Thursday, June 13, 2024

ಸತ್ಯ | ನ್ಯಾಯ |ಧರ್ಮ

ʼತೆಲಂಗಾಣದ ಇತಿಹಾಸವನ್ನು ತಿದ್ದುತ್ತೇವೆʼ: ಬಿಜೆಪಿಯ ಮತೀಯವಾದಿ ಪ್ರಣಾಳಿಕೆ ಎಂಬ ಆರೋಪ!

ತೆಲಂಗಾಣ ವಿಧಾನಸಭಾ ಚುನಾವಣೆಯ ಪ್ರಚಾರದ ಕಾವು ಏರುತ್ತಿದ್ದಂತೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಬಿಜೆಪಿ “ತೆಲಂಗಾಣದ ಇತಿಹಾಸವನ್ನು ಮರುನಿರೂಪಿಸುತ್ತೇವೆ – resetting the narrative of Telangana’s history” ಎಂದು ಹೇಳಿ, ಅದನ್ನು ತನ್ನ ಪ್ರಮುಖ ಅಜೆಂಡಾಗಳಲ್ಲಿ ಒಂದನ್ನಾಗಿ ಸೇರಿಸಿದೆ. ಬಿಜೆಪಿಯ ಈ ಪ್ರಣಾಳಿಕೆಯಲ್ಲಿ ಬೈರನಪಲ್ಲಿ ಹತ್ಯಾಕಾಂಡ ನಡೆದ ಆಗಸ್ಟ್ 27 ಅನ್ನು ಅಧಿಕೃತವಾಗಿ ʼರಜಾಕರ ಭಯಾನಕ ಹಿಂಸೆಯ ನೆನಪಿನ ದಿನʼವೆಂದು (Razakar Horrors Remembrance Day) ಎಂದು  ಗುರುತಿಸಲಾಗುವುದಾಗಿ ಹೇಳಿದೆ.

ಈ ಮೂಲಕ ಬಿಜಪಿ ತನ್ನ ಪ್ರಮುಖ ಅಜೆಂಡಾಗಳಲ್ಲಿ ʼಮತೀಯವಾದದʼ ಅಂಶಗಳನ್ನೂ ಸೇರಿಸಿದೆ. ಬಿಜೆಪಿಯ ಈ ಪ್ರಣಾಳಿಕೆಯನ್ನು ಇಲ್ಲಿ ಓದಿ: ಚುನಾವಣಾ ಪ್ರಣಾಳಿಕೆ – ತೆಲಂಗಾಣ ಬಿಜೆಪಿ

1948 ರಲ್ಲಿ ಹೈದರಬಾದ್ ನಿಜಾಮನ ಖಾಸಗಿ ಸೇನಾಪಡೆಯಾದ ರಜಾಕಾರರು ನಡೆಸಿದ ಹಿಂಸಾತ್ಮಕ ಹತ್ಯಾಕಾಂಡದಲ್ಲಿ ಸುಮಾರು 100 ಜನರು ಕೊಲ್ಲಲ್ಪಟ್ಟಿದ್ದರು. ನಿಜಾಮನ ಆಳ್ವಿಕೆಯಲ್ಲಿ ಮೇಲ್ವರ್ಗದ ಭೂಮಾಲೀಕರ ದಬ್ಬಾಳಿಕೆ ವಿರುದ್ಧ ರೈತರು ನಡೆಸಿದ ತೆಲಂಗಾಣ ಸಶಸ್ತ್ರ ಹೋರಾಟದ ನಡುವೆ ರಜಾಕರ ಹಿಂಸಾಚಾರ ನಡೆದಿತ್ತು.

ನವೆಂಬರ್ 18, 2023 ಶನಿವಾರ ಹೈದರಾಬಾದ್‌ನಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಮಿತ್ ಶಾ, ಹೈದರಾಬಾದ್ ರಾಜ್ಯದ ವಿಲೀನ ದಿನ ಸೆಪ್ಟೆಂಬರ್ 17 ಅನ್ನು ಹೈದರಾಬಾದ್ ವಿಮೋಚನಾ ದಿನವೆಂದು ಆಚರಿಸಿ, “ನಿಜಾಮನ ಕ್ರೂರ ಹಿಡಿತದಿಂದ ರಾಜ್ಯ ವಿಮೋಚನೆಗೊಂಡದ್ದನ್ನು ಯುವ ಪೀಳಿಗೆಗೆ ನೆನಪಿಸಲಾಗುವುದು,” ಎಂದು ಹೇಳಿದ್ದಾರೆ.

“ರಜಾಕರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ತೆಲಂಗಾಣ ಜನರನ್ನು ಗೌರವಿಸಲು ಆಗಸ್ಟ್ 27 ರಂದು ರಜಾಕಾರ್ ವಿಭಿಷಿಕ ಸ್ಮೃತಿ ದಿನವನ್ನು ಆಚರಿಸುತ್ತೇವೆ. ನಿಜಾಮ, ರಜಾಕರ ವಿರುದ್ಧದ ತೆಲಂಗಾಣ ಜನರ ಹೋರಾಟವನ್ನು ದಾಖಲಿಸಿ,” ವಸ್ತುಸಂಗ್ರಹಾಲಯ ಮತ್ತು ಸ್ಮಾರಕವನ್ನು ಸ್ಥಾಪಿಸುವ ಭರವಸೆ ನೀಡಿದ್ದಾರೆ.

ಈ ಬೆನ್ನಲ್ಲೇ, ಇಂದಿನ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮತ್ತು ಭಾರತ್ ರಾಷ್ಟ್ರ ಸಮಿತಿಯನ್ನು ನಿಜಾಮ ಮತ್ತು ರಜಾಕರಿಗೆ ಹೋಲಿಸಿ, ತೆಲಂಗಾಣ ಸಶಸ್ತ್ರ ಹೋರಾಟವನ್ನು ಕೋಮು ಸಂಘರ್ಷ ಎಂಬಂತೆ ಬಿಂಬಿಸುವ ಮೂಲಕ ತೆಲಂಗಾಣದ ಇತಿಹಾಸವನ್ನು ಕೋಮುದ್ವೇಷದ ಮೂಲಕ ಕಟ್ಟಲು ಬಿಜೆಪಿ ಹೊರಟಿದೆ ಎಂಬ ಆರೋಪ ಕೇಳಿಬರುತ್ತಿದೆ.

ರೊಹಿಂಗ್ಯಾಗಳು ಮತ್ತು ಇತರ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ, ಆಧಾರ್ ಹಾಗೂ ಪಾಸ್‌ಪೋರ್ಟ್‌ಗಳ ದುರುಪಯೋಗವನ್ನು ತಡೆಯುವ ಭರವಸೆ ನೀಡಿರುವ ಬಿಜೆಪಿ, “ಸಂಭಾವ್ಯ ಬೆದರಿಕೆಗಳನ್ನು, ಭಯೋತ್ಪಾದಕ ಸಂಘಟನೆಗಳು ಮತ್ತು ಭಾರತ ವಿರೋಧಿ ಶಕ್ತಿಗಳನ್ನು ಗುರುತಿಸಿ ಮಟ್ಟ ಹಾಕಲು anti-radicalisation cell,” ಸ್ಥಾಪಿಸುವ ಬಗ್ಗೆ ಹೇಳಿದೆ. “ಈ ಹಿಂದೆಯೇ radicalization ಆಗಿರುವ ಪೊಲೀಸ್ ಠಾಣೆಗಳನ್ನು ವಿಶೇಷ ತರಬೇತಿ ಪಡೆದ ಸಿಬ್ಬಂದಿ ನಿರ್ವಹಿಸುತ್ತಾರೆ” ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಕರ್ನಾಟಕದಲ್ಲಿಯೂ ಬಿಜೆಪಿ, ತನ್ನ 2023 ರ ಚುನಾವಣಾ ಪ್ರಣಾಳಿಕೆಯಲ್ಲಿ ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆ ವಿರುದ್ಧ ಕರ್ನಾಟಕ ರಾಜ್ಯ ವಿಭಾಗ ಅಥವಾ Karnataka State Wing against Religious Fundamentalism and Terror (K-SWIFT) ಎಂಬ ವಿಶೇಷ ಪೊಲೀಸ್ ವಿಭಾಗವನ್ನು ಆರಂಭಿಸುವ ಭರವಸೆ ನೀಡಿತ್ತು. “ರಾಜ್ಯದಲ್ಲಿರುವ ಎಲ್ಲಾ ಅಕ್ರಮ ವಲಸಿಗರನ್ನು ಶೀಘ್ರವಾಗಿ ಗಡೀಪಾರು ಮಾಡಲು” ಕರ್ನಾಟಕದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ( National Register of Citizens) ತರುವ  ಭರವಸೆ ನೀಡಿತ್ತು.

ತೆಲಂಗಾಣ ಬಿಜೆಪಿಯ ಪ್ರಣಾಳಿಕೆಯಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಭರವಸೆಯನ್ನು ನೀಡಲಾಗಿದ್ದು, ವಿವಾದಾತ್ಮಕ ಕರ್ನಾಟಕ ಗೋಹತ್ಯಾ ನಿಷೇಧ ಕಾಯ್ದೆ Karnataka Prevention of Slaughter and Preservation of Cattle Act, 2020 ರಂತಹ ಕಾನೂನು ಜಾರಿಗೊಳಿಸುವ ಪ್ರಸ್ತಾಪವನ್ನೂ ಮಾಡಲಾಗಿದೆ. ಈ ಕಾಯಿದೆಯಲ್ಲಿ ಅಪರಾಧಿಗಳಿಗೆ ಮೂರರಿಂದ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 50,000 ರಿಂದ 5 ಲಕ್ಷ ರುಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ. ಕರ್ನಾಟಕದ ಗೋಹತ್ಯಾ ನಿಷೇಧ ಕಾಯ್ದೆ ಅನೇಕ ಸಣ್ಣ ರೈತರು, ಚಮ್ಮಾರರು ಮತ್ತು ಮಾಂಸ ರಫ್ತು ಉದ್ಯಮಗಳಲ್ಲಿ ಕೆಲಸ ಮಾಡುವ ಜನರ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ದನದ ವ್ಯಾಪಾರ ಮಾಡುವವರಿಗೆ ಕಿರುಕುಳ ನೀಡಲು ಗೋರಕ್ಷಕರಿಗೆ ಅನುವು ಮಾಡಿಕೊಟ್ಟಿದೆ ಎಂದು ಟೀಕೆಗೆ ಒಳಗಾಗಿತ್ತು.

ಅಲ್ಲದೇ, ತೆಲಂಗಾಣ ಬಿಜೆಪಿಯ ಈ ಪ್ರಣಾಳಿಕೆ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಮಿತಿ ರಚಿಸುವುದಾಗಿ ಭರವಸೆ ನೀಡಲಾಗಿದೆ. ತೆಲಂಗಾಣದಲ್ಲಿ ಪಕ್ಷ ಗೆದ್ದರೆ ಅಯೋಧ್ಯೆ ರಾಮಮಂದಿರಕ್ಕೆ ಉಚಿತವಾಗಿ ಯಾತ್ರೆ ಹೋಗುವ ಅವಕಾಶ ನೀಡಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ. ಗದ್ವಾಲ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅಮೀತ್‌ ಶಾ ವೃದ್ಧರಿಗೆ ಅಯೋಧ್ಯೆ ಮತ್ತು ವಾರಣಾಸಿಗೆ ಉಚಿತ ತೀರ್ಥಯಾತ್ರೆಯನ್ನು ಭರವಸೆ ನೀಡಿದ್ದಾರೆ.

25 ಖಾತರಿಗಳನ್ನು ಪಟ್ಟಿ ಇರುವ ಬಿಜೆಪಿ ಪ್ರಣಾಳಿಕೆಯಲ್ಲಿ, ತೆಲಂಗಾಣ ಸರ್ಕಾರ ನೀಡಿರುವ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮುಸ್ಲಿಮರಿಗೆ ಇರುವ 4% ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಹೇಳಿದೆ. ಧರ್ಮಾಧಾರಿತ ಮೀಸಲಾತಿಯನ್ನು ‘ಅಸಂವಿಧಾನಿಕ’ ಎಂದು ಕರೆದು, ಮೀಸಲಾತಿಗಳನ್ನು ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ನೀಡಲಾಗುವುದು ಎಂದು ಪ್ರಣಾಳಿಕೆ ಹೇಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು