ಓಡಿಸುವುದನ್ನು ಕಲಿಯಬಹುದು. ಅವರು ವೃತ್ತಿಪರ ಸಂಸ್ಥೆಯೊಂದರ ಜೊತೆ ಗುರುತಿಸಿಕೊಂಡಿರುವುದರಿಂದ ಈ ಸೇವೆಗೆ ಇಂತಿಷ್ಟು ಶುಲ್ಕವೂ ಇರುತ್ತದೆ. ಹೀಗೆ ಇಪ್ಪತ್ತು-ಇಪ್ಪತ್ತೆರಡು ವರ್ಷ ಪ್ರಾಯದ ಪ್ರವೀಣ, ವಯಸ್ಸಿನಲ್ಲಿ ತನಗಿಂತ ಮೂರು ಪಟ್ಟು ದೊಡ್ಡವರಿಗೂ ಸೈಕಲ್ ತುಳಿಯುವುದನ್ನು ಕಲಿಸಿದ್ದಾರೆ, ಕಲಿಸುತ್ತಿದ್ದಾರೆ. ಸೈಕಲ್ ಸವಾರಿಯ ಕೌಶಲವನ್ನು ಒಂದು ವೃತ್ತಿಯಾಗಿಸಲೂಬಹುದು ಎಂಬುದನ್ನು ಅವರಿಗೆ ಕಲಿಸಿಕೊಟ್ಟಿದ್ದು ದಿಲ್ಲಿ ಶಹರವಂತೆ. ಇದು ಮಹಾನಗರಿಯ ಮಹಿಮೆ.

ಪ್ರವೀಣರಿಗೆ ರಾಜಸ್ಥಾನದ ಒಂದು ದುರ್ಗಮ ಮೂಲೆಯಲ್ಲಿ ಕೊಂಚ ಜಮೀನಿದೆ. ಆದರೆ ಆ ಪ್ರದೇಶದ ನೀರಿನ ಅಭಾವ ಮಾತ್ರ ದೇವರಿಗಷ್ಟೇ ಪ್ರೀತಿ. ಹೀಗಾಗಿ ಅವರು ದಿಲ್ಲಿಗೆ ಬಂದು ಅಧ್ಯಯನ ಮಾಡುತ್ತಾ, ಸರಕಾರಿ ಇಲಾಖೆಯ ವಿವಿಧ ಪರೀಕ್ಷೆಗಳಿಗಾಗಿ ಸಿದ್ಧರಾಗುತ್ತಿದ್ದಾರೆ. ಈ ಮಧ್ಯೆ ಹೊಟ್ಟೆಪಾಡಿಗಾಗಿ ಸೈಕಲ್ ಸವಾರಿ. ಮಹಾನಗರಿಯು ತನ್ನ ಸ್ವಾವಲಂಬಿ ಬದುಕಿಗಾಗಿ ದಾರಿಯೊಂದನ್ನು ಮಾಡಿಕೊಟ್ಟಿದೆ ಎಂಬ ಬಗ್ಗೆ ಅವರಿಗೆ ಸಮಾಧಾನವಿದೆ. 

ಆ ನಿರಾಳತೆಯ ಹೊಳಪನ್ನು ಅವರ ಕಣ್ಣುಗಳಲ್ಲಿ ನಾವು ಕಾಣಬಹುದು.

********

ಚಿತ್ರ 3

ಕೆಲ ವರ್ಷಗಳ ಹಿಂದೆ ಖ್ಯಾತ ಚಿತ್ರಕಲಾವಿದರಾದ ಬಾದಲ್ ಚಿತ್ರಕಾರ್ ರವರನ್ನು ಸಂದರ್ಶಿಸಲು ಹೋಗಿದ್ದೆ.

ಎಂಭತ್ತರ ಸಾಲಿನಲ್ಲಿದ್ದ ಬಾದಲ್ ರವರಲ್ಲಿ ಬಾಲ್ಯದ ತುಂಟತನವೂ, ಹರೆಯದ ಹುಮ್ಮಸ್ಸೂ ಸಾಕಷ್ಟಿತ್ತು. ಆಗಾಗ ಗಂಟುಮೋರೆ ಹಾಕುತ್ತಿದ್ದ ಪತ್ನಿಯ ಗಲ್ಲವನ್ನು ಚಿವುಟಿ ಆಕೆಯ ಕಾಲೆಳೆಯುವುದರಿಂದ ಹಿಡಿದು, “ಏನ್ರೀ ನೀವು, ಬರೀ ದಂಡ… ಒಂದು ಫೋಟೋಗೆ ಪೋಸ್ ಕೊಡಲೂ ಬರುವುದಿಲ್ಲ” ಎಂದು ಮುಲಾಜಿಲ್ಲದೆ ನನ್ನನ್ನು ಕೀಟಲೆ ಮಾಡುವಷ್ಟರ ಮಟ್ಟಿನ ಎನರ್ಜಿ ಅವರದ್ದು. ಅವರ ಗೂಡಾಗಿರುವ ಪುಟ್ಟ ಕೋಣೆಯೂ ಸೇರಿದಂತೆ ಅವರಿರುವಲ್ಲಿ ಎಲ್ಲೆಲ್ಲೂ ಬಣ್ಣಗಳದ್ದೇ ಸಾಮ್ರಾಜ್ಯ.

ಸ್ವಾರಸ್ಯದ ಸಂಗತಿಯೆಂದರೆ ಬಾದಲ್ ಚಿತ್ರಕಾರ್ ಕೆಲವೇ ಕೆಲವು ನಿಮಿಷಗಳಲ್ಲಿ ಬಿಳಿಹಾಳೆಯ ಮೇಲೆ ಚಂದಚಂದದ ವರ್ಣಚಿತ್ರಗಳನ್ನು ಬಿಡಿಸಬಲ್ಲವರು. ಅಂದು ಕೂಡ ಇವರ ಪೋಸ್ಟರುಗಳನ್ನು ಕೊಂಡೊಯ್ಯಲೆಂದೇ ತರುಣನೊಬ್ಬ ಬಂದಿದ್ದ. ಏನಿಲ್ಲವೆಂದರೂ ಇಪ್ಪತ್ತೈದರಿಂದ ಮೂವತ್ತು ಪೋಸ್ಟರುಗಳು. ಹೀಗೆ ಇಲ್ಲಿಂದ ಹೊರಟ ಪೋಸ್ಟರ್ ಗಳು ದಿಲ್ಲಿಯ ಕನ್ನಾಟ್ ಪ್ಲೇಸ್ ಸೇರಿದಂತೆ ಹಲವು ಬೀದಿಗಳಲ್ಲಿ ಮಾರಾಟವಾಗುತ್ತವೆ. ಇನ್ನು ದರಗಳು ದುಬಾರಿಯಲ್ಲದ ಪರಿಣಾಮವಾಗಿ ವ್ಯಾಪಾರಕ್ಕೆ ಬರವಿಲ್ಲ.

ಹೀಗೆ, ತಮ್ಮ ಮನೆಗಳನ್ನು ಅಲಂಕರಿಸುವ, ಮನವನ್ನು ಮುದಗೊಳಿಸುವ ಅನಾಮಿಕ ಚಿತ್ರಗಳ ಹಿಂದಿರುವ ಕೈ ಇವರದ್ದು ಎಂಬುದು ಚಿತ್ರಗಳನ್ನು ಆಸ್ವಾದಿಸುವ ಅದೆಷ್ಟೋ ಮಂದಿಗೆ ಗೊತ್ತೇ ಆಗುವುದಿಲ್ಲ.

********

ಚಿತ್ರ 4

ನಾಲ್ಕು-ಐದನೇ ತರಗತಿಯ ಬಾಲಕಿಯೊಬ್ಬಳು ಹುಮ್ಮಸ್ಸಿನಿಂದ ಭಾಷಣ ಮಾಡುತ್ತಿದ್ದಾಳೆ.

ಅದು ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಒಂದು ಕಾರ್ಯಕ್ರಮ. ಸ್ಥಳೀಯ ಶಾಲಾ ಮಕ್ಕಳಿಗಾಗಿ ಭಾಷಣ ಸ್ಪರ್ಧೆ. ಹೀಗೆ ಸ್ಪರ್ಧಿಯಾಗಿರುವ ಈ ಬಾಲಕಿ ಉತ್ಸಾಹದಿಂದ ತನ್ನ ಭಾಷಣವನ್ನು ಮುಂದುವರಿಸಿದ್ದಾಳೆ. ನಡುವಿನಲ್ಲೇನೋ ಗೊಂದಲವಾಗಿ ಬಾಲಕಿಯ ಭಾಷಣವು ಅಚಾನಕ್ಕಾಗಿ ಹಳಿ ತಪ್ಪಿಬಿಡುತ್ತದೆ. ಹೀಗೆ ಗಾಬರಿ, ಗೊಂದಲ, ಸಭಾಕಂಪನ, ನಿರಾಶೆ… ಎಲ್ಲವೂ ಒಟ್ಟೊಟ್ಟಿಗೆ ದಾಳಿಯಿಟ್ಟ ಪರಿಣಾಮವಾಗಿ ಬಾಲಕಿ ನಿಂತಲ್ಲೇ ಕಣ್ಣೀರಾಗುತ್ತಾಳೆ. ನಂತರ ಕಾರ್ಯಕ್ರಮದ ಆಯೋಜಕರೇ ವೇದಿಕೆಗೆ ಬಂದು, ಅವಳನ್ನು ಸಂತೈಸಿ ಸಭಿಕರಿದ್ದೆಡೆಗೆ ಕರೆದೊಯ್ಯಬೇಕಾಗುತ್ತದೆ.

ಅದು ಅವಳ ದಿನವಾಗಿರಲಿಲ್ಲ. ಸಹಜವಾಗಿ ಅವಳಿಗೆ ಬಹುಮಾನವೂ ಬರಲಿಲ್ಲ. ಆದರೆ ಸಭಾಕಾರ್ಯಕ್ರಮದ ನಂತರ ಕೆಲ ಅತಿಥಿಗಳು ಮತ್ತು ತೀರ್ಪುಗಾರರು ಬಂದು ಕಣ್ಣೀರಾಗಿದ್ದ ಅವಳನ್ನು ಮತ್ತೆ ಸಂತೈಸುತ್ತಾರೆ. ಇರ್ಲಿ ಬಿಡು ಎಂದು ಬೆನ್ನುತಟ್ಟಿ, ಹುರಿದುಂಬಿಸುವಂತೆ ಅವಳೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಳ್ಳುತ್ತಾರೆ. ಇಲ್ಲೇನಾಗುತ್ತಿದೆ ಎಂದು ಅಚ್ಚರಿಯಿಂದ ಬರುವ ಕೆಲ ಆಸಕ್ತರು ಕೂಡ ಅವಳೊಂದಿಗೆ ಮತ್ತಷ್ಟು ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಾರೆ. ಅಂತೂ ಸ್ಪರ್ಧೆಯ ದಿನವೊಂದು, ಒಳಗೊಳ್ಳುವಿಕೆಯ (inclusive) ಒಂದು ಸುಂದರ ಅನುಭವದಲ್ಲಿ ಕೊನೆಯಾಗುತ್ತದೆ.  

ಆ ಸುಂದರ ದಿನವು ಬಹಳ ಕಾಲ ಅವಳ ನೆನಪಿನಲ್ಲಿ ಉಳಿಯಲಿದೆ ಎಂಬ ನಂಬಿಕೆ ನನ್ನದು.

********

ಉಪಸಂಹಾರ

“ನೀನು ನಿಜವಾಗಲೂ ಸುಖವಾಗಿದ್ದೀಯಾ?”, ಅವನು ಮತ್ತೆ ಕೇಳುತ್ತಾನೆ.

“ಈ ಕ್ಷಣವಂತೂ ಸೊಗಸಾಗಿದೆ. ಹೀಗಾಗಿ ಸಂತೋಷವಾಗಿದ್ದೇನೆ ಎನ್ನಲಡ್ಡಿಯಿಲ್ಲ”, ಎನ್ನುತ್ತಾಳವಳು.

ಅವನು ಮೆಚ್ಚಿ ನಗುತ್ತಾನೆ. ಇವಳೂ ನಾಚಿ ಮುಗುಳ್ನಗುತ್ತಾಳೆ.

ಮಾತಿಲ್ಲದೆಯೂ ಉತ್ತರಗಳು ವಿನಿಮಯವಾಗಿರುತ್ತವೆ.

ಪ್ರಸಾದ್ ನಾಯ್ಕ್

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ; ‘ಹಾಯ್ ಅಂಗೋಲಾ’; ಮತ್ತು ‘ಸಫಾ’ ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಹಿಂದಿನ ಸಂಚಿಕೆಗಳನ್ನು ಓದಿದ್ದೀರಾ ? “ಮಹಾನಗರ Vs. ಮಹತ್ವಾಕಾಂಕ್ಷೆ”

“ಕೂತು ಕೂತು ಕೆಟ್ಟವರು”https://peepalmedia.com/kootu-kootu-kettavaru/

You cannot copy content of this page

Exit mobile version