Home ಅಪರಾಧ ಲಂಚಕ್ಕೆ ಬೇಡಿಕೆ, ಲೋಕಾ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ

ಲಂಚಕ್ಕೆ ಬೇಡಿಕೆ, ಲೋಕಾ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ

ಹುಬ್ಬಳ್ಳಿ : ಜಿಎಸ್‌ಟಿ (GST) ಬಾಕಿ ಪ್ರಕರಣವೊಂದನ್ನು ಸುಗಮಗೊಳಿಸಲು ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದ ವಾಣಿಜ್ಯ ತೆರಿಗೆ ಇಲಾಖೆಯ (ಆಡಿಟ್) ಡೆಪ್ಯುಟಿ ಕಮಿಷನರ್ ಭರತ್ ಹೆಗಡೆ ಅವರನ್ನು ಇಂದು ಲೋಕಾಯುಕ್ತ ಪೊಲೀಸರು (Lokayukta Raid) ಬಂಧಿಸಿದ್ದಾರೆ.

ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ನೀಡಿದ ದೂರಿನ ಮೇರೆಗೆ ಬೆಂಗಳೂರಿನಿಂದ ಬಂದ ಲೋಕಾಯುಕ್ತ ಅಧಿಕಾರಿಗಳ ತಂಡ ಈ ಭರ್ಜರಿ ಕಾರ್ಯಾಚರಣೆ ನಡೆಸಿದೆ.

ಹುಬ್ಬಳ್ಳಿಯ ನವನಗರದಲ್ಲಿರುವ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಉಪ ಆಯುಕ್ತರಾಗಿರುವ ಭರತ್ ಹೆಗಡೆ, ತೆರಿಗೆ ಪರಿಶೀಲನೆ ಮತ್ತು ಆಡಿಟ್ ಜವಾಬ್ದಾರಿ ಹೊತ್ತಿದ್ದರು. ಇವರು ಪೆಟ್ರೋಲ್ ಬಂಕ್ ಮಾಲೀಕ ವಿಶ್ವನಾಥ್ ನಾಯಕ್ ಎಂಬುವವರಿಗೆ 60 ಲಕ್ಷ ರೂಪಾಯಿ ಜಿಎಸ್‌ಟಿ ಬಾಕಿ ಇದೆ ಎಂದು ನೋಟಿಸ್ ನೀಡಿದ್ದರು. ಈ ಪ್ರಕರಣವನ್ನು ಕೈಬಿಡಲು ಮತ್ತು ತೆರಿಗೆ ಮೊತ್ತವನ್ನು ಕಡಿಮೆ ಮಾಡಲು ಭರತ್ ಹೆಗಡೆ ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.

ಅಧಿಕಾರಿಯ ಲಂಚದ ಬೇಡಿಕೆಯಿಂದ ಬೇಸತ್ತ ವಿಶ್ವನಾಥ್ ನಾಯಕ್ ಅವರು ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. 

ಇಂದು ಮುಂಜಾನೆ ಸುಮಾರು 11:30ರ ವೇಳೆಗೆ ಹುಬ್ಬಳ್ಳಿಯ ಕಚೇರಿಯಲ್ಲಿ ಭರತ್ ಹೆಗಡೆ ಅವರು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಬಂದ ಆರು ಅಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದೆ.

ಸದ್ಯ ಭರತ್ ಹೆಗಡೆ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದು, ಕಚೇರಿಯಲ್ಲಿನ ದಾಖಲೆಗಳ ಪರಿಶೀಲನೆ ಮತ್ತು ವಿಚಾರಣೆ ಮುಂದುವರಿಸಿದ್ದಾರೆ. ಪ್ರಮುಖ ಹುದ್ದೆಯಲ್ಲಿದ್ದುಕೊಂಡು ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿದ್ದ ಅಧಿಕಾರಿಯ ಅಸಲಿ ಬಣ್ಣ ಬಯಲಾಗಿರುವುದು ವಾಣಿಜ್ಯ ವಲಯದಲ್ಲಿ ಸಂಚಲನ ಮೂಡಿಸಿದೆ.

You cannot copy content of this page

Exit mobile version