ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹದಿನೈದನೆ ಲೇಖನ
ಹೋರಾಟಗಾರನಾಗಿ ಪ್ರಸಿದ್ಧರಾದರೂ ಕೂಡ, ಡಾಂಗೆ ಒಬ್ಬ ಗಂಭೀರ ಬುದ್ಧಿಜೀವಿಯಾಗಿದ್ದರು. ಸಂಸತ್ತಿನೊಳಗಡೆ ಕಾರ್ಮಿಕರು ಮತ್ತು ರೈತರ ಆಶೋತ್ತರಗಳಿಗೆ ಧ್ವನಿಯಾಗುವಾಗ ಅವರು ಬಳಸುತ್ತಿದ್ದ ಸಂಸದೀಯ ತಂತ್ರಗಳನ್ನು ನಾವು ಮುಖ್ಯವಾಗಿ ಗಮನಿಸಬೇಕು.
ಎಸ್.ಎ. ಡಾಂಗೆ ಎಂದೇ ಪ್ರಸಿದ್ಧರಾದ ಶ್ರೀಪಾದ್ ಅಮೃತ್ ಡಾಂಗೆ, ಭಾರತದ ಕಮ್ಯುನಿಸ್ಟ್ ಚಳುವಳಿಯ ಧೀಮಂತ ವ್ಯಕ್ತಿತ್ವವಾಗಿದ್ದವರು. ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮತ್ತು ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಯ ಸ್ಥಾಪಕ ಸದಸ್ಯರಾಗಿದ್ದ ಅವರು ಸುಮಾರು ಆರು ದಶಕಗಳ ಕಾಲ ಕಮ್ಯುನಿಸ್ಟ್ ಚಳುವಳಿಯನ್ನು ಮುನ್ನಡೆಸಿದವರು. ಒಬ್ಬ ನಿಷ್ಠಾವಂತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭಾರತದಲ್ಲಿ ತನ್ನ ಬದುಕಿನ ಅಮೂಲ್ಯ ಹದಿಮೂರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರು. ದಂತಕಥೆಯಾಗಿದ್ದ ಅವರು ಒಬ್ಬ ರಾಜಕೀಯ ನಾಯಕ ಎಂಬುದರ ಜೊತೆಗೆ ಗೌರವಾನ್ವಿತ ಸಂಸದ ಎಂಬ ನೆಲೆಯಲ್ಲಿಯೂ ಪ್ರಸಿದ್ಧರಾಗಿದ್ದರು.
1899 ಅಕ್ಟೋಬರ್ 10 ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕರಂಜ್‌ಗಾಂವ್ ಎಂಬಲ್ಲಿ, ರಾಜಕೀಯವಾಗಿ ಸಕ್ರಿಯವಾಗಿದ್ದ ಒಂದು ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಡಾಂಗೆ ಅವರ ಜನನ. ಆ ವಾತಾವರಣದಲ್ಲಿಯೇ ಅವರು ಬೆಳೆದರು. ಬಾಲಗಂಗಾಧರ ತಿಲಕರಂತಹ ನಾಯಕರಿಂದ ಪ್ರಭಾವಿತರಾಗಿದ್ದ ಆ ಪ್ರದೇಶದ ಕ್ರಾಂತಿಕಾರಿ ವಾತಾವರಣವು ಅವರ ಆರಂಭಿಕ ದೃಷ್ಟಿಕೋನವನ್ನು ರೂಪಿಸಿತ್ತು. ಡಾಂಗೆ ತನ್ನ ಬಾಲ್ಯವನ್ನು ನೆನಪಿಸಿಕೊಳ್ಳುವುದು ಹೀಗೆ, “ಬಾಲ್ಯದಲ್ಲಿ ನಮ್ಮ ಬೆಳವಣಿಗೆಯೇ ರಾಷ್ಟ್ರೀಯವಾಗಿತ್ತು.”
1920 ರಲ್ಲಿ ತನ್ನ ತಂದೆಯವರ ಮರಣಾ ನಂತರ ಗಾಂಧೀಜಿಯ ಅಸಹಕಾರ ಚಳುವಳಿಗೆ ಆಕರ್ಷಿತರಾಗುವ ಡಾಂಗೆ, ಅದಕ್ಕಾಗಿ ತನ್ನ ಶಿಕ್ಷಣವನ್ನು ಮೊಟಕುಗೊಳಿಸುತ್ತಾರೆ. ಅಂದಿನಿಂದ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಆಳವಾಗಿ ತೊಡಗಿಸಿಕೊಳ್ಳುತ್ತಾರೆ. ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿದ ರಷ್ಯಾದ ಬೋಲ್ಶೆವಿಕ್ ಕ್ರಾಂತಿ ನಡೆದು, ಸಮಾಜವಾದಿ ಸಮಾಜದ ಬುನಾದಿ ಹಾಕುತ್ತಿದ್ದಾಗ ಡಾಂಗೆಗೆ ಬರೀ 18ರ ಪ್ರಾಯ. ಸಮಾನತೆ ಮತ್ತು ನ್ಯಾಯದ ಆಧಾರದಲ್ಲಿ ಮನುಷ್ಯರು ಸಮಸಮಾಜವನ್ನು ಕಟ್ಟಿಕೊಳ್ಳಬಹುದು ಎಂಬ ಸಿದ್ಧಾಂತ ಅವರ ಮೇಲೆ ಅಪಾರ ಪ್ರಭಾವ ಬೀರಿತ್ತು. ಮಹಾನ್ ಸೋವಿಯತ್ ನಾಯಕ ಐ.ವಿ. ಲೆನಿನ್ ಅವರ ಬದುಕು ಮತ್ತು ಸಾಧನೆಗಳತ್ತ ತೀವ್ರ ಆಕರ್ಷಿತರಾಗಿದ್ದ ಅವರು ಕಾರ್ಲ್ ಮಾರ್ಕ್ಸ್‌ರ ರಾಜಕೀಯ ಸಿದ್ಧಾಂತಕ್ಕೂ ಆಕರ್ಷಿತರಾಗಿದ್ದರು.
1921 ರಲ್ಲಿ ಅವರು ತಮ್ಮ ಮೊದಲ ಪುಸ್ತಕ ಗಾಂಧಿ vs ಲೆನಿನ್ ಪ್ರಕಟಿಸುತ್ತಾರೆ. ಅದರಲ್ಲಿ ತಮ್ಮ ಸೈದ್ಧಾಂತಿಕ ಒಲವುಗಳನ್ನು ವ್ಯಕ್ತಪಡಿಸುತ್ತಾರೆ. ಸ್ವತಃ ಲೆನಿನ್ ಆ ಪುಸ್ತಕವನ್ನು ಓದಿದ್ದರೆಂದೂ “ಜಾಗೃತವಾಗುತ್ತಿರುವ ಭಾರತೀಯ ಕಾರ್ಮಿಕ ವರ್ಗದ ಕಿಡಿಯನ್ನು” ಗುರುತಿಸಿದ್ದರೆಂದೂ ಹೇಳಲಾಗುತ್ತದೆ. ಡಾಂಗೆಯವರ ಬದುಕಿನಲ್ಲಿ, ರಾಷ್ಟ್ರೀಯತೆಯ ಮೂಲಕ ಕಮ್ಯುನಿಸಂ ಕಡೆಗಿನ ಹೊರಳುವಿಕೆಯಾಗಿ ಇದನ್ನು ಗುರುತಿಸಬಹುದು.
1922 ಆಗಸ್ಟ್ ತಿಂಗಳಲ್ಲಿ ಅವರು ದೇಶದ ಮೊಟ್ಟ ಮೊದಲ ಕಮ್ಯುನಿಸ್ಟ್ ಜರ್ನಲ್ ಆದ “ದಿ ಸೋಷ್ಯಲಿಸ್ಟ್” ಪ್ರಾರಂಭಿಸುತ್ತಾರೆ. ತನ್ನ ದಿವಂಗತ ತಂದೆಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಇದಕ್ಕೆ ಹಣಕಾಸು ಹೊಂದಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದೊಳಗೆ ಸಮಾಜವಾದಿ ಪಕ್ಷವನ್ನು ರಚಿಸುವ ಕುರಿತು ದಿ ಸೋಷ್ಯಲಿಸ್ಟ್ ಪ್ರತಿಪಾದಿಸಿತು. ಭಾರತೀಯ ಕಮ್ಯುನಿಸ್ಟರು ರಾಷ್ಟ್ರೀಯ ಚಳುವಳಿಯ ವಿಶಿಷ್ಟ ಭಾಗವಾಗಿ ಕೆಲಸ ಮಾಡಬೇಕೆಂದು ಅದು ಸೂಚಿಸಿತು.
ಸಮಾಜವಾದದ ಪ್ರಚಾರ ಕಾರ್ಯದಿಂದ ಎಚ್ಚೆತ್ತ ಬ್ರಿಟಿಷ್ ಅಧಿಕಾರಿಗಳು, 1924 ಮಾರ್ಚ್ 3 ರಂದು ಡಾಂಗೆಯವರನ್ನು ಬಂಧಿಸುತ್ತಾರೆ. ಕಾನ್ಪುರ ಬೋಲ್ಶೆವಿಕ್ ಪಿತೂರಿ ಪ್ರಕರಣದ ಹೆಸರಿನಲ್ಲಿ ಅವರ ಜೊತೆಗೆ ಅಹ್ಮದ್, ಗುಪ್ತಾ ಮತ್ತು ಉಸ್ಮಾನಿ ಅವರುಗಳನ್ನೂ ಬಂಧಿಸಲಾಗಿತ್ತು. ಬ್ರಿಟಿಷ್ ಸರಕಾರವನ್ನು ಉರುಳಿಸಲು ಪಿತೂರಿ ನಡೆಸಿದ ಆರೋಪದ ಮೇಲೆ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಭಾರತೀಯ ಕಾರ್ಮಿಕ ವರ್ಗವು ಅಂತರಾಷ್ಟ್ರೀಯ ಚಳುವಳಿಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ಹಕ್ಕಿನ ಮೇಲೆ ವಸಾಹತುಶಾಹಿ ನಡೆಸಿದ ಮೊದಲ ದಾಳಿಯಾಗಿ ಈ ಪ್ರಕರಣ ಇತಿಹಾಸವಾಗುತ್ತದೆ.
ಭಾರತೀಯ ಕಮ್ಯುನಿಸಂನ ಶಿಲ್ಪಿ
ಭಾರತೀಯ ಕಮ್ಯುನಿಸಮ್ಮಿನ ಮೂಲ ವ್ಯಕ್ತಿಯೆಂದು ಕರೆಯಬಹುದಾದ ಡಾಂಗೆ, “ಕಮ್ಯುನಿಸಂ” ಎಂಬ ಪದವನ್ನು ಉಚ್ಛರಿಸುವುದೂ ಅಪರಾಧವಾಗಿದ್ದ ಕಾಲದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸಿ ಕಮ್ಯುನಿಸಂ ಜ್ಯೋತಿಯನ್ನು ಬೆಳಗಿದರು. 1925 ರಲ್ಲಿ ಸಿಂಗಾರವೇಲು ಚೆಟ್ಟಿಯಾರ್ ಅವರ ಅಧ್ಯಕ್ಷತೆಯಲ್ಲಿ ಮುಜಾಫರ್ ಅಹ್ಮದ್, ಗುಲಾಂ ಹುಸೇನಿ, ನಳಿನಿ ಗುಪ್ತಾ ಮತ್ತು ಶೌಕತ್ ಉಸ್ಮಾನಿ ಅವರುಗಳ ಜೊತೆಗೆ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ)ಯ ಸ್ಥಾಪಕ ಸದಸ್ಯರಾಗುತ್ತಾರೆ. ಅಂದಿನಿಂದ ತನ್ನ ಕೊನೆಯ ಉಸಿರಿನ ತನಕವೂ, ತನ್ನ ಅಸ್ತಿತ್ವದ ಅಡಿಪಾಯವಾಗಿದ್ದ ಕಮ್ಯುನಿಸ್ಟ್ ಹಣೆಪಟ್ಟಿಯಲ್ಲಿಯೇ ಬದುಕಿದರು. ಕಮ್ಯುನಿಸಮ್ಮಿಗೆ ಅವರ ಜೀವಮಾನ ಬದ್ಧತೆ ಅಚಲವಾಗಿತ್ತು.
ಭಾರತೀಯ ಕಮ್ಯುನಿಸಂ ಹಾದಿಯ ಬಗ್ಗೆ ಅವರಿಗಿದ್ದ ಒಂದು ವಿಶೇಷ ಗ್ರಹಿಕೆ ಗಮನಾರ್ಹವಾದದ್ದು. ಕಾರ್ಮಿಕ ವರ್ಗದ ಐಕ್ಯತೆಯನ್ನು ಸಾಧಿಸಲು ಮೊದಲಿಗೆ ಹಿಂದೂ-ಮುಸ್ಲಿಂ ಐಕ್ಯತೆ ಅನಿವಾರ್ಯ ಎಂಬುದು ಅವರ ಗ್ರಹಿಕೆಯಾಗಿತ್ತು. ನಿಜದಲ್ಲಿ ಅವರ ರಾಜಕೀಯ ದೀಕ್ಷೆಯೇ ಹಿಂದೂ-ಮುಸ್ಲಿಂ ಮತ್ತು ಕಾರ್ಮಿಕ ವರ್ಗದ ಐಕ್ಯತೆಯ ಹೋರಾಟದೊಂದಿಗೆ ನಡೆದಿತ್ತು. ದಿ ಸೋಷ್ಯಲಿಸ್ಟ್ ಅಂಕಣಗಳಲ್ಲಿ ಅವರು ಭಾರತವು ಸ್ವರಾಜ್ಯ ಗಳಿಸಿಕೊಳ್ಳಲು ಮತ್ತು ದೇಶ ಕಟ್ಟಲು ಹಿಂದೂ-ಮುಸ್ಲಿಂ ಐಕ್ಯತೆಯು ಅತಿಮುಖ್ಯ ಅಂಶ ಎಂಬುದರ ಕಡೆಗೆ ಗಮನ ಸೆಳೆಯುತ್ತಿದ್ದರು. ಗೋವಾ ವಿಮೋಚನಾ ಚಳುವಳಿ, ಸಂಯುಕ್ತ ಮಹಾರಾಷ್ಟ್ರ ಚಳುವಳಿ, ನಾಸಿಕ್ ಜಿಲ್ಲೆಯ ಆದಿವಾಸಿ ಸತ್ಯಾಗ್ರಹ ಮತ್ತು ಉತ್ತರ ಪ್ರದೇಶದ “ಉಳುವವನೇ ನೆಲದೊಡೆಯ” ಚಳುವಳಿಗಳ ಜೊತೆಗೂ ಡಾಂಗೆ ನಿಕಟ ಮತ್ತು ಸಕ್ರಿಯ ಸಂಬಂಧ ಹೊಂದಿದ್ದರು.
ಕಾರ್ಮಿಕ ವರ್ಗದ ಜನನಾಯಕ
1927 ರಲ್ಲಿ ಬಿಡುಗಡೆಯಾದ ನಂತರ ಅವರು ಮುಂಬೈನ ಟ್ರೇಡ್ ಯೂನಿಯನ್ ಚಳುವಳಿಯಲ್ಲಿ ಸಕ್ರಿಯರಾಗುತ್ತಾರೆ. ಅದು ಮುಂಬೈಯ ಜವಳಿ ಉದ್ಯಮದ ಸುತ್ತ ಕೇಂದ್ರೀಕೃತವಾಗಿದ್ದ ಟ್ರೇಡ್ ಯೂನಿಯನ್ ಆಗಿತ್ತು. ಮರಾಠಿ ವಾರಪತ್ರಿಕೆ ಕ್ರಾಂತಿ ಮೂಲಕ ಅವರು ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿದರು. ಅದು ನಂತರದಲ್ಲಿ 1928 ರ ಐತಿಹಾಸಿಕ ಸಾರ್ವತ್ರಿಕ ಮುಷ್ಕರಕ್ಕೆ ನಾಂದಿಯಾಗುತ್ತದೆ. ಡಾಂಗೆ, ಎಸ್.ವಿ. ಘಾಟೆ ಮತ್ತು ಕೆ.ಎನ್. ಜೋಗ್ಲೇಕರ್ ಮೊದಲಾದ ನಾಯಕರು ಸೇರಿಕೊಂಡು ಉದ್ಯೋಗ ಕಡಿತ ಮತ್ತು ವೇತನ ಕಡಿತದ ವಿರುದ್ಧ ಸುಮಾರು ಆರು ಲಕ್ಷದಷ್ಟು ಕಾರ್ಮಿಕರನ್ನು ಸಂಘಟಿಸಿ ಆರು ತಿಂಗಳ ಕಾಲ ಮುಷ್ಕರ ನಡೆಸಿದ್ದರು.
1929 ಮಾರ್ಚ್ 20 ರಂದು ಡಾಂಗೆ ಸಹಿತ 30 ಜನ ಕಮ್ಯುನಿಸ್ಟರನ್ನು ಮೀರತ್ ಪಿತೂರಿ ಪ್ರಕರಣದಲ್ಲಿ ಬಂಧಿಸಲಾಗುತ್ತದೆ. ಬ್ರಿಟಿಷ್ ಸರಕಾರವನ್ನು ಉರುಳಿಸಲು ಸಂಚು ರೂಪಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು. ನಾಲ್ಕು ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ಡಾಂಗೆಗೆ 12 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಇದರ ವಿರುದ್ಧ ಮೇಲಿನ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತಾರೆ. ಅಲ್ಲಿ ನ್ಯಾಯಾಧೀಶರು ಇಡೀ ಪ್ರಕರಣವನ್ನು “ಫೌಂಟೇನ್ ಪೆನ್ ಕಾನ್ಸ್ಪಿರಸಿ” ಎಂದು ಕರೆಯುತ್ತಾರೆ. ಅವರ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಶಸ್ತ್ರಾಸ್ತ್ರಗಳ ಪುರಾವೆ ಇರಲಿಲ್ಲ. ಅಂದು ನ್ಯಾಯಾಧೀಶರು ಹೀಗೆ ಹೇಳಿದ್ದರು, “ಬಹುಷ 1928 ರ ಮುಷ್ಕರ ಮತ್ತು ಗಿರಣಿ ಕಾರ್ಮಿಕರ ಸಂಘದ ಕ್ರಾಂತಿಕಾರಿ ನಿಲುವುಗಳ ಅಗಾಧ ಪ್ರಭಾವ ಈ ಪ್ರಕರಣದ ಮೇಲೆ ಬಿದ್ದರಿಬಹುದು.”
ಸಂಸದರಾಗಿ ಡಾಂಗೆ
1946 ರಲ್ಲಿ ಮುಂಬೈ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಡಾಂಗೆ ಅವರ ಶಾಸನ ಸಭೆಯ ಬದುಕು ಆರಂಭವಾಗುವುದು. ಈ ಹುದ್ದೆಗೆ ಆಯ್ಕೆಯಾಗುವ ಮೊಟ್ಟ ಮೊದಲ ಕಮ್ಯುನಿಸ್ಟ್ ಕೂಡ ಡಾಂಗೆ ಆಗಿದ್ದರು. ಅವರು ಕಾರ್ಮಿಕ ಹಕ್ಕುಗಳನ್ನು ಗಟ್ಟಿಯಾಗಿ ಸಮರ್ಥಿಸಿಕೊಂಡರು, ಮುಷ್ಕರ ವಿರೋಧಿ ಕಾನೂನನ್ನು ವಿರೋಧಿಸಿದರು ಮತ್ತು ಕಾರ್ಮಿಕರ ಮುಷ್ಕರವನ್ನು ಕಾನೂನುಬದ್ಧವೆಂದು ಪ್ರತಿಪಾದಿಸಿದರು. ಅವರ ಮಾತು ಹೀಗಿತ್ತು, “ತನ್ನ ಉದ್ಯೋಗದಾತರಿಂದ ತನಗೆ ಸಿಗಬೇಕಾದ ಅನುಕೂಲತೆಗಳನ್ನು ಪಡೆದುಕೊಳ್ಳಲು ಕಾರ್ಮಿಕನ ಕೈಯಲ್ಲಿರುವ ಶಕ್ತಿಶಾಲಿ ಮತ್ತು ಪ್ರಬಲವಾದ ಅಸ್ತ್ರವೇ ಮುಷ್ಕರ ಮಾಡುವ ಹಕ್ಕು. ಅದರಿಂದಲೇ ತನ್ನ ಪರವಾಗಿ ಕಾನೂನುಗಳು ಜಾರಿಗೆ ಬರುವಂತೆ ನೋಡಿಕೊಳ್ಳಲೂ ಸಾಧ್ಯವಿರುವುದು.” ಶಾಸನ ಸಭೆಯಲ್ಲಿ ಅವರ ಪ್ರತಿಭೆಗೆ ವ್ಯಾಪಕ ಪ್ರಶಂಸೆಗಳು ಲಭಿಸುತ್ತಿದ್ದವು.
1957 ರಲ್ಲಿ ಮುಂಬೈನಿಂದ ಎರಡನೇ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಡಾಂಗೆ ಅವರ ಸಂಸತ್ ಜೀವನ ಆರಂಭವಾಗುತ್ತದೆ. ಅದು ಅವರ ಮೊದಲ ಬಾರಿಯ ಆಯ್ಕೆಯಾಗಿದ್ದರೂ ಕೂಡ ಎಲ್ಲ ಕಲಾಪಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅವರ ಆರಂಭದ ಭಾಷಣಗಳೆಲ್ಲ, ಅವರ ಸ್ವಭಾವಕ್ಕೆ ತಕ್ಕಂತೆ ಒಬ್ಬ ಟ್ರೇಡ್ ಯೂನಿಯನ್ ನಾಯಕನ ಭಾಷಣಗಳಂತೆಯೇ ಇರುತ್ತಿದ್ದವು. ಆದರೆ ಸಂಸತ್ತಿನಲ್ಲಿ ಪಾಲ್ಗೊಳ್ಳಲು ಮತ್ತು ಭಾಷಣ ಮಾಡಲು ಬೇರೆಯದೇ ಶೈಲಿ ಮತ್ತು ತಂತ್ರಗಳ ಅಗತ್ಯವಿತ್ತು. ಆದರೂ ಅವರು ಟ್ರೇಡ್ ಯೂನಿಯನ್ ಸಮಸ್ಯೆಗಳನ್ನು ರಾಷ್ಟ್ರೀಯ ಮಟ್ಟದ ಚರ್ಚೆಗೆ ಎಳೆದು ತಂದಿದ್ದರು. ಅವರ ಭಾಷಣಗಳು ಮೊದಲಿಗೆ ಹೋರಾಟಗಾರನ ಧ್ವನಿಯಲ್ಲಿರುತ್ತಿದ್ದರೂ, ನಿಧಾನಕ್ಕೆ ಒಬ್ಬ ನುರಿತ ಸಂಸದನ ಸಂಸದೀಯ ಹಸ್ತಕ್ಷೇಪಗಳಂತೆ ವಿಕಸನಗೊಂಡಿತು.
ಕಾರ್ಮಿಕ ವರ್ಗ ಮತ್ತು ರೈತಾಪಿ ಜನಗಳ ಆಶೋತ್ತರಗಳಿಗೆ ಧ್ವನಿಯಾಗಲೆಂದು ಡಾಂಗೆ ಬಹಳ ಬೇಗನೇ ಹೊಸ ಸಂಸದೀಯ ತಂತ್ರಗಳನ್ನು ಅಳವಡಿಸಿಕೊಂಡರು. ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದರ ಕುರಿತು, ಟಿಬೆಟ್ ಸಮಸ್ಯೆಯ ಕುರಿತು ಮತ್ತು ಭಾರತ-ಚೀನಾ ಗಡಿ ವಿವಾದದ ಕುರಿತು ಅವರು ಮಾಡಿದ ಭಾಷಣಗಳು ತನ್ನ ಅನ್ಯಾಯದ ವಿರುದ್ಧದ ಪ್ರತಿಭಟನೆಗಳಾದವು. ಅಂತಹ ಭಾಷಣಗಳ ಮೂಲಕವೇ ಅವರು ಸಂಸದನಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದರು. ಅವರ ಮಾತುಗಾರಿಕೆ ಬಹಳ ಸ್ಪಷ್ಟ, ರೋಮಾಂಚನಕಾರಿ ಮತ್ತು ಮನಕ್ಕೆ ತಾಕುವಂತೆ ಇರುತ್ತಿತ್ತು.
ಬಹುಮುಖ್ಯ ಸಮಸ್ಯೆಗಳ ಕುರಿತು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಮತ್ತು ಡಾಂಗೆ ತದ್ವಿರುದ್ಧ ನಿಲುವುಗಳನ್ನು ಹೊಂದಿದ್ದರು. ಆಗಾಗ್ಗೆ ನೆಹರೂ ಜೊತೆ ಸೈದ್ಧಾಂತಿಕ ಸಂಘರ್ಷಕ್ಕೆ ಇಳಿಯುತ್ತಿದ್ದರು. ಪ್ರಧಾನ ಮಂತ್ರಿ ನೆಹರೂ ಮಿಶ್ರ ಆರ್ಥಿಕತೆಯಲ್ಲಿ ನಂಬಿಕೆಯಿಟ್ಟಿದ್ದರು. ಆದರೆ, ಡಾಂಗೆ ಒಬ್ಬ ಕಟ್ಟಾ ಮಾರ್ಕ್ಸ್‌ವಾದಿಯಾಗಿದ್ದರು. ಡಾಂಗೆ ನೆಹರೂರನ್ನು ಎಡಪಂಥದ ಕಡೆಗೆ ಚಲಿಸುವಂತೆ ಒತ್ತಡ ಹಾಕುತ್ತಿದ್ದರು. ನೆಹರೂ ಕೂಡ ಡಾಂಗೆಯವರನ್ನು ಮಧ್ಯಮದಾರಿ ಅರ್ಥ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಅವರಿಬ್ಬರ ನಡುವೆ ಪರಸ್ಪರರ ಪ್ರಾಮಾಣಿಕತೆಯ ಬಗ್ಗೆ ಅಷ್ಟೇ ಪ್ರಮಾಣದ ಗೌರವವೂ ಇತ್ತು.
1967 ರಲ್ಲಿ ಡಾಂಗೆ ಮತ್ತೆ ಲೋಕಸಭೆಗೆ ಮರಳಿ ಬರುತ್ತಾರೆ. ತಮ್ಮ ಭಾಷಣಗಳಲ್ಲಿ, ಆಡಳಿತಾರೂಢ ಪಕ್ಷವು ಹೊಸ ಕಾಲದ ರಾಜಕೀಯ ವಾಸ್ತವಗಳನ್ನು ಪರಿಗಣಿಸಿಕೊಂಡು ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸಲು ಕೆಲಸ ಮಾಡಬೇಕೆಂದು ಒತ್ತಾಯಿಸಿದರು. ಅವರು ದುಡಿಯುವ ವರ್ಗದ ಲಕ್ಷಾಂತರ ಜನರ ಸಂಕಷ್ಟಗಳಿಗೆ ಧ್ವನಿಯೆತ್ತಲು ಮಾತ್ರವಲ್ಲ, ಚಳುವಳಿಯ ಧ್ವನಿಯನ್ನು ಮೊಳಗಿಸಲೂ ಸಂಸತ್ತನ್ನು ಬಳಸಿಕೊಂಡರು. ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯುತ್ತಲೇ, ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ, ಅಗತ್ಯದ ರಕ್ಷಣೆ ಹಾಗೂ ಜನಾಂಗೀಯ ಮತ್ತು ಧಾರ್ಮಿಕ ಕಲೆ, ಸಂಸ್ಕೃತಿ ಮೊದಲಾದವುಗಳ ಅಭಿವೃದ್ಧಿಗೆ ದಾರಿಗಳನ್ನು ಮಾಡಬೇಕು ಎಂದು ಒತ್ತಿ ಹೇಳುತ್ತಿದ್ದರು.
ಸಾಹಿತ್ಯ ಕೆಲಸ ಮತ್ತು ಕೊಡುಗೆ
ಹೋರಾಟಗಾರನಾಗಿ ಪ್ರಸಿದ್ಧರಾದರೂ ಕೂಡ, ಡಾಂಗೆ ಒಬ್ಬ ಗಂಭೀರ ಬುದ್ಧಿಜೀವಿಯಾಗಿದ್ದರು. ಸಾಹಿತ್ಯ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿಕೊಂಡಿದ್ದರು. ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿದ್ದರು. ಸಂಸ್ಕೃತವನ್ನು ನಿರರ್ಗಳವಾಗಿ ಬಲ್ಲವರಾಗಿದ್ದ ಅವರು ವೇದಗಳನ್ನು ಕಲಿತುಕೊಂಡಿದ್ದರು. ಕಾಳಿದಾಸ, ತುಕಾರಾಮ, ಕಬೀರ, ಶೇಕ್ಸ್‌ಪಿಯರ್, ಫೈಜ್ ಮತ್ತು ಮಖ್ದೂಮ್ ಮೊದಲಾದವರ ಕುರಿತು ಚರ್ಚಿಸಬಲ್ಲವರಾಗಿದ್ದರು.
ಶಾಂತಿ, ಪ್ರಜಾಪ್ರಭುತ್ವ ಮತ್ತು ಇಂಡೋ-ಸೋವಿಯತ್ ಸಂಬಂಧಕ್ಕಾಗಿ ಅವರು ನೀಡಿದ ಕೊಡುಗೆಗಳನ್ನು ಗುರುತಿಸಿ 1974 ರಲ್ಲಿ ಸೋವಿಯತ್ ಒಕ್ಕೂಟ ತನ್ನ ಅತ್ಯುನ್ನತ ನಾಗರಿಕ ಗೌರವವಾದ “ಆರ್ಡರ್ ಆಫ್ ಲೆನಿನ್” ನೀಡಿ ಗೌರವಿಸಿತು.
ಡಾಂಗೆಯವರ 90ನೇ ಹುಟ್ಟುಹಬ್ಬದಂದು ರಾಷ್ಟ್ರಪತಿ ಆರ್. ವೆಂಕಟರಾಮನ್ ಹೀಗೆ ಹೇಳಿದರು, “ವಾಸ್ತವದಲ್ಲಿ ನಾವು ಅವರನ್ನು ಗೌರವಿಸುವ ಮೂಲಕ, ನವೋತ್ಥಾನ ಭಾರತದ ಪ್ರಮುಖ ಲಕ್ಷಣವನ್ನು ಗೌರವಿಸುತ್ತಿದ್ದೇವೆ – ಭಾರತದ ವಿಮೋಚನಾ ಚಳುವಳಿ ಮತ್ತು ಕಾರ್ಮಿಕ ಚಳುವಳಿಯ ನಡುವಿನ ಸೃಜನಶೀಲ ಸಂಯೋಜನೆಯದು. ಶ್ರೀಯುತ ಡಾಂಗೆ, ಅದರ ಸಾಕಾರ ರೂಪವಾಗಿದ್ದರು.”
ಡಾಂಗೆಯವರು ತನ್ನದೇ ರಾಜಕೀಯ ತತ್ವಗಳನ್ನು ನಂಬಿಕೊಂಡಿದ್ದ ಉಷಾತಾಯ್ ಎಂಬ ವಿಧವೆಯನ್ನು ವಿವಾಹವಾಗಿದ್ದರು.
1991 ಮೇ 22 ರಂದು ತನ್ನ 91ನೇ ವಯಸ್ಸಿನಲ್ಲಿ ಡಾಂಗೆ ನಿಧನರಾಗುತ್ತಾರೆ. ಶ್ರದ್ಧಾಂಜಲಿ ಸಲ್ಲಿಸುತ್ತಾ ವೆಂಕಟರಾಮನ್ ಹೀಗೆ ಹೇಳಿದರು, “ಡಾಂಗೆ ಒಬ್ಬ ನಿರ್ಭೀತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿದ್ದರು. ಆಧುನಿಕ ಭಾರತದ ಇತಿಹಾಸದಲ್ಲಿ ಅವರನ್ನು ಟ್ರೇಡ್ ಯೂನಿಯನ್ ಚಳುವಳಿಯ ಮೊದಲಿಗರೆಂದು ಸ್ಮರಿಸಲಾಗುತ್ತದೆ. ಕಾರ್ಮಿಕ ವರ್ಗ ಮತ್ತು ಹಿಂದುಳಿದವರ ಆಶೋತ್ತರಗಳಿಗೆ ಅವರ ಹೆಸರು ಸಮಾನಾರ್ಥಕವಾಗಿ ಬಳಕೆಯಾಗಲಿದೆ.”
ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.
