ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 183.50 ರೂಪಾಯಿ ಕಡಿತ: ಆದರೆ ಸದ್ಯಕ್ಕೆ ಹೋಟೆಲ್ ತಿಂಡಿ ದರ ಸದ್ಯಕ್ಕೆ ಇಳಿಯುವುದು ಡೌಟು

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ಜುಲೈ 1 ರಿಂದ ಜಾರಿಗೆ ಬರುವಂತೆ ಇಳಿಕೆ ಮಾಡಲಾಗಿದ್ದು, ತೈಲ ಮಾರಾಟ ಕಂಪನಿಗಳು 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 183.50 ರೂಪಾಯಿ ಕಡಿತಗೊಳಿಸಿವೆ. ಈ ಕಡಿತದ ಬಳಿಕ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಜೂನ್‌ನಲ್ಲಿದ್ದ 3,113.50 ರೂಪಾಯಿಗಳಿಂದ 2,930 ರೂಪಾಯಿಗಳಿಗೆ ಇಳಿಕೆಯಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ ಇದು ಅತ್ಯಂತ ದೊಡ್ಡ ಮಾಸಿಕ ದರ ಕಡಿತವಾಗಿದ್ದರೂ, ಪ್ರಸಕ್ತ ವರ್ಷದಲ್ಲಿ ಜರುಗಿದ್ದ ಭಾರಿ ಬೆಲೆ ಏರಿಕೆಗೆ ಹೋಲಿಸಿದರೆ ಇದು ಕೇವಲ ಅಲ್ಪ ಪ್ರಮಾಣದ ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಈ ವರ್ಷದ ಆರಂಭದಲ್ಲಿ 1,691.50 ರೂಪಾಯಿ ಇದ್ದ ವಾಣಿಜ್ಯ ಸಿಲಿಂಡರ್ ಬೆಲೆ ಜೂನ್ ವೇಳೆಗೆ 3,113.50 ರೂಪಾಯಿಗಳಿಗೆ ತಲುಪಿತ್ತು. ಹೀಗಾಗಿ, ಪ್ರಸ್ತುತ ಕಡಿತದ ಹೊರತಾಗಿಯೂ ಜನವರಿ ತಿಂಗಳ ದರಕ್ಕೆ ಹೋಲಿಸಿದರೆ ವಾಣಿಜ್ಯ ಎಲ್‌ಪಿಜಿ ಬೆಲೆ ಇನ್ನೂ ಗಣನೀಯವಾಗಿ ಹೆಚ್ಚಾಗಿಯೇ ಇದೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಿಳಿಗೊಂಡಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದು ಈ ದರ ಕಡಿತಕ್ಕೆ ಪ್ರಮುಖ ಕಾರಣವಾಗಿದೆ.

ವಾಣಿಜ್ಯ ಎಲ್‌ಪಿಜಿ ದರಗಳನ್ನು ಪ್ರತಿ ತಿಂಗಳು ಪರಿಷ್ಕರಿಸಲಾಗುತ್ತದೆಯಲ್ಲದೆ, ಇವು ಮಾರುಕಟ್ಟೆಯ ಸ್ಥಿತಿಗತಿಗಳಿಗೆ ನೇರವಾಗಿ ಲಿಂಕ್ ಆಗಿರುತ್ತವೆ. ಈ ಕಾರಣಕ್ಕಾಗಿಯೇ ತೈಲ ವಲಯದಲ್ಲಿ ಮೊದಲ ನಿರಾಳತೆ ವಾಣಿಜ್ಯ ಸಿಲಿಂಡರ್‌ಗಳ ಮೂಲಕ ಸಿಕ್ಕಿದೆ. ಆದರೆ, ಸಾರ್ವಜನಿಕರಿಗೆ ನಿರಾಸೆ ಮೂಡಿಸುವಂತೆ ಮನೆಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದರೊಂದಿಗೆ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕೂಡ ಯಥಾಸ್ಥಿತಿಯಲ್ಲಿ ಮುಂದುವರಿದಿವೆ. ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ತೈಲ ಕಂಪನಿಗಳು ಅನುಭವಿಸಿದ ನಷ್ಟವನ್ನು ಇನ್ನೂ ಸಂಪೂರ್ಣವಾಗಿ ಭರಿಸಿಕೊಳ್ಳದ ಕಾರಣ, ಪೆಟ್ರೋಲ್ ಹಾಗೂ ಮನೆಬಳಕೆಯ ಗ್ಯಾಸ್ ದರ ಇಳಿಕೆಯನ್ನು ತಡೆಹಿಡಿಯಲಾಗಿದೆ.

ಈ ದರ ಕಡಿತದ ಲಾಭವು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಕ್ಯಾಟರಿಂಗ್ ಸೇವೆಗಳು ಮತ್ತು ಬೇಕರಿಗಳಿಗೆ ಸಿಗಲಿದೆಯಾದರೂ, ಸಾರ್ವಜನಿಕರಿಗೆ ಹೋಟೆಲ್ ತಿಂಡಿ-ತಿನಿಸುಗಳ ಬೆಲೆ ತಕ್ಷಣವೇ ಅಗ್ಗವಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಉದ್ಯಮಿಗಳು ಈಗಾಗಲೇ ಸಾರಿಗೆ ವೆಚ್ಚ ಮತ್ತು ಕಾರ್ಮಿಕರ ವೇತನ ಏರಿಕೆಯ ಭರವನ್ನು ಎದುರಿಸುತ್ತಿದ್ದಾರೆ. ಆದಾಗ್ಯೂ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 70 ಡಾಲರ್ ಆಸುಪಾಸಿನಲ್ಲೇ ಮುಂದುವರಿದು ರೂಪಾಯಿ ಮೌಲ್ಯ ಸ್ಥಿರವಾಗಿದ್ದರೆ, ಮುಂಬರುವ ವಾರಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಮನೆಬಳಕೆಯ ಗ್ಯಾಸ್ ದರಗಳೂ ಕೂಡ ಇಳಿಕೆಯಾಗುವ ನಿರೀಕ್ಷೆಯಿದೆ.

Related Articles

ಇತ್ತೀಚಿನ ಸುದ್ದಿಗಳು