Saturday, June 15, 2024

ಸತ್ಯ | ನ್ಯಾಯ |ಧರ್ಮ

ಮತೀಯ ದುಷ್ಕರ್ಮಿಗಳಿಂದ ಕೊಲೆಯಾದ ಮಸೂದ್, ಫಾಸಿಲ್, ಜಲೀಲ್ ಮತ್ತು ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ ಘೋಷಣೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೋಮು ಗಲಭೆ ಮತ್ತು ಸಂಘಪರಿವಾರದ ಕಾರ್ಯಕರ್ತರಿಂದ ಕೊಲೆಗೀಡಾದ ಮಸೂದ್, ಫಾಜಿಲ್, ಜಲೀಲ್ ಹಾಗೂ ದೀಪಕ್ ರಾವ್ ಕುಟುಂಬಕ್ಕೆ ಸಿದ್ದರಾಮಯ್ಯ ಸರ್ಕಾರ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಕಳೆದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಕೋಮು ಗಲಭೆಯಲ್ಲಿ ಮೃತಪಟ್ಟ ಸಂಘ ಪರಿವಾರದ ಹಿನ್ನೆಲೆಯ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಮಾತ್ರ ಪರಿಹಾರ ನೀಡಿ, ಇದೇ ಮಾದರಿಯಲ್ಲಿ ಕೊಲೆಯಾದ ಮಸೂದ್, ಫಾಜಿಲ್ ‌ಹಾಗೂ ಜಲೀಲ್ ಕುಟುಂಬವನ್ನು ನಿರ್ಲಕ್ಷಿಸಿತ್ತು. ಆ ಸಂದರ್ಭದಲ್ಲಿ ಜನಪರ ಸಂಘಟನೆಗಳ ಕಡೆಯಿಂದ ಕನಿಷ್ಟ ಕೊಲೆಯಾದ ಮುಸ್ಲಿಂ ಯುವಕರ ಮನೆಗಳಿಗೆ ಭೇಟಿ ಆದರೂ ಮಾಡಬೇಕೆಂಬ ಒತ್ತಾಯವಿದ್ದರೂ ಬಸವರಾಜ ಬೊಮ್ಮಾಯಿ ಅದಕ್ಕೆ ಕುಂಟು ನೆಪ ಹೇಳಿ ತಪ್ಪಿಸಿಕೊಂಡಿದ್ದರು.

ಇನ್ನು ಪರಿಹಾರದ ವಿತರಣೆ ಸಂದರ್ಭದಲ್ಲಿ ಕೂಡಾ ಬಿಜೆಪಿ ಸರ್ಕಾರ ಸಂಪೂರ್ಣ ತಾರತಮ್ಯ ಮೆರೆದಿದ್ದು ಸ್ಪಷ್ಟವಾಗಿ ಗೋಚರವಾಗಿತ್ತು. ದಕ್ಷಿಣ ಕನ್ನಡ ಭಾಗದ ಪ್ರವೀಣ್ ನೆಟ್ಟಾರು, ಶಿವಮೊಗ್ಗದ ಹರ್ಷ ರಂತಹ ಹಿಂದೂ ಸಂಘಟನೆ ಹಿನ್ನೆಲೆಯ ಕುಟುಂಬಗಳಿಗೆ ಮಾತ್ರ ಲಕ್ಷಗಟ್ಟಲೆ ಪರಿಹಾರ ನೀಡಿತ್ತು.

ಆ ಸಂದರ್ಭದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಮಾಡಿದ ತಾರತಮ್ಯದ ವಿರುದ್ಧ ಗುಡುಗಿದ್ದ ಕಾಂಗ್ರೆಸ್ ಪಕ್ಷ ಅಂದೇ ನ್ಯಾಯ ಎಲ್ಲರಿಗೂ ಸರಿಸಮನಾಗಿ ಇರಬೇಕು.. ಪರಿಹಾರ ವಿತರಣೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಮಾಡಬಾರದು ಎಂದು ಎಚ್ಚರಿಸಿತ್ತು. ಹಾಗೆಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿರ್ಲಕ್ಷ್ಯಕ್ಕೆ ಒಳಗಾದ ಇತರೆ ಯುವಕರ ಕುಟುಂಬಕ್ಕೂ ಪರಿಹಾರ ನೀಡುತ್ತೇವೆ ಎಂಬ ಭರವಸೆ ನೀಡಿತ್ತು.

ಸಧ್ಯ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಿಂಗಳ ಆಸುಪಾಸಿನಲ್ಲೇ ಈಗ ಸಂಘಪರಿವಾರದ ಹೊರತಾಗಿ ಕೋಮು ಗಲಭೆಯಲ್ಲಿ ಮೃತಪಟ್ಟ ಯುವಕರ ಕುಟುಂಬಕ್ಕೆ ಪರಿಹಾರ ವಿತರಣೆಯ ಘೋಷಣೆ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳರವರು ಸರ್ಕಾರದ ನಿರ್ಧಾರಕ್ಕೆ ಧನ್ಯವಾದ ಸೂಚಿಸಿ, ಅದೇ ರೀತಿ ಇತ್ತೀಚೆಗೆ ಸಂಘ ಪರಿವಾರದ ಹಿನ್ನೆಲೆಯವರಿಂದ ಮೃತಪಟ್ಟ ನರಗುಂದದ ಸಮೀರ್ ಹಾಗೂ ಮಂಡ್ಯದ ಇದ್ರೀಷ್ ಪಾಷ ಕುಟುಂಬಕ್ಕೂ ಪರಿಹಾರ ಸಿಗುವ ಬಗ್ಗೆ ಭರವಸೆ ಮಾತನ್ನಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು