Friday, April 26, 2024

ಸತ್ಯ | ನ್ಯಾಯ |ಧರ್ಮ

 ಸ್ಪರ್ಧೆ ಖಚಿತ, ಮೋದಿ ಕಾರ್ಯಕ್ರಮಕ್ಕೂ ಹೋಗಲ್ಲ: ಈಶ್ವರಪ್ಪ ಹಟ

ಶಿವಮೊಗ್ಗ, ಮಾ.18: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ಇಂದು ನಡೆಯಲಿರುವ ಮೋದಿಯವರ ಸಮಾವೇಶಕ್ಕೂ ನಾನು ಹೋಗುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದ ಬೀಳಗಿಯ ರಾಚಟೇಶ್ವರ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಹೋರಾಟ  ಯಡಿಯೂರಪ್ಪನವರ ಕುಟುಂಬ ರಾಜಕಾರಣ ವಿರುದ್ಧ. ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ, ನಳಿನ್ ಕುಮಾರ್ ಕಟೀಲು ಅವರಿಗೆ ಟಿಕೆಟ್ ನೀಡಿಲ್ಲ. ಪ್ರಧಾನಿ ಮೋದಿಯವರು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ವಿರೋಧ ಮಾಡುತ್ತಿರುವವರು. ಆದರೆ ಕರ್ನಾಟಕದಲ್ಲಿ ಬಿ.ಎಸ್ ಯಡಿಯೂರಪ್ಪರ ಪುತ್ರನಿಗೆ ಟಿಕೆಟ್ ನೀಡಿದ್ದಾರೆ ಎಂದು ದೂರಿದರು.

ಇಂದು ಪ್ರಧಾನಿ ನರೇಂದ್ರ ಮೋದಿಯ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ, ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಗೆದ್ದು ನರೇಂದ್ರ ಮೋದಿಯವರ ಕೈ ಬಲಪಡಿಸುತ್ತೇನೆ. ಕೇಂದ್ರದ ನಾಯಕರು ದೂರವಾಣಿ ಸಂಪರ್ಕ ಮಾಡಿದರೂ, ಸ್ಪಷ್ಟ ನಿರ್ಧಾರ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.

ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಅವರು ಈಶ್ವರಪ್ಪ ಅವರ ಮನೆಗೆ ತೆರಳಿ ಒಂದು ಗಂಟೆಗಳ ಕಾಲ ಚರ್ಚಿಸಿ ವಾಪಸ್ ಬಂದಿದ್ದಾರೆ. ದಿಲ್ಲಿಯಿಂದ ಮನವೊಲಿಸುವುದಾದರೆ ಒಲಿಸಲಿ, ನಾನು ಮಾತನಾಡುವುದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಈಗಾಗಲೆ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಜನರೇ ತೀರ್ಮಾನ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಈಶ್ವರಪ್ಪರಿಗೆ ಸಂಘ ಪರಿವಾರದ ಪ್ರಮುಖ ಗೋಪಾಲ್ ಅಯೋಧ್ಯೆಯಿಂದ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಈಶ್ವರಪ್ಪ ಮಾತ್ರ ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ನಾನು ಹಿಂದೆ ಸರಿಯಲ್ಲ ಎಂದಿದ್ದಾರೆ.

ಸಾಕಷ್ಟು ಪ್ರಯತ್ನಗಳ ನಂತರ ರಾಜ್ಯ ಬಿಜೆಪಿ ಮತ್ತು ಹೈಕಮಾಂಡ್ ಈಶ್ವರಪ್ಪ ಮನವೊಲಿಕೆ ಪ್ರಯತ್ನವನ್ನು ಕೈ ಬಿಟ್ಟಿದೆ ಎಂದು ಹೇಳಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು