Saturday, April 27, 2024

ಸತ್ಯ | ನ್ಯಾಯ |ಧರ್ಮ

ನೆಂಟರು ಬಂದರೆ ಕೂಳಿಗೆ ಅಕ್ಕಿಯಿಲ್ಲ ನಾತೊಳು ಬತ್ತು ನಂದಲ್ಲ

ಆ ಹೆಣ್ಣು ಮಗಳು “ನಾಡಿನಲ್ಲಿ ದಿನೇ ದಿನೇ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿ ನಿಂತಿದೆ. ಬಡವರು ಬದುಕುವ ಕಾಲ ಮುಗಿಯುತ್ತ ಬಂದಿದೆ” ಎಂದು ಹೇಳುತ್ತಾ ಮಾತು ಮುಗಿಸಿ ಮೌನಕ್ಕಿಳಿದಳು. ಬೆಲೆ ಏರಿಕೆಯಂತಹ ಸಂದರ್ಭದಲ್ಲಿ ನೆಂಟರು ಬಂದರೆ ಕೂಳಿಗೆ ಅಕ್ಕಿಯಿಲ್ಲ ನಾತೊಳು ಬತ್ತು ನಂದಲ್ಲ….ʼ ಎಂಬ ಹಾಡು ನಮಗೆ ಮತ್ತೆ ಮತ್ತೆ ನೆನಪಾಗುತ್ತಿದೆ. – ಕಾಶಿನಾಥ ಮುದ್ದಾಗೋಳ, ಕಲಬುರ್ಗಿ

ನೆಂಟರು ಬಂದರೆ ಕೂಳಿಗೆ ಅಕ್ಕಿಯಿಲ್ಲ ನಾತೊಳು (ಕುಟ್ಟುವ) ಬತ್ತು ನಂದಲ್ಲ….ನಾತೋಳು (ಕುಟ್ಟುವ) ಬತ್ತು ನಂದಲ್ಲ ನೆಂಟರೆ ಹೊತ್ತಿರುವಾಗ ಹೊಳೆಯ ದಾಟಿರಿ… ಎಂದು ಹಾಡಿನ ಮೂಲಕ ತನ್ನ  ನೆಂಟರಿಗೆ ಜನಪದ ತಾಯಿ ತನ್ನ ಬಡತನದ ಬಗೆಯನ್ನ ವಿವರಿಸುತ್ತಾಳೆ. ಇದು ಕರಾವಳಿಯ ಪ್ರದೇಶಗಳಲ್ಲಿ ಹಾಡುವ ಜನಪದ ಹಾಡು. ಅಲ್ಲಿನ ಊಳಿಗಮಾನ್ಯ ವ್ಯವಸ್ಥೆಯ ಕಷ್ಟದ ನೆರಳಲ್ಲಿ ಜೀವನ ಪೂರ್ತಿ ಬಡಿದಾಡಿ ಬದುಕುವ ಶ್ರಮ ಜೀವಿಗಳ ಜೀವನ ಸ್ವರೂಪವನ್ನು ವಿವರಿಸುವ ಈ ಹಾಡು ಅವರ ಬದುಕು, ಜೀವನ ಶೈಲಿ, ಆಹಾರ ಮತ್ತು ಪ್ರಕೃತಿಯನ್ನು ಹೇಳ ಹೊರಡುತ್ತದೆ. ಜನಪದ ಎಂದರೆ ಅದು ಜನರ ಜೀವನದ ಅರ್ಥ ಅವರ ಬದುಕಿನ ಸುತ್ತ ಹೆಣೆದುಕೊಂಡ ಬಿಗಿಯಾದ ಧ್ವನಿ. ತನ್ನ ಬಡತನ, ಹಸಿವು, ಅಲ್ಲಿನ ಉಳಿಗಮಾನ್ಯ ಆಡಳಿತ ಅವರ ಜೀವನದ ದುಸ್ಥಿತಿಯನ್ನು ಈ ಜನಪದ ಹಾಡಿನಲ್ಲಿ ವಿವರಿಸುತ್ತಾ ಹೋಗುತ್ತಾರೆ.

