Tuesday, July 29, 2025

ಸತ್ಯ | ನ್ಯಾಯ |ಧರ್ಮ

ಧರ್ಮಸ್ಥಳ ವಿರುದ್ಧದ ಹೋರಾಟದಲ್ಲಿ ಕಮ್ಯೂನಿಷ್ಟರು – ಆರ್‌ಎಸ್‌ಎಸ್ : ಆರ್ ಅಶೋಕ್ ತಿಳಿದುಕೊಳ್ಳಬೇಕಾದ ಸತ್ಯಗಳು

“ಧರ್ಮಸ್ಥಳ ಪ್ರಕರಣದ ಹಿಂದೆ ಕಮ್ಯೂನಿಷ್ಟರು ಇದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ರಾಜಕಾರಣದ ಪೂರ್ವಸೂರಿ ಗೊತ್ತಿಲ್ಲದ ವ್ಯಕ್ತಿ ರಾಜಕಾರಣಿಯಾದರೆ ಈ ರೀತಿ ಹೇಳಿಕೆಗಳನ್ನು ನೀಡುತ್ತಾರೆ..” ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ

ಧರ್ಮಸ್ಥಳದಲ್ಲಿ ಎರಡು ಬ್ರಾಹ್ಮಣ ಹುಡುಗರ ಶವಗಳನ್ನು ಹೂತಿಟ್ಟ ಬಗ್ಗೆ ವಿಧಾನಸಭೆಯಲ್ಲಿ ಮೊದಲ ಬಾರಿ 31.08.1983 ಚರ್ಚೆಯಾಗುತ್ತದೆ. ಈ ಚರ್ಚೆಯನ್ನು ತಾರಕಕ್ಕೇರಿಸುವುದು, ವಿಚಾರಣೆಗೆ ಆಗ್ರಹಿಸಿರುವುದು ಬೆಳ್ತಂಗಡಿಯ ಆಗಿನ ಬಿಜೆಪಿ ಶಾಸಕ ವಸಂತ ಬಂಗೇರ. ಇದು ವಸಂತ ಬಂಗೇರರವರ ವೈಯುಕ್ತಿಕ ನಿಲುವಲ್ಲ. ಯಾಕೆಂದರೆ,  1983 ರ ಚುನಾವಣೆಯಲ್ಲಿ ಬಿಜೆಪಿ 18 ಶಾಸಕ ಸ್ಥಾನವನ್ನು ಹೊಂದಿತ್ತು. 18 ಶಾಸಕ ಸ್ಥಾನವನ್ನು ಹೊಂದಿದ್ದ ಬಿಜೆಪಿ ಪಕ್ಷವು ಧರ್ಮಸ್ಥಳದಲ್ಲಿ ಬ್ರಾಹ್ಮಣ ಯುವಕರ ಶವವನ್ನು ಹೂತಿಟ್ಟ ಪ್ರಕರಣದ ಬಗ್ಗೆ ಚರ್ಚೆ ನಡೆಸುತ್ತದೆ. ಹಾಗಿದ್ದರೆ 1983 ರ ಬಿಜೆಪಿ ಪಕ್ಷವನ್ನು ಮುಸ್ಲೀಮರು, ಕಮ್ಯೂನಿಷ್ಟರು ಮುನ್ನಡೆಸುತ್ತಿದ್ದರೆ?

1986 ರಲ್ಲಿ ಪದ್ಮಲತಾ ಕೊಲೆ ನಡೆಯಿತು. ಕಮ್ಯೂನಿಷ್ಟ್ ಮುಖಂಡ ಎಂ ಕೆ ದೇವಾನಂದ ಅವರ ಮಗಳು ಪದ್ಮಲತಾ ರನ್ನು ಕೊಲೆ ಮಾಡಿದಾಗ ಕಮ್ಯೂನಿಷ್ಟರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಆಗ ಬೆಳ್ತಂಗಡಿಯಲ್ಲಿದ್ದದ್ದು ಬಿಜೆಪಿಯ ಶಾಸಕ ವಸಂತ ಬಂಗೇರ! 1985 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಮತ್ತು ಶಿಕಾರಿಪುರಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು. ವಿಧಾನಸಭೆಯಲ್ಲಿ ಬಿಜೆಪಿಯನ್ನು ಬಿ ಎಸ್ ಯಡಿಯೂರಪ್ಪ ಮತ್ತು ವಸಂತ ಬಂಗೇರ ಮಾತ್ರ ಪ್ರತಿನಿಧಿಸುತ್ತಿದ್ದರು. ಇದ್ದ ಇಬ್ಬರು ಬಿಜೆಪಿ ಶಾಸಕರ ಪೈಕಿ ಒರ್ವ ಬಿಜೆಪಿ ಶಾಸಕರಿಗೆ ಧರ್ಮಸ್ಥಳದ  ಪದ್ಮಲತಾ ಕೊಲೆ ಪ್ರಕರಣವೇ ‘ಅಧ್ಯತೆಯ ವಿಷಯ’ವಾಗಿತ್ತು. 1986 ರಲ್ಲಿ ಕರ್ನಾಟಕದಲ್ಲಿ ನಡೆದ ಕೋಮುಗಲಭೆಯಲ್ಲಿ ಪೊಲೀಸರ ಗುಂಡಿಗೆ 11 ಮಂದಿ ಬಲಿಯಾಗಿದ್ದರು. ಆದರೆ ಈ ಬಗ್ಗೆ ಮಾತನಾಡಬೇಕಾದ ಇದ್ದ ಇಬ್ಬರು ಬಿಜೆಪಿ ಶಾಸಕರ ಪೈಕಿ ಒರ್ವ ಬಿಜೆಪಿ ಶಾಸಕನಿಗೆ ಧರ್ಮಸ್ಥಳ ಪದ್ಮಲತಾ ಕೊಲೆ ಪ್ರಕರಣವೇ ಮುಖ್ಯವಾಗಿತ್ತು! ಬಿಜೆಪಿಗೆ ಆಪ್ತ ವಿಷಯವಾಗಿರುವ ಕೋಮುಗಲಭೆ/ 11 ಸಾವಿಗಿಂತಲೂ ಧರ್ಮಸ್ಥಳ ವಿಷಯದ ಚರ್ಚೆಯೇ ಬಿಜೆಪಿಗೆ ಮುಖ್ಯವಾಗಿದ್ದು ಹೇಗೆ ? ಹಾಗಿದ್ದರೆ ಆಗ ಬಿಜೆಪಿಯನ್ನು ಮುಸ್ಲೀಮರು ಮತ್ತು ಕಮ್ಯೂನಿಷ್ಟರು ಮುನ್ನಡೆಸುತ್ತಿದ್ದರೇ?

80 ರ ದಶಕದಿಂದಲೂ ಧರ್ಮಸ್ಥಳದ ಕೊಲೆ, ಅತ್ಯಾಚಾರ, ದೌರ್ಜನ್ಯ, ಅಕ್ರಮಗಳ ಬಗ್ಗೆ ಕಮ್ಯೂನಿಷ್ಟರು ಹೋರಾಡುತ್ತಿದ್ದಾರೆ.  ಧರ್ಮಸ್ಥಳದಲ್ಲಿ ಚುನಾವಣೆಯೇ ನಡೆಯುವಂತಿಲ್ಲ ಎಂಬ ಫ್ಯೂಡಲ್, ಅಪ್ರಜಾಸತ್ತಾತ್ಮಕ ನಡೆಯನ್ನು ನಿಲ್ಲಿಸುವ ಹೋರಾಟದಲ್ಲಿ ಕಮ್ಯೂನಿಷ್ಟರು ತನ್ನ ಮನೆಯ ಮಗಳನ್ನೇ ಬಲಿ ಕೊಡಬೇಕಾಯಿತು. ‘ನಾಮಪತ್ರ ವಾಪಸ್ ಪಡೆಯಿರಿ, ಮಗಳು ವಾಪಸ್ ಬರ್ತಾಳೆ’ ಎಂದು ಸಂದೇಶ ಕಳುಹಿಸಿದರೂ ಕಮ್ಯೂನಿಷ್ಟ್ ಮುಖಂಡ ಎಂ ಕೆ ದೇವಾನಂದರು ನಾಮಪತ್ರ ವಾಪಸ್ ಪಡೆಯಲಿಲ್ಲ. ಸಿದ್ದಾಂತ ಮತ್ತು ವೈಯಕ್ತಿಕ ಬದುಕಿನ ಆಯ್ಮೆಯ ಪ್ರಶ್ನೆ ಬಂದಾಗ ಸಿದ್ದಾಂತವನ್ನು ಆಯ್ಕೆ ಮಾಡಿಕೊಂಡರು. ಇಡೀ ಕಮ್ಯುನಿಷ್ಟ್ ಚಳವಳಿ ಎಂ ಕೆ ದೇವಾನಂದರ ಜೊತೆ ನಿಂತಿತ್ತು. ರಾಜ್ಯವ್ಯಾಪಿ ಚಳವಳಿ ನಡೆಯಿತು. ಇಡೀ ಚಳವಳಿ ನಡೆದಿದ್ದು ಧರ್ಮಸ್ಥಳದ ದೇವಸ್ಥಾನದ ವಿರುದ್ದವಲ್ಲ, ಬದಲಾಗಿ ಅಲ್ಲಿನ ಫ್ಯೂಡಲ್/ಜಮೀನ್ದಾರಿ ದೌರ್ಜನ್ಯದ ವಿರುದ್ದ!

ಒಂದು ಕಡೆ ಕಮ್ಯುನಿಷ್ಟರು ಧರ್ಮಸ್ಥಳದ ಫ್ಯೂಡಲ್ ವ್ಯವಸ್ಥೆ ವಿರುದ್ದ ಹೋರಾಟ ಮಾಡುತ್ತಿದ್ದರೆ, ಮತ್ತೊಂದೆಡೆ ಆರ್ ಎಸ್ ಎಸ್ ಸೂಚನೆಯಂತೆ ಬಿಜೆಪಿ ಕೂಡಾ ಧರ್ಮಸ್ಥಳದ ವಿರುದ್ದ ಹೋರಾಟ ಮಾಡುತ್ತಿತ್ತು. ಬಿಜೆಪಿಯ ಅಜೆಂಡಾ ಇದ್ದಿದ್ದು ಅಲ್ಪಸಂಖ್ಯಾತ ಸಮುದಾಯದಿಂದ ಧರ್ಮಸ್ಥಳ ದೇವಸ್ಥಾನವನ್ನು ಹಿಂದೂ ಸಮುದಾಯ ಕಸಿದುಕೊಳ್ಳಬೇಕು ಎಂಬುದೇ ಆಗಿತ್ತು. ಬಿಜೆಪಿಗೆ ಧರ್ಮಸ್ಥಳದಲ್ಲಿ ನಡೆಯುವ ದೌರ್ಜನ್ಯಗಳು ದೇವಸ್ಥಾನ ಕಸಿಯುವ ಅಸ್ತ್ರವಾಗಿದ್ದವು.

ಇದೇ ಸಂದರ್ಭದಲ್ಲಿ ಅಂದರೆ, 1986 ರ ಅವಧಿಯಲ್ಲಿ ಗುರುವಾಯನಕೆರೆಯ ನಾಗರಿಕಾ ಸೇವಾ ಟ್ರಸ್ಟ್ ನ ಸೋಮನಾಥ ನಾಯಕ್ ಮತ್ತು ತಂಡ ಧರ್ಮಸ್ಥಳದ ವಿರುದ್ದ ಹೋರಾಟ ಶುರು ಮಾಡಿತ್ತು. ಅದು ನೇರವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ವಿರುದ್ದ ನಡೆಯುತ್ತಿದ್ದ ಹೋರಾಟವಾಗಿತ್ತು. ಸೋಮನಾಥ ನಾಯಕರು ಧರ್ಮಸ್ಥಳದ ವಿಚಾರವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಜೊತೆ ನೇರ ಸಂಪರ್ಕದಲ್ಲಿದ್ದರು. ಧರ್ಮಸ್ಥಳದ ಹೆಗ್ಗಡೆಯವರ ವಿರುದ್ದದ ಹೋರಾಟದಲ್ಲಿ ಸೋಮನಾಥ ನಾಯಕರು ಜೈಲಿಗೆ ಹೋಗಿ ಬಂದಾಗ, ಸೋಮನಾಥ ನಾಯಕರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು ಬಂದು ಸನ್ಮಾನ ಮಾಡಿದ್ದರು.

ಸೌಜನ್ಯ ಕೊಲೆ ಅತ್ಯಾಚಾರ ನಡೆದಾಗ ಮೊದಲು ಧ್ವನಿ ಎತ್ತಿದ್ದು, ಹೋರಾಟ ಕೈಗೆತ್ತಿಕೊಂಡಿದ್ದು ಎಡಪಂಥೀಯರು. ಮುನೀರ್ ಕಾಟಿಪಳ್ಳ, ಬಿ ಎಂ ಭಟ್, ಶೇಖರ್ ಲಾಯಿಲ ಸೇರಿದಂತೆ ಮುಸ್ಲಿಂ, ಬ್ರಾಹ್ಮಣ, ದಲಿತ ಸಮುದಾಯದಿಂದ ಬಂದ ಕನ್ಯೂನಿಷ್ಟ್ ಹೋರಾಟಗಾರರು ಸೌಜನ್ಯ ನ್ಯಾಯಕ್ಕಾಗಿ ಜನರನ್ನು ಬಡಿದೆಬ್ಬಿಸಿದರು. ಆಗ ಆರ್ ಎಸ್ ಎಸ್ ನಲ್ಲಿ ಸಕ್ರೀಯವಾಗಿದ್ದ, ಹಿಂದೂ ಜಾಗರಣಾ ವೇದಿಕೆಯ ನಾಯಕ ಮಹೇಶ್ ಶೆಟ್ಟಿ ತಿಮರೋಡಿಯವರು ಸೌಜನ್ಯ ಹೋರಾಟಕ್ಕೆ ಧುಮುಕಿದರು. ಮಹೇಶ್ ಶೆಟ್ಟಿ ತಿಮರೋಡಿಯವರ ಹಿಂದೂ ಜಾಗರಣಾ ವೇದಿಕೆಯನ್ನು ಕಮ್ಯೂನಿಷ್ಟರು, ಮುಸ್ಲೀಮರು ನಡೆಸುತ್ತಿದ್ದಾರೆಯೇ ? ಆರ್ ಎಸ್ ಎಸ್ ನ ಒಂದು ಗುಂಪು ವಿರೇಂದ್ರ ಹೆಗ್ಗಡೆಯವರ ವಿರುದ್ದವೂ, ಇನ್ನೊಂದು ಗುಂಪು ವಿರೇಂದ್ರ ಹೆಗ್ಗಡೆಯ ಪರವೂ ಇರುವುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಆರ್ ಎಸ್ ಎಸ್ ನ ಈ ಕಾಟದಿಂದ ತಪ್ಪಿಸಿಕೊಳ್ಳಲೆಂದೇ ವಿರೇಂದ್ರ ಹೆಗ್ಗಡೆಯವರು ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಲು, ಬಿಜೆಪಿಯ ರಾಜ್ಯಸಭಾ ಸದಸ್ಯರಾಗಲು ಒಪ್ಪಿಕೊಂಡರು. ಆದರೂ ಆರ್ ಎಸ್ಎಸ್ ಗುಂಪು ಹೆಗ್ಗಡೆ ವಿರುದ್ಧದ ಹೋರಾಟವನ್ನು ಬೇರೆ ಬೇರೆ ಹೆಸರುಗಳಲ್ಲಿ ಈಗಲೂ ಚಾಲ್ತಿಯಲ್ಲಿಟ್ಟಿದೆ. ಈ ಹೋರಾಟದಲ್ಲಿ ಯಾರೇ ಗೆದ್ದರೂ ಅದರ ಲಾಭ ಆರ್ ಎಸ್ ಎಸ್/ ಹಿಂದುತ್ವಕ್ಕೆ ಆಗಬೇಕು ಎಂಬ ಮಾಸ್ಟರ್ ಪ್ಲ್ಯಾನ್ ಇದರ ಹಿಂದಿದೆ.

ಎಡಪಂಥೀಯರು 1986 ರಲ್ಲಿ ಬಿಜೆಪಿಯ ವಸಂತ ಬಂಗೇರ ಜತೆ ಸೇರದೆಯೇ ಪ್ರತ್ಯೇಕ ಬೀದಿ ಹೋರಾಟ ನಡೆಸಿ ಪದ್ಮಲತಾ  ಕೊಲೆ ಪ್ರಕರಣವನ್ನು ಸಿಒಡಿಗೆ ವಹಿಸುವಂತೆ ನೋಡಿಕೊಂಡರು. ಆ ಅವಧಿಯಲ್ಲಿ ಸಿಪಿಐಎಂ ಪಕ್ಷದ ಹಲವು ಶಾಸಕರು ವಿಧಾನಸಭೆಯಲ್ಲಿದ್ದರು. ಹಾಗಾಗಿ ಸಿಒಡಿಗೆ ವಹಿಸಲು ಸಾಧ್ಯವಾಯಿತು. 2012 ರಲ್ಲೂ ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೋರಾಟ ನಡೆಸಿದ್ದು ಸಿಪಿಐಎಂ ಪಕ್ಷ. ಸಿಪಿಐಎಂನ ನಾಯಕ ಪ್ರಕಾಶ್ ಕಾರಟ್ ಮತ್ತು ಶ್ರೀರಾಮ ರೆಡ್ಡಿ ಸೌಜನ್ಯ ಮನೆಗೆ ಭೇಟಿ ನೀಡಿದ್ದು ಆಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಿದ್ದರಿಂದ ಕೇಂದ್ರದಲ್ಲಿ ಸಿಪಿಐಎಂ ಪಕ್ಷ ಪ್ರಭಾವಶಾಲಿಯಾಗಿತ್ತು.‌ ಹಾಗಾಗಿ ಯಾವುದೇ ಆಕ್ಷೇಪಣೆಯಿಲ್ಲದೇ ಸಿಬಿಐ ಪ್ರಕರಣವನ್ನು ವಹಿಸಿಕೊಂಡಿತ್ತು. 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಕಿ ಬಂದಾಗ ಶ್ರೀರಾಮರೆಡ್ಡಿ ಸೇರಿದಂತೆ ಸಿಎಂ ಆಪ್ತರಾಗಿದ್ದ ಎಡ ಹೋರಾಟಗಾರರು, ಚಿಂತಕರು ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಡ ಹೇರಿ ಸಫಲರಾಗಿದ್ದರು. 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು ಸಿಬಿಐ ತನಿಖೆ ದಾರಿ ತಪ್ಪಿತ್ತು. ಹಾಗಾಗಿ ಧರ್ಮಸ್ಥಳದ ಅತ್ಯಾಚಾರ, ಕೊಲೆ, ನಾಪತ್ತೆ, ದೌರ್ಜನ್ಯ, ಅಕ್ರಮಗಳ ವಿರುದ್ದದ ಹೋರಾಟದ ನಾಯಕತ್ವ ಕಮ್ಯೂನಿಷ್ಟರದ್ದೇ ಆಗಿತ್ತು ಮತ್ತು ಆಗಿದೆ. ಅದರಲ್ಲಿ ಹಿಂದೆ ಮುಂದೆ ಎಂಬ ಪ್ರಶ್ನೆಯೇ ಇಲ್ಲ.

ಇನ್ನೂ ಸರಳವಾಗಿ ಅರ್ಥವಾಗಬೇಕಾದರೆ ವಿಶ್ವ ಸುಂದರಿ ಸ್ಪರ್ಧೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ವಿಶ್ವ ಸುಂದರಿ ಸ್ವರ್ಧೆ ಭಾರತದಲ್ಲಿ ಮೊದಲ ಬಾರಿ ನಡೆದಾಗ ಎಡಪಂಥೀಯರು ಮತ್ತು ಆರ್ ಎಸ್ಎಸ್ ಪ್ರತ್ಯೇಕವಾಗಿ ಹೋರಾಟ ನಡೆಸಿದ್ದರು. ಎಡಪಂಥೀಯರು ವಿಶ್ವ ಸುಂದರಿ ಸ್ಪರ್ಧೆಯನ್ನು ಸಾಮ್ರಾಜ್ಯಶಾಹಿ ಬಂಡವಾಳವಾದದ ನೆಲೆಯಲ್ಲಿ ವಿರೋಧಿಸಿದರೆ, ಆರ್ ಎಸ್ ಎಸ್ ಹಿಂದುತ್ವ, ಹಿಂದೂ ಸಂಸ್ಕೃತಿ ಎಂದು ಮಹಿಳಾ ವಿರೋಧಿ ದೃಷ್ಟಿಕೊನದಲ್ಲಿ ವಿರೋಧಿಸಿತ್ತು. ಧರ್ಮಸ್ಥಳದ ಹೋರಾಟವೂ ಇಷ್ಟೇ ಸ್ಪಷ್ಟವಾಗಿದೆ. ಎಡಪಂಥೀಯರು, ದಲಿತರು ಧರ್ಮಸ್ಥಳದ ಫ್ಯೂಡಲ್, ಅಪ್ರಜಾಸತ್ತಾತ್ಮಕ ವ್ಯವಸ್ಥೆ, ಮಹಿಳಾ ದೌರ್ಜನ್ಯ, ಅತ್ಯಾಚಾರ, ಕೊಲೆ, ದಲಿತ ದೌರ್ಜನ್ಯ, ಭೂಕಬಳಿಕೆಗಳನ್ನು ಮಾತ್ರ ವಿರೋಧಿಸುತ್ತಾರೆ. ಈಗ ಆರ್ ಅಶೋಕ್ ಅವರು ಉತ್ತರಿಸಬೇಕಿರುವುದು, ಕೇವಲ 2 ಶಾಸಕರ ಬಲ ಇದ್ದ ದಿನದಿಂದ ಹಿಡಿದು ಇಂದಿನವೆರೆಗೂ ಬಿಜೆಪಿ ಮತ್ತು ಆರ್ ಎಸ್ ಎಸ್ ನ ಒಂದು ಗುಂಪು ನಿಮ್ಮದೇ ಸಿದ್ದಾಂತದ ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ದ ಹೋರಾಟ ನಡೆಸುತ್ತಿರುವುದು ಏಕೆ ? ಜೈನರ ಆಡಳಿತದಲ್ಲಿರುವ ಹಿಂದೂ ದೇವಾಲಯಕ್ಕಾಗಿ ತಾನೆ ? ಧರ್ಮಸ್ಥಳ ಹಿಂದೂ ದೇವಾಲಯ ಎನ್ನುವುದಕ್ಕೂ ಮೊದಲು ಅದೊಂದು ಬೌದ್ಧವಿಹಾರ, ದಲಿತ ಸ್ಥಾಪಿಸಿದ ದೇವಸ್ಥಾನ ಎನ್ನುವುದು ಎಡಪಂಥೀಯರ ನಿಲುವು. ಆರ್ ಎಸ್ ಎಸ್ ಗೆ ಹೆಗ್ಗಡೆಯೂ ಬೇಕು, ಅವರ ದೇವಸ್ಥಾನವೂ ತನ್ನ ಕೈವಶ ಆಗಬೇಕು. ಅದಕ್ಕಾಗಿ ಹಿಂಬದಿಯ ಪಿತೂರಿ ಹೋರಾಟವನ್ನು ಮುನ್ನಡೆಸುತ್ತಿದೆ. ಕಮ್ಯೂನಿಷ್ಟರು ಹೋರಾಟದಿಂದ ಹಿಂದೆ ಸರಿದರೆ ಹೋರಾಟ ಸಂಪೂರ್ಣ ಆರ್ ಎಸ್ ಎಸ್ ಹತೋಟಿಗೆ ಬರುತ್ತದೆ. ಫ್ಯೂಡಲ್, ಕೊಲೆ, ಅತ್ಯಾಚಾರಗಳನ್ನು ಬದಿಗೆ ಸರಿಸಿ ದೇವಸ್ಥಾನ ವಶ ಮಾಡುವ ಆರ್ ಎಸ್ ಎಸ್ ಏಕೈಕ ಹುನ್ನಾರಕ್ಕೆ ಅಡ್ಡಿಯಾಗಿರುವುದೇ ಈ ನೆಲದ ಕಮ್ಯೂನಿಷ್ಟರು ಮತ್ತು ದಲಿತರು!

Related Articles

ಇತ್ತೀಚಿನ ಸುದ್ದಿಗಳು

You cannot copy content of this page