ಜನಪದ ಕೇವಲ ಕಲೆ, ಸಾಹಿತ್ಯ, ಹಾಡುಗಾರಿಕೆ ಅಷ್ಟೇ ಅಲ್ಲದೆ ಅವರವರ ಜೀವನ, ಭಾವನೆ, ಅಭಿವ್ಯಕ್ತಿಯಾಗಿ ಇರುತ್ತದೆ. ಈ ಹಾಡಿನ ಮೂಲಕ ಅವರ ಜೀವನವನ್ನು ನೆಂಟರು-ಬೀಗರ ಮುಂದೆ ಹೇಳಹೊರಟಿದ್ದಾರೆ. ತಮ್ಮ ದುಡಿಮೆಯ ಪ್ರತಿಫಲ ತಮ್ಮ ಬದುಕಿಗೆ ಸಾಲದು, ಮತ್ತೊಬ್ಬರನ್ನು  ಉಪವಾಸ ಕೆಡವುದು ನಮ್ಮಿಂದ ಆಗದು, ನಮ್ಮ ಹಸಿವು ನಮಗೆ ನೀಗಿಸಿಕೊಳ್ಳಲಾಗದು, ನಿಮ್ಮನ್ನ ಹಸಿದ ಹೊಟ್ಟೆಯಿಂದ ನೋಡಲು ನಮ್ಮಿಂದ ಆಗದು, ನೀವು ಬಂದ ದಾರಿಗೆ ನೀವು ಹೊರಡಿ, ನಮ್ಮ ಕಷ್ಟಗಳು ನಮಗೆ ಭಾರ, ನಮ್ಮ ಬಡತನ ನಮಗಿರಲಿ ನಿಮಗೆ ಅದರ ನೆರಳು ಬೀಳುವುದು ಬೇಡ ಎಂದು ಅರ್ಥ ಕೊಡುವ ಈ ಹಾಡು ತುಂಬಾ ಅರ್ಥಪೂರ್ಣವಾದದ್ದು ಮತ್ತು ಅಷ್ಟೇ ನೋವಿನಿಂದ ತುಂಬಿಕೊಂಡದ್ದು.  ಒಂದು ವ್ಯವಸ್ಥೆ ರೂಪಿಸಿದ ಈ ಶ್ರೇಣಿಕೃತ ವರ್ಗ ವ್ಯವಸ್ಥೆ ಯಾವ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ, ಅದರಿಂದಾಗುವ ಪ್ರಭಾವ ಹಾಗೂ ಸಮಾಜವನ್ನು ಅದು ಹೇಗೆ ಕಂಗಾಲಾಗಿಸುತ್ತದೆ ಎನ್ನುವುದನ್ನು ಒಬ್ಬ ದುಡಿಯುವ ಹೆಣ್ಣುಮಗಳು ಇಲ್ಲಿ ಹೇಳುತ್ತಾಳೆ.

“ಹೆಣ್ಣು ಅಬಲೆ, ಬುದ್ಧಿಹೀನಳು, ಹೆಣ್ಣುಮಕ್ಕಳ ಬುದ್ಧಿ ಮೊಣಕಾಲ ಕೆಳಗೆ” ಎನ್ನುವ ಈ ಪುರುಷ ಪ್ರಧಾನ ಸಮಾಜಕ್ಕೆ ಆಕೆ ಕೊಡುವ ಉತ್ತರಗಳು ಈ ಜನಪದ ಸಾಹಿತ್ಯದಲ್ಲಿದೆ ಎಂದರೆ ತಪ್ಪಾಗದು. ನಮ್ಮ ಅಮ್ಮಂದಿರ ಸಾಸಿವೆ ಡಬ್ಬಿಯ ಲೆಕ್ಕಾಚಾರ ಇಲ್ಲಿ ನೆನಪಿಸಿಕೊಳ್ಳಬೇಕು. ಒಂದು ಕುಟುಂಬ ಒಂದು ಸಮಾಜ ಆರೋಗ್ಯವಾಗಿರಬೇಕಾದರೆ ಅಲ್ಲಿ ಹೆಣ್ಣು ಮಕ್ಕಳ ಪಾತ್ರ ಅದೆಷ್ಟು ಎನ್ನುವುದು ಅರ್ಥಮಾಡಿಕೊಳ್ಳಬೇಕು. ಅವಳಿಗಿರುವ ಸಮಾಜ ಜ್ಞಾನ, ಕುಟುಂಬ ಪ್ರಜ್ಞೆ ಮತ್ತು ಜವಾಬ್ದಾರಿಯನ್ನು ನಾವು ಇಲ್ಲಿ ನೋಡಬಹುದು. ಜೊತೆಗೆ ಅಲ್ಲಿನ ಆ ಊಳಿಗಮಾನ್ಯ ವ್ಯವಸ್ಥೆಯು ದುಡಿಯುವ ವರ್ಗದ ಮೇಲೆ ಬೀರಿರುವ ದುಷ್ಪರಿಣಾಮವನ್ನು ಇಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಸೂರ್ಯನ ಒಟ್ಟಿಗೆ ದುಡಿಯುವ ಜನರಿಗೆ ಹೊಟ್ಟೆಗೆ ಕೂಳಿಲ್ಲದ ಪರಿಸ್ಥಿತಿ ಮತ್ತು ಅವರ ಕಷ್ಟದ ಜೀವನದ ನೋವಿನ ಹೈರಾಣುಗಳನ್ನು ಇಲ್ಲಿ ಗಮನಿಸಬಹುದು. ಹಾಡನ್ನು ಮುಗಿಸಿದ ಮೇಲೆ ಕಣ್ಣು ಒದ್ದೆಯಾಗಿಸಿಕೊಂಡು ಆ ಹೆಣ್ಣು ಮಗಳು “ಬೆಲೆ ಏರಿಕೆಯಂತಹ ಸಂದರ್ಭದಲ್ಲಿ ಈ ಹಾಡು ನಮಗೆ ಮತ್ತೆ ನೆನಪಾಗುತ್ತಿದೆ. ನಾಡಿನಲ್ಲಿ ದಿನೇ ದಿನೇ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿ ನಿಂತಿದೆ. ಬಡವರು ಬದುಕುವ ಕಾಲ ಮುಗಿಯುತ್ತ ಬಂದಿದೆ” ಎಂದು ಹೇಳುತ್ತಾ ಮಾತು ಮುಗಿಸಿ ಮೌನಕ್ಕಿಳಿದಳು!

ಹಿಂದಿನ ಆ ಉಳಿಗಮಾನ್ಯ ಪಾಳೆಗಾರಿಕೆ ವ್ಯವಸ್ಥೆಗೆ ಇಂದಿನ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಹೋಲಿಸಿ ನೋಡುವ ಜನರ ಬದುಕು ಯಾವ ಸ್ಥಿತಿ ತಲುಪಿದೆ ಎನ್ನುವುದನ್ನು ಇಲ್ಲಿ ಮನಗಾಣಬೇಕು. ರಾಜಕೀಯ ಉದ್ದೇಶದಿಂದ ಹಾಗೂ ಅಧಿಕಾರದ ಅಮಲಿಗೆ ಬಿದ್ದು ದೇಶದಲ್ಲಿ ಕೆಟ್ಟ ರಾಜಕಾರಣವನ್ನು ನಡೆಸುತ್ತಿರುವ ನಮ್ಮ ಜನಪ್ರತಿನಿಧಿಗಳಿಗೆ ಹಿಡಿದ ಕೈಗನ್ನಡಿಯಂತ್ತಿದೆ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಸಂವಿಧಾನದ ಆಶಯ ಯಶಸ್ವಿಯಾಗಬೇಕು ಅದಕ್ಕೆ ನಾವು ಮಾಡಬೇಕಾದ ಜವಾಬ್ದಾರಿಯುತ ಕರ್ತವ್ಯವನ್ನು ನಾವು ನಿರ್ವಹಿಸಲೇಬೇಕು. ದೇಶ ಕಟ್ಟಲು ನಾವು ಸಹ ಬೇಕು.  ಆಹಾರ ನಮ್ಮ ಮೂಲಭೂತ ಹಕ್ಕು ಅದು ಎಲ್ಲರ ಕೈಗೆ ಸಿಗುವಂತಾಗಲಿ.

ಕಾಶಿನಾಥ ಮುದ್ದಾಗೋಳ

ನಾಗೂರು ಕಲಬುರ್ಗಿ.

ಇದನ್ನೂ ಓದಿ-ಬಡವರ ಬಗ್ಗೆ ಯಾಕಿಷ್ಟು ದ್ವೇಷ?!

Related Articles

ಇತ್ತೀಚಿನ ಸುದ್ದಿಗಳು